ಶುಕ್ರವಾರ, ಏಪ್ರಿಲ್ 16, 2021
31 °C
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಬೇಸರ

ನಿರೀಕ್ಷೆಯಂತೆ ಕಾರ್ಯನಿರ್ವಹಿಸಲು ಆಗಿಲ್ಲ: ಡಾ.ದೊಡ್ಡಮಲ್ಲಯ್ಯ ಬೇಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷನಾಗಿ ಐದು ವರ್ಷದ ಅವಧಿ ಪೂರ್ಣಗೊಳಿಸಿದ್ದು, ನಿರೀಕ್ಷೆಯಂತೆ ಕಾರ್ಯನಿರ್ವಹಿಸಲು ಸಾಧ್ಯವಾಗಿಲ್ಲ. ಮತ್ತೊಮ್ಮೆ ಅವಕಾಶ ಸಿಕ್ಕರೆ ಅನುಕೂಲ ಎಂದು ಡಾ.ದೊಡ್ಡಮಲ್ಲಯ್ಯ ಅಭಿಪ್ರಾಯಪಟ್ಟರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ವರ್ಷದಿಂದ ಯಾವುದೇ ಕಾರ್ಯಕ್ರಮ ಮಾಡಲು ಆಗಿಲ್ಲ. ಸರ್ಕಾರದ ನಿಯಮ ಪಾಲಿಸುವ ಉದ್ದೇಶದಿಂದ ಸಭೆ, ಸಮಾರಂಭ ನಡೆಸದಂತೆ ಕೇಂದ್ರ ಪರಿಷತ್ ತೀರ್ಮಾನ ಕೈಗೊಂಡಿತ್ತು’ ಎಂದು ಹೇಳಿದರು.

‘2016ರಿಂದ ಈವರೆಗೆ ಮೂರು ಜಿಲ್ಲಾ ಸಾಹಿತ್ಯ ಸಮ್ಮೇಳನ, ಐದು ತಾಲ್ಲೂಕು ಸಮ್ಮೇಳನ ಹಾಗೂ ಮೂರು ಹೋಬಳಿ ಸಮ್ಮೇಳನ ನಡೆಸಲಾಗಿದೆ. ಕನ್ನಡ ಭಾಷೆ, ಸಾಹಿತ್ಯ, ವ್ಯಕ್ತಿತ್ವ ನಿರ್ಮಾಣ, ಕೃಷಿ, ರಾಜಕೀಯ ಸೇರಿ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಕಾರ್ಯಕ್ರಮ ನಡೆಸಲಾಗಿದೆ. ಮೂರು ಹೆಚ್ಚುವರಿ ದತ್ತಿ ಕಾರ್ಯಕ್ರಮ ಸೇರಿಸಲಾಗಿದೆ. ಹಲವು ಕೃತಿಗಳನ್ನು ಸಾಹಿತ್ಯ ಪರಿಷತ್‌ ಹೊರತಂದಿದೆ’ ಎಂದು ಮಾಹಿತಿ ನೀಡಿದರು.

‘ಐದು ವರ್ಷದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಸಮ್ಮೇಳನ ನಡೆಸಲು ₹ 20.2 ಲಕ್ಷ ಅನುದಾನ ಬಂದಿತ್ತು. ಸಮ್ಮೇಳನಕ್ಕೆ ಖರ್ಚಾಗಿದ್ದು ₹ 49.02 ಲಕ್ಷ. ಸಾರ್ವಜನಿಕರು, ಜನಪ್ರತಿನಿಧಿಗಳ ನೆರವು ಪಡೆದು ಸಮ್ಮೇಳನ ನಡೆಸಲಾಗಿದೆ. ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಕೇಂದ್ರ ಪರಿಷತ್‌ ನೀಡುವ ಅನುದಾನ ಸಾಲದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

‘ಸ್ಥಳೀಯ ಶಾಸಕರ ನೆರವಿನಿಂದ ಹೊಳಲ್ಕೆರೆ ಹಾಗೂ ಹೊಸದುರ್ಗದಲ್ಲಿ ತಾಲ್ಲೂಕು ಸಾಹಿತ್ಯ ಭವನ ನಿರ್ಮಿಸಲಾಗಿದೆ. ಜಿಲ್ಲಾ ಕೇಂದ್ರದ ಸಾಹಿತ್ಯ ಭವನಕ್ಕೆ ತಾಂತ್ರಿಕ ತೊಡಕುಗಳು ಎದುರಾಗಿದ್ದರಿಂದ ವಿಳಂಬವಾಗಿದೆ. ಭವನ ನಿರ್ಮಾಣಕ್ಕೆ ಪ್ರಯತ್ನ ನಡೆಯುತ್ತಿದೆ. ಜಿಲ್ಲಾ ಘಟಕ ಸ್ಥಾಪನೆಯಾಗಿ 50 ವರ್ಷ ತುಂಬಿದ್ದು, ಸುವರ್ಣ ಮಹೋತ್ಸವ ಆಚರಿಸಬೇಕಿದೆ. ಪುನರಾಯ್ಕೆ ಮಾಡಿದರೆ ಈ ಎರಡೂ ಭರವಸೆಗಳನ್ನು ಈಡೇರಿಸಲಾಗುವುದು’ ಎಂದರು.

ಪರಿಷತ್ತಿನ ಪದಾಧಿಕಾರಿಗಳಾದ ದಾಸೇಗೌಡ, ಕೆ.ಎಂ.ಯುಸೂಫ್‌, ಹನುಮಂತಪ್ಪ, ಮೈಲಾರಪ್ಪ, ಸುರೇಶ್‌, ಮೋಕ್ಷಾ ರುದ್ರಸ್ವಾಮಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು