ಶನಿವಾರ, ಸೆಪ್ಟೆಂಬರ್ 25, 2021
29 °C

ಕಾಂಗ್ರೆಸ್‌ ಬಲವರ್ಧನೆಗೆ ಶ್ರಮಿಸಿದ ಆಸ್ಕರ್‌: ಮಾಜಿ ಸಚಿವ ಎಚ್.ಆಂಜನೇಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕೊನೆಯ ಸಾಲಿನಲ್ಲಿ ಕುಳಿತ ಪಕ್ಷದ ನಿಷ್ಠಾವಂತರನ್ನು ಗುರುತಿಸಿ ಮೊದಲ ಸಾಲಿನ ನಾಯಕರನ್ನಾಗಿ ಬೆಳೆಸಿದ ಆಸ್ಕರ್‌ ಫರ್ನಾಂಡಿಸ್‌ ಅವರು ಕಾಂಗ್ರೆಸ್‌ ಬಲವರ್ಧನೆಗೆ ಅಪಾರವಾಗಿ ಶ್ರಮಿಸಿದ್ದರು ಎಂದು ಮಾಜಿ ಸಚಿವ ಎಚ್‌.ಆಂಜನೇಯ ಸ್ಮರಿಸಿದ್ದಾರೆ.

‘ಪಕ್ಷ ಸಂಘಟನೆಯಲ್ಲಿ ನಿಷ್ಠೆಯಿಂದ ತೊಡಗಿಸಿಕೊಂಡ ಕಾರ್ಯಕರ್ತರನ್ನು ಗುರುತಿಸುವ ಗರುಡ ದೃಷ್ಟಿ ಅವರಿಗಿತ್ತು. ದೇಶದ ಮೂಲೆ–ಮೂಲೆಯಲ್ಲಿರುವ ಕಾರ್ಯಕರ್ತರನ್ನು ಗುರುತಿಸಿ ಅರ್ಹ ಸ್ಥಾನ ಕಲ್ಪಿಸುತ್ತಿದ್ದರು. ಕೆಪಿಸಿಸಿ ಅಧ್ಯಕ್ಷರಾಗಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ನನ್ನಂತಹ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಯುವ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ಮಾಡಿದರು. ನನ್ನ ರಾಜಕೀಯ ಶ್ರೇಯೋಭಿವೃದ್ಧಿಯಲ್ಲಿ ಆಸ್ಕರ್‌ ಅವರ ಕೊಡುಗೆ ಅಪಾರವಾಗಿದೆ. ನನ್ನಂತಹ ನೂರಾರು ಜನರಿಗೆ ರಾಜಕೀಯ ಭವಿಷ್ಯ ಕಲ್ಪಿಸಿದರು. ಇಂದಿರಾ ಗಾಂಧಿ ಹಾಗೂ ರಾಜೀವ ಗಾಂಧಿ ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದರು’ ಎಂದು ನೆನಪಿಸಿಕೊಂಡಿದ್ದಾರೆ.

‘ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ಲೋಕಸಭೆ, ವಿಧಾನಸಭೆ ಟಿಕೆಟ್ ಕೊಡಿಸಿ ಹುಬ್ಬೇರಿಸುವಂತೆ ಮಾಡಿದ್ದು ಮಾದರಿ ಕಾರ್ಯವಾಗಿತ್ತು. ಸರ್ಕಾರ ಅಧಿಕಾರಕ್ಕೆ ಬಂದಾಗ ಪ್ರಮುಖ ಹುದ್ದೆಗಳು ಸಾಮಾನ್ಯ ಕಾರ್ಯಕರ್ತರಿಗೆ ಲಭಿಸುವಂತೆ ಬಹಳಷ್ಟು ಶ್ರಮಿಸುತ್ತಿದ್ದರು. ಎಷ್ಟೇ ಉನ್ನತ ಸ್ಥಾನಕ್ಕೆ ಹೋಗಿದ್ದರೂ ಸಾಮಾನ್ಯರಂತೆ ಎಲ್ಲರೊಂದಿಗೆ ಬೆರೆಯುತ್ತಿದ್ದರು. ಅವರನ್ನು ಕಳೆದುಕೊಂಡ ಪಕ್ಷ ಹಾಗೂ ನನ್ನಂತ ಕಾರ್ಯಕರ್ತರಿಗೆ ಅಪಾರ ನೋವಾಗಿದೆ’ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು