ಮಂಗಳವಾರ, ಸೆಪ್ಟೆಂಬರ್ 21, 2021
22 °C
ಆದಿಜಾಂಬವ ಮಠದ ಷಡಕ್ಷರಮುನಿ ಸ್ವಾಮೀಜಿ ಕರೆ

‘ಒಳ ಮೀಸಲಾತಿಗೆ ಸಂಘಟಿತ ಹೋರಾಟ ನಡೆಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿರಿಯೂರು: ‘ರಾಜ್ಯದ ಹೊಲೆ ಮಾದಿಗ ಉಪಜಾತಿಯ ಸಮುದಾಯಗಳು ಒಗ್ಗೂಡಿ ಹೋರಾಟ ನಡೆಸುವ
ಮೂಲಕ ಸಾಂವಿಧಾನಿಕ ಹಕ್ಕು ಪಡೆಯಲು ಇದು ಸಕಾಲ’ ಎಂದು ಆದಿಜಾಂಬವ ಮಠದ ಷಡಕ್ಷರಮುನಿ ಸ್ವಾಮೀಜಿ ಹೇಳಿದರು.

ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಸ್ವಾಮೀಜಿ, ‘ಒಳಮೀಸಲು ಹಕ್ಕನ್ನು ನೀಡಲು ರಾಜ್ಯಗಳಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಇದಕ್ಕೆ ಸಂವಿಧಾನ ತಿದ್ದುಪಡಿಯ ಅವಶ್ಯಕತೆ ಇಲ್ಲ ಎಂದು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠ ಅಭಿಪ್ರಾಯ ವ್ಯಕ್ತಪಡಿಸಿದ್ದು, ರಾಜ್ಯದಲ್ಲಿ ಮೀಸಲು ವಂಚಿತ ಬಹುಸಂಖ್ಯಾತ ಅಸ್ಪೃಶ್ಯ ಸಮುದಾಯಗಳಿಗೆ ತಮ್ಮ ಹಕ್ಕು ಪಡೆಯಲು ಜೀವ ಬಂದಂತಾಗಿದೆ. 2004ರಲ್ಲಿ ಇದೇ ಸುಪ್ರೀಂ ಕೋರ್ಟ್‌ನಲ್ಲಿ ಆಂಧ್ರಪ್ರದೇಶಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಒಳಮೀಸಲು ಕಲ್ಪಿಸಲು ಸಾಂವಿಧಾನಿಕ ತಿದ್ದುಪಡಿ ಅಗತ್ಯ ಎಂದು ತೀರ್ಪು ಬಂದಿತ್ತು. ಈಗ ಐವರು ನ್ಯಾಯಮೂರ್ತಿಗಳ ಪೀಠದಿಂದ ವ್ಯತಿರಿಕ್ತ ಅಭಿಪ್ರಾಯ ಬಂದಿರುವುದರಿಂದ ಒಳಮೀಸಲಿನ ಮೂರು ದಶಕಗಳ ಹೋರಾಟಕ್ಕೆ ಮರುಜೀವ ಬಂದಂತಾಗಿದೆ’ ಎಂದರು.

‘ಇಪ್ಪತ್ತು ವರ್ಷಗಳಿಂದ ಅಧಿಕಾರ ನಡೆಸಿರುವ ಎಲ್ಲ ಸರ್ಕಾರಗಳು ಅಸ್ಪೃಶ್ಯ ಶೋಷಿತರಿಗೆ→ ಸಾಮಾಜಿಕ ನ್ಯಾಯ ಕಲ್ಪಿಸುವ ಭರವಸೆ ನೀಡಿದ್ದು ಬಿಟ್ಟು ಬೇರೇನೂ ಮಾಡಲಿಲ್ಲ. ಅಸ್ಪೃಶ್ಯ ಸಮುದಾಯದ ಹಿರಿಯ ರಾಜಕೀಯ ನೇತಾರರೇ ಇದಕ್ಕೆ ಅಡ್ಡಗಾಲಾಗಿದ್ದರು ಎಂಬುದು ಬೇಸರದ ಸಂಗತಿ’ ಎಂದು ಹೇಳಿದರು.

‘2009ರಲ್ಲಿ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ಡಿ. ಸುಧಾಕರ್ ಅವರು ಪರಿಶಿಷ್ಟರಿಗೆ ಮೀಸಲಾತಿ ಹಂಚಿಕೆಯಲ್ಲಿ ಆಗಿರುವ ತಾರತಮ್ಯದ ಸಮೀಕ್ಷೆಗೆ ₹ 9 ಕೋಟಿ ಬಿಡುಗಡೆ ಮಾಡುವ ಮೂಲಕ ಸದಾಶಿವ ಆಯೋಗಕ್ಕೆ ಮರುಜೀವ ನೀಡಿದ್ದರು. ನಂತರ ಸಮಾಜ ಕಲ್ಯಾಣ ಖಾತೆ ಸಚಿವರಾಗಿದ್ದ ಈಗಿನ ಸಂಸದ ಎ.ನಾರಾಯಣಸ್ವಾಮಿ ಸದಾಶಿವ ಆಯೋಗದ ವರದಿಯನ್ನು ಸರ್ಕಾರದ ಪರವಾಗಿ ಅಧಿಕೃತವಾಗಿ ಸ್ವೀಕರಿಸಿದ್ದರು. 11 ವರ್ಷಗಳ ನಂತರವಾದರೂ ಕೇಂದ್ರಕ್ಕೆ ಆಯೋಗದ ವರದಿಯನ್ನು ಶಿಫಾರಸು ಮಾಡುವಂತೆ ಮಾದಿಗ ಸಮುದಾಯದ ರಾಜಕೀಯ ನೇತಾರರು ಮಾಡುತ್ತಿರುವ ಹಕ್ಕೊತ್ತಾಯ ಇನ್ನಷ್ಟು ಗಟ್ಟಿ ದನಿಯಲ್ಲಿ ಕೇಳಿಬರಬೇಕು’ ಎಂದು ಸ್ವಾಮೀಜಿ ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು