ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಾಮಾನ್ಯ ಸಾಹಸಿ ಒನಕೆ ಓಬವ್ವ

Published 30 ಆಗಸ್ಟ್ 2023, 11:06 IST
Last Updated 30 ಆಗಸ್ಟ್ 2023, 11:06 IST
ಅಕ್ಷರ ಗಾತ್ರ

ನೆಲ್ಲಿಕಟ್ಟೆ ಎಸ್.ಸಿದ್ದೇಶ್‌

ಭಾರತದ ಚರಿತ್ರೆಯಲ್ಲಿ ಕರ್ನಾಟಕಕ್ಕೆ ವೀರೋಚಿತ ಇತಿಹಾಸವಿದೆ. ಇಂತಹ ನಾಡಿನಲ್ಲಿ ಐತಿಹಾಸಿಕ, ಸಾಂಸ್ಕೃತಿಕ, ಸಾಹಿತ್ಯಿಕ, ರಾಜಕೀಯ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅಮೂಲ್ಯ ಕಾಣ್ಕೆಯನ್ನು ನೀಡಿದ ತಾಣವಾಗಿದೆ ಚಿತ್ರದುರ್ಗ. ಈ ಹೆಸರೇ ಒಂದು ಚೈತನ್ಯದ ಜಲಪಾತ. ಸಾಹಸಿಗಳ ಇತಿಹಾಸ ಪ್ರಸಿದ್ಧ ಸಾಧನೆಗಳಿಂದ ರಾರಾಜಿಸಿದ ಮರೆಯಲಾಗದ ತಾಣ.

ಕರ್ನಾಟಕದ ಅಮೂಲ್ಯ ಐತಿಹಾಸಿಕ ಸ್ಮಾರಕ ಚಿತ್ರದುರ್ಗದ ಕೋಟೆ. ಮಹಾಪರಾಕ್ರಮಿ ರಾಜವೀರ ಮದಕರಿನಾಯಕರು ಆಳಿದ ಪವಿತ್ರ ಭೂಮಿಯಿದು. ಮುಗಿಲಿಗೆ ಮುತ್ತನ್ನಿಡುವಂತೆ ಗೋಚರಿಸುವ ಮನಮೋಹಕ ಬತೇರಿಗಳನ್ನು ಹೊಂದಿರುವ ಉಕ್ಕಿನಂತಹ ಏಳು ಸುತ್ತಿನಕೋಟೆಯನ್ನು ಹೈದರಾಲಿ ಕುತಂತ್ರದಿಂದ ವಶಪಡಿಸಿಕೊಳ್ಳಲು ಯತ್ನಿಸಿದ್ದನ್ನು ವಿಫಲಗೊಳಿಸಿ; ಚಿತ್ರದುರ್ಗದ ಕೋಟೆ ಮತ್ತು ಜನರನ್ನು ಬಹು ಅಪಾಯದಿಂದ ಪಾರು ಮಾಡಿದ ಮಹಾನ್‌ ಶಕ್ತಿದಾತೆ ವೀರವನಿತೆ ಒನಕೆ ಓಬವ್ವ.

ಒನಕೆ ಓಬವ್ವ ಎಂದಾಕ್ಷಣ ರೋಮಾಂಚನವಾಗುತ್ತದೆ. ಸಾಮಾನ್ಯ ಗೃಹಿಣಿಯ ಅಸಾಮಾನ್ಯ ಸಾಹಸ ಬೆಚ್ಚಿಬೀಳಿಸುತ್ತದೆ. ಗುಡೇಕೋಟೆ ಪಾಳೆಗಾರರಲ್ಲಿ ಕಹಳೆಯವರಾಗಿ ಸೇವೆ ಸಲ್ಲಿಸುತ್ತಿದ್ದ ಛಲವಾದಿ ಜನಾಂಗದ ಚೆನ್ನಪ್ಪನ ಮಗಳಾಗಿ ಜನಿಸಿದ ಓಬವ್ವ ಸ್ವಾಮಿನಿಷ್ಠೆ, ಸಮಯ ಸ್ಫೂರ್ತಿ ಮತ್ತು ತ್ಯಾಗದ ತ್ರಿವೇಣಿ ಸಂಗಮ. ಬಾಲ್ಯದಿಂದಲೂ ಸಂಕಷ್ಟಗಳ ಅನುಭವಗಳೊಂದಿಗೆ ಅನನ್ಯವಾದ ಸಂಸ್ಕಾರಗಳನ್ನು ರೂಢಿಸಿಕೊಂಡವಳು. ರಾಜವೀರ ಮದಕರಿ ನಾಯಕರಲ್ಲಿ ಆಪ್ತಸೇವಕರಾಗಿ, ಕಹಳೆಯವರಾಗಿ ಅನುಪಮ ಸೇವೆ ಸಲ್ಲಿಸುತ್ತಿದ್ದ ಛಲವಾದಿ ಕಹಳೆ ಮದ್ದಹನುಮಪ್ಪ ಅವರ ಸಾತ್ವಿಕ ಸತಿಯಾಗಿ ಬಾಳಿ ಬೆಳಗಿದ ಮಹಾಮಾತೆ ಓಬವ್ವ ಕೇವಲ ವ್ಯಕ್ತಿಯಲ್ಲ, ಆ ಮಾತೆಯೊಂದು ಶಕ್ತಿಪುಂಜ.

ಓಬವ್ವ ನಿಷ್ಕಲ್ಮಷ ನಾಡಭಕ್ತಿಯ ದ್ಯೋತಕ. ಇಂದಿಗೂ ಆ ಮಾತೆಯ ಹೆಸರು ಹೇಳಿದರೆ, ಕೇಳಿದರೆ ಸ್ತ್ರಿ-ಪುರುಷರಲ್ಲಿ ಸ್ಫೂರ್ತಿಯ ಬುಗ್ಗೆ ಚಿಮ್ಮುತ್ತದೆ. ಓಬವ್ವಳ ಸಾಹಸಮಯ ಜೀವನ ಆದರ್ಶಪ್ರಾಯವಾಗಿದೆ. ಓಬವ್ವಳ ಸಾಹಸದ ಘಟನೆ 1766ರಲ್ಲಿ ನಡೆಯುತ್ತದೆ. ಆ ಘಟನೆಯನ್ನು ಪದೆ ಪದೇ ನೆನಪು ಮಾಡಿಕೊಂಡು, ಮನದಲ್ಲಿ ನೊಂದುಕೊಂಡು ಓಬವ್ವ 1769ರ ಸೆಪ್ಟೆಂಬರ್‌ನಲ್ಲಿ ಸಾವನ್ನಪ್ಪಿದಾಗ ದೊರೆಗಳೇ ಬಂದು ಸಂತಾಪ ಸೂಚಿಸಿ, ರಾಜ ಮರ್ಯಾದೆಯೊಡನೆ ಇಡೀ ದುರ್ಗದ ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಿಸಿ, ತಣ್ಣೀರು ಚಿಲುಮೆಯ ಪೂರ್ವಕ್ಕೆ ಸಮಾದಿ ಮಾಡಿಸಿದ್ದು ದುರ್ಗದ ದೊರೆಗಳ ದಕ್ಷತೆಗೆ, ಔದಾರ್ಯಕ್ಕೆ ಪ್ರಜಾವಾತ್ಸಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಓಬವ್ವಳ ಸಾಹಸ ಕಾರ್ಯಕ್ಕೆ ರಾಜವೀರ ಮದಕರಿನಾಯಕರು ಅಭಿನಂದಿಸಿ, ಆ ಸಾಹಸ ಕಾರ್ಯದ ನೆನಪಿಗೆ ಇನ್ನೊಂದು ಸುತ್ತು ಕೋಟೆಯನ್ನು ಕಟ್ಟಿಸಿ, ಅದರ ಬಾಗಿಲಿಗೆ ‘ಒನಕೆ ಕಿಂಡಿ ಬಾಗಿಲು’ ಎಂದು ಹೆಸರಿಟ್ಟಿರು. ಓಬವ್ವಳ ಪ್ರತಿಮೆಯನ್ನು ಪ್ರತಿಷ್ಠಾಪಿಸಿದರು. ಓಬವ್ವ ಮಾತೆಯ ಅಪೇಕ್ಷೆಯಂತೆ ಕುಲದೇವತೆಯಾಗಿಸಿದರು. ಅಗಸನಕಲ್ಲು ಗ್ರಾಮವನ್ನು ಛಲವಾದಿ ಸಮುದಾಯಕ್ಕೆ ಜಹಗಿರಿಯಾಗಿ ನೀಡಿದರು. ಸ್ವಾಭಿಮಾನ, ಸ್ವಾಮಿನಿಷ್ಠೆಯ ಓಬವ್ವೆಯನ್ನು ಗೌರವಿಸಿದ ರಾಜವೀರ ಮದಕರಿ ನಾಯಕರ ಘನವ್ಯಕ್ತಿತ್ವ ಅನುಕರಣೀಯವಾದುದು.

ರಾಜನೀತಿ, ಲೋಕನೀತಿ ಮತ್ತು ಧರ್ಮನೀತಿಗಳ ತ್ರಿವೇಣಿಸಂಗಮವಾಗಿದ್ದ ಮದಕರಿ ನಾಯಕರ ಔನತ್ಯ ಗುಣ ಅನುಪಮವಾದದು. ಮದಕರಿ ಭೂಪಾಲರ ಹಾಗೂ ರಾಣಿಯ ಗೌರವಕ್ಕೆ, ಅಭಿಮಾನಕ್ಕೆ ಪಾತ್ರರಾಗಿರುವ ಕಹಳೆ ಮದ್ದಹನುಮಪ್ಪ-ಓಬವ್ವೆ ಸ್ವಾಮಿನಿಷ್ಠೆಗೆ ಚ್ಯುತಿಬಾರದಂತೆ ಬಾಳಿರುವುದರಲ್ಲಿ ಎಳ್ಳಷ್ಟು ಅನುಮಾನವಿಲ್ಲ. ಕವಿತೆಗಳಿಗೆ, ಕಾದಂಬರಿಗಳಿಗೆ, ನಾಟಕಗಳಿಗೆ, ಲಾವಣಿ ಮೊದಲಾದ ಸಾಹಿತ್ಯಕ್ಕೆ ವಸ್ತುವಾಗಿರುವ ಓಬವ್ವ ಅಜರಾಮರ.

ಸದ್ಗುಣಿ ಓಬವ್ವಳ ಪತಿ ಪ್ರೇಮ, ಅತ್ತೆ ಮಾವರನ್ನು ಮಗನ್ನು ಪೋಷಿಸಿದ್ದು, ತಾನು ಜನಿಸಿ, ಬೆಳೆದ ಛಲವಾದಿ ಸಮುದಾಯಕ್ಕೆ ಗೌರವದ ವೀಳ್ಯವನ್ನು ದೊರೆಗಳಲ್ಲಿ ಕೇಳಿದ್ದು ಆದರ್ಶ ಮತ್ತು ಅನುಕರಣೀಯವಾದದು. ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯ ಅಗಸನಕಲ್ಲು ಗ್ರಾಮದ ಜಾಗದಲ್ಲಿ ಛಲವಾದಿಗಳು ವಾಸಿಸುತ್ತಿದ್ದು, ಅಲ್ಲಿಯೇ ಓಬವ್ವ ಮಾತೆಯ ದೇವಾಲಯ ನಿರ್ಮಿಸಿ ನಿತ್ಯ ಪೂಜೆ, ಧ್ಯಾನ, ದಾನದ ಕಾರ್ಯಗಳು ಜರುಗುತ್ತಿರುವುದು ಆ ಮಾತೆಯ ಸಾಂಸ್ಕೃತಿಕ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ.

ಚಿತ್ರದುರ್ಗದ ಅಗಸನಕಲ್ಲು ಬಡಾವಣೆಯಲ್ಲಿ ಒನಕೆ ಓಬವ್ವಗೆ ನಿರ್ಮಾಣವಾಗಿರುವ ದೇಗುಲ.
ಚಿತ್ರದುರ್ಗದ ಅಗಸನಕಲ್ಲು ಬಡಾವಣೆಯಲ್ಲಿ ಒನಕೆ ಓಬವ್ವಗೆ ನಿರ್ಮಾಣವಾಗಿರುವ ದೇಗುಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT