ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಅಪರಾಧ ತನಿಖೆಗೆ ಅಸಹಕಾರ

ಬ್ಯಾಂಕುಗಳ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಅಸಮಾಧಾನ
Last Updated 5 ಅಕ್ಟೋಬರ್ 2020, 12:03 IST
ಅಕ್ಷರ ಗಾತ್ರ

ಚಿತ್ರದುರ್ಗ: ಆರ್ಥಿಕ ಅಪರಾಧ ಪ್ರಕರಣಗಳ ತನಿಖೆಗೆ ಬ್ಯಾಂಕುಗಳಿಂದ ನಿರೀಕ್ಷಿತ ಸಹಕಾರ ಸಿಗುತ್ತಿಲ್ಲ. ಬ್ಯಾಂಕಿಂಗ್‌ ವಂಚನೆಗೆ ಸಂಬಂಧಿಸಿದಂತೆ ಸೈಬರ್‌ ಠಾಣೆಯಲ್ಲಿ ದಾಖಲಾದ ಶೇ 60ರಷ್ಟು ಪ್ರಕರಣಗಳ ತನಿಖೆಗೆ ಹಿನ್ನಡೆಯಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆ ಹಾಗೂ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ‘ಬ್ಯಾಂಕುಗಳ ಭದ್ರತಾ ಅರಿವು ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.

‘ಬ್ಯಾಂಕಿಂಗ್‌ ವಂಚನೆಗೆ ಸಂಬಂಧಿಸಿದಂತೆ ಖಾತೆದಾರರು ದೂರು ದಾಖಲಿಸುತ್ತಾರೆ. ಅಗತ್ಯ ಮಾಹಿತಿ, ಪೂರಕ ಸಾಕ್ಷ್ಯಗಳನ್ನು ಬ್ಯಾಂಕ್‌ ಒದಗಿಸಬೇಕು. ಹಲವು ಪ್ರಕರಣಗಳಲ್ಲಿ ಬ್ಯಾಂಕುಗಳು ಸಕಾಲಕ್ಕೆ ಮಾಹಿತಿ ಒದಗಿಸುತ್ತಿಲ್ಲ. ಇದರಿಂದ ಅಪರಾಧ ಪತ್ತೆ ಹಾಗೂ ಪ್ರಕರಣ ವಿಲೇವಾರಿಗೆ ತೊಂದರೆಯಾಗುತ್ತಿದೆ. ಇದನ್ನು ಗೃಹ ಸಚಿವರ ಗಮನಕ್ಕೂ ತರಲಾಗಿದೆ’ ಎಂದು ಹೇಳಿದರು.

‘ಸೈಬರ್‌ ವಂಚನೆ, ಆರ್ಥಿಕ ಅಪರಾಧ ಪತ್ತೆಗೆ ಪೊಲೀಸರು ಹಾಗೂ ಬ್ಯಾಂಕುಗಳ ನಡುವೆ ಸಮನ್ವಯತೆ ಸಾಧಿಸುವ ಅಗತ್ಯವಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ರೂಪಿಸಿದ ನಿಯಮಾವಳಿಗಳನ್ನು ಬ್ಯಾಂಕುಗಳು ಪಾಲನೆ ಮಾಡಬೇಕು. ಆಗ ಮಾತ್ರ ಇಂತಹ ಅಪರಾಧಗಳಿಗೆ ಕಡಿವಾಣ ಹಾಕಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

‘ಓಟಿಪಿ, ಪಾಸ್‌ವರ್ಡ್‌ ಸೇರಿ ಗೋಪ್ಯ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂಬ ಎಚ್ಚರಿಕೆ ನೀಡಿದರೂ ಖಾತೆದಾರರಲ್ಲಿ ಅರಿವು ಮೂಡಿಲ್ಲ. ಗೋಪ್ಯ ಮಾಹಿತಿ ಹಂಚಿಕೊಂಡು ಹಣ ಕಳೆದುಕೊಳ್ಳುವುದು ನಿಲ್ಲುತ್ತಿಲ್ಲ. ರಾಷ್ಟ್ರೀಕೃತ ಬ್ಯಾಂಕೊಂದರ ಎಟಿಎಂಗಳಲ್ಲಿ ಸ್ಕಿಮ್ಮಿಂಗ್‌ ಯಂತ್ರ ಇಟ್ಟು ಖಾತೆದಾರರ ಕಾರ್ಡ್‌ ವಿವರಗಳನ್ನು ಕಳವು ಮಾಡಲಾಗುತ್ತಿದೆ. ಎಟಿಎಂನಲ್ಲಿರುವ ಸಿಸಿಟಿವಿ ಕ್ಯಾಮೆರಾಗಳಿಗೆ ಟವೆಲ್‌ ಹಾಕಿ ಕೃತ್ಯ ಎಸಗಿದ ಪ್ರಕರಣಗಳೂ ವರದಿಯಾಗಿವೆ. ಸಿಸಿಟಿವಿ ಬದಲು ಪೆನ್‌ ಕ್ಯಾಮೆರಾ ಅಳವಡಿಸುವುದು ಸೂಕ್ತ’ ಎಂದು ಸಲಹೆ ನೀಡಿದರು.

‘ಅಪರಾಧ ಪ್ರಕರಣಗಳ ತನಿಖೆ ನಡೆಸುವಾಗ ಎಟಿಎಂಗಳಿಗೆ ಭೇಟಿ ನೀಡಿದರೆ ಪೂರಕ ಸಾಕ್ಷ್ಯಗಳೇ ಲಭ್ಯವಾಗುವುದಿಲ್ಲ. ಸಿಸಿಟಿವಿ ಸುಸ್ಥಿತಿಯಲ್ಲಿ ಇರುವುದಿಲ್ಲ. ಸುಸ್ಥಿತಿಯಲ್ಲಿದ್ದರೂ ಬಹುದಿನಗಳ ಕಾಲ ದೃಶ್ಯಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ವ್ಯವಸ್ಥೆ ಇರುವುದಿಲ್ಲ. ಭದ್ರತಾ ಸುರಕ್ಷತೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿದಾಗ ಮಾತ್ರ ಬ್ಯಾಂಕಿಂಗ್ ಕ್ಷೇತ್ರ ಸುರಕ್ಷಿತವಾಗಿರಲು ಸಾಧ್ಯ’ ಎಂದು ಹೇಳಿದರು.

‘ಎಟಿಎಂಗಳಿಗೆ ಭದ್ರತಾ ಸಿಬ್ಬಂದಿ ನಿಯೋಜಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೂ, ಬಹುತೇಕ ಎಟಿಎಂ ಎದುರು ಭದ್ರತಾ ಸಿಬ್ಬಂದಿ ಕಾಣಿಸುವುದಿಲ್ಲ. ಹಿರಿಯ ನಾಗರಿಕರನ್ನು ಎಟಿಎಂ ಭದ್ರತೆಗೆ ನಿಯೋಜಿಸುವುದು ತಪ್ಪು. ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ (ಕೆಐಎಸ್‌ಎಫ್‌) ಸಿಬ್ಬಂದಿಯನ್ನು ನಿಯೋಜಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇದಕ್ಕೆ ಬ್ಯಾಂಕುಗಳು ಒಪ್ಪಿಗೆ ಸೂಚಿಸಬೇಕು’ ಎಂದರು.

ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಬಿ.ನಂದಗಾವಿ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ವ್ಯವಸ್ಥಾಪಕ ಸಿ.ಬಿ.ಹಿರೇಮಠ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಪ್ರಾದೇಶಿಕ ವ್ಯವಸ್ಥಾಪಕ ಮಹದೇವಯ್ಯ ಇದ್ದರು.

.............................

ಸಾಲ ಸೌಲಭ್ಯ, ಸಹಾಯಧನ ಸೇರಿ ಸರ್ಕಾರಿ ಯೋಜನೆಗಳಲ್ಲಿ ಹೆಚ್ಚು ವಂಚನೆ ನಡೆಯುತ್ತಿದೆ. ಸಾಲ ಮಂಜೂರು ಮಾಡುವಾಗ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ.

–ರೋಷನ್‌ ಜಮೀರ್‌

ಡಿವೈಎಸ್‌ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT