ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಸಾನ್‌ ರೈಲಿಗೆ ಮೊರೆಹೋದ ರೈತರು

ಚಳ್ಳಕೆರೆಯಿಂದ ಬಾಂಗ್ಲಾ ಗಡಿ ತಲುಪಿದ 10 ಟನ್‌ ಈರುಳ್ಳಿ
Last Updated 1 ಅಕ್ಟೋಬರ್ 2021, 4:56 IST
ಅಕ್ಷರ ಗಾತ್ರ

ಚಳ್ಳಕೆರೆ: ಹಣ್ಣು ಮತ್ತು ತರಕಾರಿ ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಚಳ್ಳಕೆರೆಯಿಂದ ಕಿಸಾನ್ ರೈಲು ಸಂಚಾರ ಆರಂಭಿಸಿದೆ. ತಾಲ್ಲೂಕಿನ ತಳಕು ಹೋಬಳಿ ವ್ಯಾಪ್ತಿಯ ಬಂಜಗೆರೆ, ಬಸಾಪುರ, ಹೊನ್ನೂರು, ಬೇಡರೆಡ್ಡಿಹಳ್ಳಿ, ಘಟಪರ್ತಿ, ಚಿತ್ರನಾಯಕನಹಳ್ಳಿ ಹಾಗೂ ಕಸಬಾ ಹೋಬಳಿಯ ಚಿಕ್ಕಮಧುರೆ, ಚಿಗತನಹಳ್ಳಿ, ಸೋಮಗುದ್ದು, ಗಂಜಿಗುಂಟೆ, ಸಾಣಿಕೆರೆ ಮುಂತಾದ ಗ್ರಾಮದ ಬೆಳೆಗಾರರು ಈರುಳ್ಳಿಯನ್ನು ಸಾಗಿಸಲು ಕಿಸಾನ್ ರೈಲಿನ ಮೊರೆ ಹೋಗಿದ್ದಾರೆ.

ಪೆಟ್ರೋಲ್-ಡೀಸೆಲ್‌ ಬೆಲೆ ತುಟ್ಟಿಯಾಗಿದೆ. ರೈತರು ಕ್ವಿಂಟಲ್ ಈರುಳ್ಳಿಯನ್ನು ಚಳ್ಳಕೆರೆಯಿಂದ ಕೋಲ್ಕತ್ತಕ್ಕೆ ಸಾಗಿಸಲು ಲಾರಿಗೆ ಕನಿಷ್ಠ ₹ 800- ₹ 900ರಷ್ಟು ಬಾಡಿಗೆ ನೀಡಬೇಕು. ಆದರೆ ಕಿಸಾನ್ ರೈಲಿಗೆ ₹ 400 ಬಾಡಿಗೆ ದರವಿದೆ. ಹೀಗಾಗಿ ಈರುಳ್ಳಿಯನ್ನು ದೇಶದ ವಿವಿಧ ಮಾರುಕಟ್ಟೆಗೆ ಸಾಗಿಸಲು ಕಿಸಾನ್ ರೈಲು ಈಗ ಸಹಾಯಕ್ಕೆ ಬಂದಿದೆ.

‘ಸೆ. 27ರಂದು ಕಿಸಾನ್ ರೈಲು ಚಳ್ಳಕೆರೆಯ 10 ಟನ್ ಈರುಳ್ಳಿಯನ್ನು ಬಾಂಗ್ಲಾ ಗಡಿಗೆ ತಲುಪಿಸಿದೆ. ಒಂದು ಬೋಗಿಯಲ್ಲಿ ಕನಿಷ್ಠ 10-12 ಟನ್ ಈರುಳ್ಳಿ ತುಂಬಬಹುದು. ಹಾಗಾಗಿ 4-5 ಬೆಳೆಗಾರರು ಜೊತೆಗೂಡಿ ಇಲಾಖೆಗೆ ಮುಂಗಡ ಹಣ ಪಾವತಿಸಿ ಈರುಳ್ಳಿಯನ್ನು ಕೋಲ್ಕತ್ತಕ್ಕೆ ಸಾಗಿಸಲು ಕಿಸಾನ್ ರೈಲಿನಲ್ಲಿ 250 ಬೋಗಿಗಳನ್ನು ಕಾಯ್ದಿರಿಸಿದ್ದೇವೆ. ಚಳ್ಳಕೆರೆಯಿಂದ ಈರುಳ್ಳಿ ತುಂಬಿಕೊಂಡು ಹೊರಟ ಕಿಸಾನ್ ರೈಲು 4-5 ದಿನಗಳಿಗೆ ಕೊಲ್ಕತ್ತ ತಲುಪುತ್ತದೆ. ಬೆಳೆದ ಈರುಳ್ಳಿಯನ್ನು ಲಾರಿಯ ಮೂಲಕ ಅಲ್ಲಿಗೆ ಸಾಗಿಸಲು 10-15 ದಿನ ಬೇಕಾಗುತ್ತದೆ. ಇದರಿಂದ ಈರುಳ್ಳಿ ಕೊಳೆತು ಹೋಗುತ್ತಿದ್ದವು. ಇದರಿಂದ ತೀವ್ರ ನಷ್ಟ ಅನುಭವಿಸಬೇಕಾಗುತ್ತಿತ್ತು. ಈಗ ಕಿಸಾನ್ ರೈಲು ಸಂಚಾರದ ವ್ಯವಸ್ಥೆಯಿಂದ ಈರುಳ್ಳಿಯನ್ನು ಗುಜಾಂಡ, ಮಾಲ್ದ, ಜಾಕಿನ್ಸ್ ಮೊದಲಾದ ಮಾರುಕಟ್ಟೆಗೆ ಸಾಗಿಸಲು ತುಂಬಾ ಅನುಕೂಲವಾಗಿದೆ’ ಎನ್ನುತ್ತಾರೆ ರೈತ ಬಂಜಗೆರೆ ಚಂದ್ರಣ್ಣ.

‘ಬೆಂಗಳೂರಿನಲ್ಲಿ ಕ್ವಿಂಟಲ್ ಈರುಳ್ಳಿಗೆ ಸದ್ಯ ₹ 1,700ರಿಂದ
₹ 1,800 ರವರೆಗೆ ಇದ್ದರೆ ಕೋಲ್ಕತ್ತದಲ್ಲಿ ₹ 2,200ರಿಂದ ₹ 2,500ರವರೆಗೆ ಇದೆ. ಕೆಲವೊಮ್ಮೆ ಸಮಾನ ದರವಿದ್ದರೂ, ಸಾಗಣೆಯ ವೆಚ್ಚದ ಅರ್ಧದಷ್ಟು ಉಳಿತಾಯವಾಗುತ್ತದೆ’ ಎಂದು ಅವರು ವಿವರಿಸಿದರು.

ಪ್ಲಾಟ್‌ಫಾರಂಗೆ ಮನವಿ: ರೈಲ್ವೆ ನಿಲ್ದಾಣದಲ್ಲಿ ಬೋಗಿಗೆ ಉತ್ಪನ್ನ ತುಂಬಲು ಬೆಳೆಗಾರರು ಪ್ಲಾಟ್‍ಫಾರಂ ಕೊರತೆ ಎದುರಿಸುತ್ತಿದ್ದಾರೆ. ಈ ಭಾಗದಲ್ಲಿ ಬೆಳೆದ ಮೆಕ್ಕೆಜೋಳ, ಬಿಳಿಜೋಳ, ಹುಣಸೆಹಣ್ಣು, ಒಣಮೆಣಸಿಕಾಯಿ ಮುಂತಾದ ಉತ್ಪನ್ನಗಳನ್ನು ದೇಶದ ವಿವಿಧ ಮಾರುಕಟ್ಟೆಗೆ ತಲುಪಿಸಲು ಹೆಚ್ಚಿನ ಪ್ರಮಾಣದಲ್ಲಿ ಪ್ಲಾಟ್‍ಫಾರಂ ವ್ಯವಸ್ಥೆ ಕಲ್ಪಿಸಬೇಕು ಎಂದು ಬೆಳೆಗಾರರಾದ ಬಸಾಪುರ ಟಿ. ಹನುಂತರಾಯ, ಚಿಕ್ಕಮಧುರೆ ಮುಕುಂದ ರೈಲ್ವೆ ಇಲಾಖೆ ಅಧಿಕಾರಿಗಳಲ್ಲಿ ಮನವಿ
ಮಾಡಿದರು.

ಬೆಳೆದ ಉತ್ಪನ್ನಗಳನ್ನು ಕಿಸಾನ್ ರೈಲಿನಲ್ಲಿ ಸಾಗಿಸಲು ಶೇ 50ರಷ್ಟು ಬಾಡಿಗೆ ದರದಲ್ಲಿ ಅವಕಾಶ ಕಲ್ಪಿಸಲಾಗಿದೆ. ಈವೆರೆಗೆ ಚಳ್ಳಕೆರೆಯಿಂದ ಕೋಲ್ಕತ್ತಕ್ಕೆ ಒಮ್ಮೆ ಮಾತ್ರ ಕಿಸಾನ್ ರೈಲು ಸಂಚರಿಸಿದೆ.

₹ 1 ಲಕ್ಷ ಮುಂಗಡ ಹಣ ಪಾವತಿಸಬೇಕು

‘ರೈತರ ಬೇಡಿಕೆಗೆ ತಕ್ಕಂತೆ ಈ ರೈಲನ್ನು ಓಡಿಸಲಾಗುವುದು. ಬೆಳೆದ ಸೊಪ್ಪು, ಹಣ್ಣು, ತರಕಾರಿ, ಶೇಂಗಾ, ಮೆಕ್ಕೆಜೋಳ ಮುಂತಾದ ಉತ್ಪನ್ನಗಳನ್ನು ದೇಶದ ವಿವಿಧ ಮಾರುಕಟ್ಟೆಗೆ ಸಾಗಿಸಲು ಬೆಳೆಗಾರರು, ಇಲಾಖೆಗೆ ಕನಿಷ್ಠ ₹ 1 ಲಕ್ಷ ಮುಂಗಡ ಹಣ ಪಾವತಿಸಬೇಕು. ಸರ್ಕಾರದಿಂದ ಅನುಮತಿ ಪಡೆದು ನಂತರ ರೈಲಿನಲ್ಲಿ ಉತ್ಪನ್ನ ಸಾಗಿಸಲು ಅವಕಾಶ ನೀಡಲಾಗುವುದು. ಕೇಂದ್ರದ ಕಿಸಾನ್ ರೈಲ್ವೆ ಯೋಜನೆ ಕುರಿತು ಕೈಗಾರಿಕೋದ್ಯಮಿಗಳು ಹಾಗೂ ರೈತರ ಸಮ್ಮುಖದಲ್ಲಿ ಚಿತ್ರದುರ್ಗದಲ್ಲಿ ಸಭೆ ನಡೆಸಲಾಗಿತ್ತು. ಈ ಯೋಜನೆಯನ್ನು ಬಳಕೆ ಮಾಡಿಕೊಳ್ಳಬೇಕು’ ಎಂದು ರೈಲ್ವೆ ಇಲಾಖೆಯ ಮೈಸೂರು ವಿಭಾಗದ ಡಿಸಿಎಂ ಮಂಜುನಾಥ್ ಬೆಳೆಗಾರರಿಗೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT