ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮೃದ್ಧ ಮಳೆ: ಹರಿಯದ ಐಮಂಗಲ ಕೆರೆ ಕೋಡಿ

Last Updated 16 ಸೆಪ್ಟೆಂಬರ್ 2022, 4:05 IST
ಅಕ್ಷರ ಗಾತ್ರ

ಹಿರಿಯೂರು:89 ವರ್ಷಗಳ ನಂತರ ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಕೋಡಿ ಬಿದ್ದಿದೆ. 38 ಕೆರೆಗಳ ಪೈಕಿ 30 ಕೆರೆಗಳು ಕೋಡಿ ಬಿದ್ದಿವೆ. ಆದರೆ ತಾಲ್ಲೂಕಿನ ಐಮಂಗಲ, ಭರಮಗಿರಿ ಕೆರೆಗಳಿಗೆ ಮಾತ್ರ ಕೋಡಿ ಹರಿಯುವ ಭಾಗ್ಯ ಬಂದಿಲ್ಲ.

ಕ್ರಿ.ಶ. 975ರಲ್ಲಿ ನೊಳಂಬ ಅರಸರ ಹರತಿ ವಂಶಸ್ಥರ ಆಳ್ವಿಕೆಗೆ ಒಳಪಟ್ಟಿದ್ದ ಐಮಂಗಲ ಗ್ರಾಮ ಐತಿಹಾಸಿಕವಾಗಿ ಪ್ರಮುಖ ಸ್ಥಳ ಎಂದು ಗುರುತಿಸಲ್ಪಟ್ಟಿದ್ದರೂ, ಅಭಿವೃದ್ಧಿ ಮಾತ್ರ ಶೂನ್ಯ.

ಗ್ರಾಮದ ಎಡ ಭಾಗದಲ್ಲಿ ಸೀಮೆ ಜಾಲಿ ಗಿಡಗಳ ಅಂಗಳದಲ್ಲಿ ಒಂದು ಅಡಿಯಷ್ಟು ನೀರು ನಿಂತಿರುವ ಕೆರೆ ಕಾಣುತ್ತದೆ.

ದೊಡ್ಡ ಕೆರೆ ಎಂದೇ ಕರೆಯುವ 181 ಎಕರೆ ವಿಸ್ತೀರ್ಣದಲ್ಲಿರುವ 200 ವರ್ಷಗಳಷ್ಟು ಹಳೆಯದಾದ ಈ ಕೆರೆಯಲ್ಲಿ ನೀರು ತುಂಬಿದ್ದಾಗ ತೋಟಗಳ ತೆರೆದ ಬಾವಿಗಳಲ್ಲಿ ಸದಾ ತುಂಬಿರುತ್ತಿತ್ತು. 25 ವರ್ಷಗಳಿಂದ ಸರಿಯಾಗಿ ಮಳೆ ಆಗದ ಕಾರಣ ಕೆರೆಯ ಹಿಂಭಾಗದಲ್ಲಿ ಹಚ್ಚ ಹಸುರಿನಿಂದ ಕಂಗೊಳಿಸುತ್ತಿದ್ದ ನೂರಾರು ಎಕರೆ ಅಡಿಕೆ, ತೆಂಗಿನ ತೋಟಗಳು ಕಣ್ಮರೆಯಾಗಿ ತೋಟಗಳಿದ್ದ ಜಾಗದಲ್ಲಿ ಸೀಮೆ ಜಾಲಿ ಗಿಡಗಳು ಬೆಳೆದಿವೆ.

‘45 ವರ್ಷಗಳಲ್ಲಿ ಕೆರೆ ಒಂದೆರಡು ಬಾರಿ ಮಾತ್ರ ತುಂಬಿದೆ. ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ನಿರ್ಮಿಸಿದ್ದ ರಾಜಕಾಲುವೆ, ಉಪಕಾಲುವೆಗಳು ನಿರ್ವಹಣೆಯ ಕೊರತೆಯಿಂದ ಕಾಣದಂತಾಗಿವೆ. ಕೆರೆಯ ತೂಬು ಹಾಳಾಗಿದೆ. ಹೂಳು ತುಂಬಿದ್ದು, ಆಗಾಗ ಬರುವ ಮಳೆಗೆ ಕೆರೆಯಲ್ಲಿ ಸಂಗ್ರಹವಾಗುವ ನೀರು ಕೆಲವೇ ದಿನಗಳಲ್ಲಿ ಇಂಗಿ ಹೋಗುತ್ತದೆ’ ಎನ್ನುತ್ತಾರೆ ತಾಳವಟ್ಟಿಯ ನಿವೃತ್ತ ಮುಖ್ಯಶಿಕ್ಷಕ ಎ. ಅನಂತರೆಡ್ಡಿ.

ಈ ಹೋಬಳಿಯಲ್ಲಿ 600–700 ಅಡಿ ಕೊರೆಸಿದರೂ ಭೂಮಿಯಲ್ಲಿ ನೀರು ಸಿಗುತ್ತಿರಲಿಲ್ಲ. ಸಿಕ್ಕ ನೀರಿನಲ್ಲಿ ಮಿತಿಮೀರಿದ ಫ್ಲೋರೈಡ್ ಅಂಶ ಇರುತ್ತಿತ್ತು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ವಾಣಿವಿಲಾಸ ಜಲಾಶಯದ ನೀರು ಸಿಗಲಿದೆ ಎಂಬ ಆಶಾ ಭಾವನೆಯಲ್ಲಿ ಹೋಬಳಿಯ ಜನರಿದ್ದು. ಶೀಘ್ರ ಕೆರೆ ದುರಸ್ತಿ ಮಾಡಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

ಒಂದು ತಿಂಗಳಲ್ಲಿ ಐಮಂಗಲ ಹೋಬಳಿಯ ಮೇಟಿಕುರ್ಕೆ, ಐಮಂಗಲ ಸಣ್ಣಕೆರೆ, ಹರ್ತಿಕೋಟೆ, ಎಂ.ಡಿ. ಕೋಟೆ, ಸೂರಗೊಂಡನಹಳ್ಳಿ, ತವಂದಿ, ಬಸಪ್ಪನಮಾಳಿಗೆ ಕೆರೆಗಳು ಕೋಡಿ ಬಿದ್ದಿವೆ. ಭರಂಪುರ ಮತ್ತು ಗೌನಹಳ್ಳಿ ಕೆರೆಗಳು ಅರ್ಧಕ್ಕಿಂತ ಹೆಚ್ಚು ಭರ್ತಿಯಾಗಿದ್ದು, ಅಂತರ್ಜಲ ಮಟ್ಟ ಗಣನೀಯವಾಗಿ ವೃದ್ಧಿಯಾಗಿದೆ.

‘ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಂಡಲ್ಲಿ ಚಿತ್ರದುರ್ಗ ಶಾಖಾ ಕಾಲುವೆಯ ಮೂಲಕ ಐಮಂಗಲ ಹೋಬಳಿಯ‌ ಗುಡಿಹಳ್ಳಿ, ಬೀರೇನಹಳ್ಳಿ, ತವಂದಿ, ಭರಂಪುರ, ಎಂ.ಡಿ. ಕೋಟೆ, ಮೇಟಿಕುರ್ಕೆ, ಕಂದಿಕೆರೆ, ಹರ್ತಿಕೋಟೆ, ಅಂಬಲಗೆರೆ, ಹೇಮದಳ, ರಂಗೇನಹಳ್ಳಿ, ಗೌನಹಳ್ಳಿ ಕೆರೆಗಳಿಗೆ ನೀರು ತುಂಬಲಿದೆ. ಅದರಲ್ಲಿ ನಮ್ಮೂರಿನ ದೊಡ್ಡ ಕೆರೆಯೂ ಸೇರಿದೆ. ಭದ್ರೆಯ ನೀರು ಹರಿದು ಬರುವುದರ ಕೆರೆಗಳ ಹೂಳು, ಜಾಲಿ ತೆಗೆಸಬೇಕು. ಕಾಲುವೆ, ತೂಬುಗಳನ್ನು ದುರಸ್ತಿ ಮಾಡಬೇಕು’ ಎಂದು ಎರೆನಾಡು ಹೋರಾಟ ಸಮಿತಿ ಅಧ್ಯಕ್ಷ ಕೆ.ಟಿ. ರುದ್ರಮುನಿ ಒತ್ತಾಯಿಸುತ್ತಾರೆ.

ಭರಮಗಿರಿ ಕೆರೆಗೂ ಕೋಡಿ ಭಾಗ್ಯ ಇಲ್ಲ. ಹೊಸದುರ್ಗ ತಾಲ್ಲೂಕಿನ ಲಕ್ಕೇಹಳ್ಳಿ ಬಳಿ ಬ್ಯಾರೇಜ್ ನಿರ್ಮಿಸಿದ ಬಳಿಕ ಈ ಕೆರೆಗೆ ಒಳಹರಿವು ಕಡಿಮೆಯಾಗಿದೆ. ಹೀಗಾಗಿ ಕೆರೆ ತುಂಬಿಲ್ಲ. ಸಮೃದ್ಧ ಮಳೆಯಾಗುತ್ತಿದ್ದರೂ ಈ ಕೆರೆಗಳಿಗೆ ನೀರು ಹರಿಯದಿರುವುದಕ್ಕೆ ಈ ಭಾಗದ ರೈತರು ಬೇಸರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT