ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಬಿಸ್‌ ಬಗ್ಗೆ ರೈತರಿಗೆ ಮಾಹಿತಿ ನೀಡಿ

ಜಾಗೃತಿ ಶಿಬಿರದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಸೂಚನೆ
Last Updated 30 ಸೆಪ್ಟೆಂಬರ್ 2022, 4:00 IST
ಅಕ್ಷರ ಗಾತ್ರ

ಚಿತ್ರದುರ್ಗ: ಪ್ರಾಣಿಗಳ ಮೂಲಕ ಮನುಷ್ಯರಿಗೆ ಹರಡುವ ರೇಬಿಸ್‌ ಸೋಂಕು ಮಾರಣಾಂತಿಕವಾಗಿದ್ದು, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಹೇಳಿದರು.

ಇಲ್ಲಿನ ಜಿಲ್ಲಾ ಕ್ರೀಡಾ ಭವನದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಗುರುವಾರ ಆಯೋಜಿಸಿದ್ದ ರೇಬಿಸ್‌ ಮತ್ತು ಪ್ರಾಣಿ ಜನ್ಯ ರೋಗಗಳ ನಿಯಂತ್ರಣ ಕುರಿತ ತಾಂತ್ರಿಕ ವಿಚಾರ ಸಂಕಿರಣ ಮತ್ತು ಜಾಗೃತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ರೇಬಿಸ್‌ ಹಾಗೂ ಪ್ರಾಣಿ ಜನ್ಯ ರೋಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಂಪನ್ಮೂಲ ವ್ಯಕ್ತಿಗಳಿಂದ ಸೂಕ್ತ ಮಾಹಿತಿ ಪಡೆದು ಸಂದೇಹ ಬಗೆಹರಿಸಿಕೊಳ್ಳಬೇಕು. ಗ್ರಾಮೀಣ ಪ್ರದೇಶದ ಪ್ರತಿ ರೈತರಿಗೂ ಈ ಕುರಿತು ಮಾಹಿತಿ ತಲುಪಬೇಕು’ ಎಂದು ಸೂಚಿಸಿದರು.

ಸಾಕು ಪ್ರಾಣಿಗಳನ್ನು ಸಾಕುವವರು ಸ್ವಚ್ಛತೆ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು. ಪ್ರಾಣಿಗಳಿಗೆ ಸೂಕ್ತ ಲಸಿಕೆ ಹಾಕಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ನಂದಿನಿದೇವಿ ಸಲಹೆ ನೀಡಿದರು.

ಜಿಲ್ಲೆಯಲ್ಲಿ ಯಾರೂ ರೇಬಿಸ್ ರೋಗಕ್ಕೆ ತುತ್ತಾಗಬಾರದು. ಭಾರತ ರೇಬಿಸ್ ಮುಕ್ತ ದೇಶವಾಗುವ ಮೊದಲು ತಾಲ್ಲೂಕುಗಳು ರೇಬಿಸ್ ಮುಕ್ತವಾಗಬೇಕು. ಈ ನಿಟ್ಟಿನಲ್ಲಿ ಇಲಾಖೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ ಮಾತನಾಡಿ, ‘ರೇಬಿಸ್‍ನಿಂದಾಗಿ ದೇಶದಲ್ಲಿ ವರ್ಷಕ್ಕೆ 50,000 ಜನ ಮರಣ ಹೊಂದುತ್ತಿದ್ದು, ರೋಗ ತಡೆಗೆ ಕ್ರಮ ವಹಿಸಬೇಕು’ ಎಂದರು.

‘ಗೋವಾ ರೇಬಿಸ್ ಮುಕ್ತವಾಗಿದ್ದು, ಕೇರಳ ಸಹ ಸನಿಹದಲ್ಲಿದೆ. ನಮ್ಮ ರಾಜ್ಯವನ್ನೂ ರೇಬಿಸ್ ಮುಕ್ತಗೊಳಿಸಲು ಸರ್ಕಾರ ಕ್ರಮ ಕೈಗೊಂಡಿದೆ’ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಎಸ್‌. ಕಲ್ಲಪ್ಪ ತಿಳಿಸಿದರು.

‘ಜಿಲ್ಲೆಯಲ್ಲಿ 28 ಸಾವಿರ ನಾಯಿಗಳಿದ್ದು, ಪ್ರಾಥಮಿಕವಾಗಿ 14 ಸಾವಿರ ನಾಯಿಗಳಿಗೆ ಲಸಿಕೆ ನೀಡಲಾಗಿದೆ. ಉಳಿದ ಬೀದಿ ನಾಯಿಗಳಿಗೆ ನಗರ ಸ್ಥಳೀಯ ಸಂಸ್ಥೆಗಳು ಲಸಿಕೆ ಕೊಡಿಸುವ ಕೆಲಸಕ್ಕೆ ಮುಂದಾಗಬೇಕು’ ಎಂದರು.

ಶಿವಮೊಗ್ಗದ ಹೊಸೂರು ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಡಾ.ಸುನಿಲ್‌ ಕುಮಾರ್‌ ಉಪನ್ಯಾಸ ನೀಡಿದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎನ್. ಕಾಶಿ, ಪಾಲಿ ಕ್ಲಿನಿಕ್ ಉಪನಿರ್ದೇಶಕ ಡಾ.ಎನ್‌. ಬಾಬುರತ್ನ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಸಿ. ತಿಪ್ಪೇಸ್ವಾಮಿ ಇದ್ದರು.

ಕೋಟ್‌...

ಮುಂಜಾಗ್ರತೆ ವಹಿಸದಿದ್ದರೆ ರೇಬಿಸ್‌ನಿಂದ ಶೇ 100ರಷ್ಟು ಸಾವು ಸಂಭವಿಸುತ್ತದೆ. ಆದ್ದರಿಂದ ಜನ ಸಾಮಾನ್ಯರಲ್ಲಿ ಇದರ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು.

ಡಾ.ಆರ್‌. ರಂಗನಾಥ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT