ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ಪದ್ಧತಿಯಲ್ಲಿ ಹಲವು ಹಣ್ಣುಗಳ ಕೃಷಿ

ಕೃಷಿಯಲ್ಲಿ ನೆಮ್ಮದಿ ಕಂಡ ವೈದ್ಯ ಕುಟುಂಬ
Last Updated 19 ಜನವರಿ 2022, 6:11 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಕೋವಿಡ್ ಬೇಸರ ಸೇರಿ ಜೀವನದಲ್ಲಿ ಎದುರಾಗಬಹುದಾದ ಹಲವು ಬೇಸರಗಳಿಗೆ ಇಲ್ಲೊಂದು ವೈದ್ಯ ಕುಟುಂಬ ಕೃಷಿಯಲ್ಲಿ ಪರಿಹಾರ ಕಂಡುಕೊಳ್ಳುವ ಪ್ರಯತ್ನದಲ್ಲಿ ಯಶಸ್ವಿಯಾಗಿದೆ.

ತಾಲ್ಲೂಕಿನ ದೇವಸಮುದ್ರದ ಡಾ. ಎ.ಎಸ್. ಧಾನಿ ಮತ್ತು ಡಾ. ಅಭಿಲಾಶ್ ಕುಟುಂಬವೇ ಆ ವೈದ್ಯ ಕುಟುಂಬ. ಗದಗ ಜಿಲ್ಲೆಯ ಗಜೇಂದ್ರಗಡ ಗ್ರಾಮದವರಾದ ಡಾ.ಎ.ಎಸ್. ಧಾನಿ ಅವರು 1973ರಲ್ಲಿ ವೈದ್ಯರಾಗಿ ಬಳ್ಳಾರಿಗೆ ಬಂದರು. 42 ವರ್ಷಗಳಿಗೂ ಹೆಚ್ಚು ಕಾಲ ಅವರು ಅಲ್ಲಿ ಖಾಸಗಿ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. ತಂದೆ ಹಾದಿಯಲ್ಲಿ ಮಗ ಡಾ. ಅಭಿಲಾಶ್ ಅವರು ಚರ್ಮ ತಜ್ಞರಾಗಿ ಬಳ್ಳಾರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ತಂದೆಗೆ ವಯಸ್ಸಾಗುತ್ತಿರುವ ಜತೆಗೆ ಕೋವಿಡ್ ಸಂಕಷ್ಟ ಎದುರಾದಾಗ ಸಮಯ ಕಳೆಯಲು ಕುಟುಂಬವು ದೇವಸಮುದ್ರದ ಬಳಿ 6.5 ಎಕರೆ ಜಮೀನು ಖರೀದಿಸಿ ಕೃಷಿಯನ್ನು ಆರಂಭಿಸಿತು. ದಿನೇ, ದಿನೇ ಇದರಲ್ಲಿ ಆಸಕ್ತಿ ಹೆಚ್ಚಳವಾಗಿ ಹಸು ಸಾಕಣೆ, ಕುರಿ, ಕೋಳಿ ಸಾಕಣೆಯನ್ನೂ ಮಾಡಿದರು. ಸಾವಯವ ಪದ್ಧತಿಯನ್ನು ಪಾಲಿಸಲಾಗುತ್ತಿದೆ.

‘ಪ್ರಜಾವಾಣಿ’ ಜತೆ ಮಾತನಾಡಿದ ಡಾ. ಎ.ಎಸ್. ಧಾನಿ, ‘ನಮ್ಮದು ಕೃಷಿ ಹಿನ್ನೆಲೆಯ ಕುಟುಂಬವೇನೂ ಅಲ್ಲ. ಆದರೆ ಯಾವುದೇ ಕ್ಷೇತ್ರದಲ್ಲಿ ಶ್ರದ್ಧೆ ಇದ್ದಲ್ಲಿ ಯಶಸ್ಸು ಸಾಧಿಸಬಹುದು ಎಂಬುದು ಈಗ ಖಾತ್ರಿಯಾಗಿದೆ. ಕೋವಿಡ್ ಲಾಕ್‌ಡೌನ್‌ನಲ್ಲಿ ನಾನು ನನ್ನ ಕ್ಲಿನಿಕ್‌ ಅನ್ನು ಸ್ಥಗಿತಗೊಳಿಸಿದೆ. ನಂತರ ಕೃಷಿ ನನ್ನ ಸ್ನೇಹಿತನಾಯಿತು. ಉತ್ತಮ ಗಾಳಿ, ಗುಣಮಟ್ಟದ ಹಣ್ಣುಗಳ ಸೇವನೆಯಿಂದ ಆರೋಗ್ಯ ಚೆನ್ನಾಗಿದೆ. ಮುಖ್ಯವಾಗಿ ನೆಮ್ಮದಿ ದೊರಕಿದೆ’ ಎಂದು ಹೇಳಿದರು.

ಪುತ್ರ ಡಾ. ಅಭಿಲಾಶ್ ಮಾತನಾಡಿ, ‘ರಾಸಾಯನಿಕ ಗೊಬ್ಬರ ಬಳಕೆಯಿಂದಾಗಿ ಇಂದು ವಿಷಪೂರಿತ ತರಕಾರಿ, ಹಣ್ಣು, ಆಹಾರ ತಿನ್ನುವುದು ಅನಿವಾರ್ಯವಾಗಿದೆ. ಇದಕ್ಕೆ ಪರಿಹಾರ ಕಾಣಲು ಬೇಸಾಯದ ಪ್ರಯತ್ನಕ್ಕೆ ಕೈ ಹಾಕಿದೆವು. ನಂತರ ಕೃಷಿ ಪ್ರೀತಿ ಹೆಚ್ಚಳವಾಗಿ 6.5 ಎಕರೆ ಪೂರ್ತಿ ಭೂಮಿಯನ್ನು ಬಳಸಿಕೊಳ್ಳುತ್ತಿದ್ದೇವೆ. ಪ್ರಸ್ತುತ ತೋಟದಲ್ಲಿ ಪಪ್ಪಾಯಿ, ಬುಕ್ಕೆ (ಪೇರಲ), ಮಾವು, ನೇರಲೆ, ಅಂಜೂರ, ಹಲಸು, 1,000 ಮಹಾಗನಿ ಮರಗಳನ್ನು ಬೆಳೆಸಲಾಗುತ್ತಿದೆ. ಇದಕ್ಕೆ ಗೊಬ್ಬರ ಪೂರೈಸಲು ಹಸು, ಕುರಿ ಸಾಕಣೆ ಮಾಡಲಾಗುತ್ತಿದೆ. ಮಹಾಗನಿ ಹೆಚ್ಚಿನ ಪ್ರಮಾಣದಲ್ಲಿದೆ’ ಎಂದರು.

ಬೇವಿನಪುಡಿ, ಬೇವಿನಹಿಂಡಿ, ಕೆರೆ ಮಣ್ಣನ್ನು ಪ್ರಮುಖವಾಗಿ ಬಳಕೆ ಮಾಡುತ್ತಿದ್ದೇವೆ. ಬಂದ ಹಣ್ಣನ್ನು ಬಳ್ಳಾರಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ನಮಗೆ ಕಾಯಂ ಗ್ರಾಹಕರು ಇದ್ದಾರೆ. ಕೃಷಿ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿದ್ದು, ಯುವಕರು ಬಳಕೆ ಮಾಡಿಕೊಳ್ಳಬೇಕಿದೆ ಅಷ್ಟೇ ಎಂದು ಕಿವಿಮಾತು ಹೇಳಿದರು. ಮಾಹಿತಿಗೆ 7411104908, 7795523091 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT