ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜವನಗೊಂಡನಹಳ್ಳಿ: ಬೆಳೆಹಾನಿ, ಗ್ಯಾಸ್ ಕಂಪನಿ ವಿರುದ್ಧ ಆಕ್ರೋಶ

ರೈತರಿಗೆ ತಿಳಿಸದೇ ಜಮೀನಿನಲ್ಲಿ ಪೈಪ್‌ಲೈನ್‌ ಕಾಮಗಾರಿ
Last Updated 31 ಜುಲೈ 2021, 5:13 IST
ಅಕ್ಷರ ಗಾತ್ರ

ಜವನಗೊಂಡನಹಳ್ಳಿ (ಹಿರಿಯೂರು): ತಾಲ್ಲೂಕಿನ ಜವನಗೊಂಡನಹಳ್ಳಿಯಲ್ಲಿ ಗ್ಯಾಸ್ ಕಂಪನಿಯವರು ರೈತರಿಗೆ ತಿಳಿಸದೆ ಪೈಪ್‌ಲೈನ್ ಅಳವಡಿಸಲು ತೋಟದ ಬೆಳೆಗಳನ್ನು ಹಾಳು ಮಾಡಿದ್ದಾರೆ ಎಂದು ಆಕ್ರೋಶಗೊಂಡ ರೈತರು ಶುಕ್ರವಾರ ಕಂಪನಿ ಅಧಿಕಾರಿಗಳಿಗೆ ಘೇರಾವ್ ಹಾಕಿ ಪ್ರತಿಭಟನೆ ನಡೆಸಿದರು.

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಸಂಸ್ಥೆಯವರು ಹಾಸನದಿಂದ ಚರ್ಲಪಲ್ಲಿವರೆಗೆ ಒಯ್ಯುತ್ತಿರುವ ಎಲ್‌ಪಿಜಿ ಗ್ಯಾಸ್ ಪೈಪ್‌ಲೈನ್ ಜವನಗೊಂಡನಹಳ್ಳಿ ಹೋಬಳಿಯ ಸಂ.ರಂಗಯ್ಯ ಅವರ ತೋಟದಲ್ಲಿ ಹಾದು ಹೋಗುತ್ತಿದ್ದು, ಮಾಲೀಕರಿಗೆ ಮಾಹಿತಿ ನೀಡದೆ, ತೋಟದಲ್ಲಿ ಬೆಳೆದಿದ್ದ ಕರಿಬೇವು, ಮಾವಿನ ಗಿಡಗಳನ್ನು ಹಿಟಾಚಿ, ಡೋಜರ್ ಬಳಸಿ ಕಿತ್ತುಹಾಕಿರುವ ಸುದ್ದಿ ತಿಳಿದ ನೂರಾರು ರೈತರು ಗ್ಯಾಸ್ ಕಂಪನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕಾಮಗಾರಿ ತಡೆದರು.

‘ಕಂಪನಿಯವರು ತಮ್ಮ ಕಚೇರಿ ತೆರೆಯಲು ಧರ್ಮಪುರ ಮತ್ತು ಜವನಗೊಂಡನಹಳ್ಳಿಗಳಲ್ಲಿ ಪ್ರತಿ ಎಕರೆಗೆ ₹ 20 ಲಕ್ಷ ದರದಲ್ಲಿ ಜಮೀನು ಖರೀದಿಸಿದ್ದಾರೆ. ಆದರೆ ರೈತರಿಗೆ ಕೇವಲ ₹ 3.50 ಲಕ್ಷ ಪರಿಹಾರ ನೀಡಲಾಗುತ್ತಿದೆ. ಈ ಅನ್ಯಾಯ ಸರಿಪಡಿಸದೇ ಹೋದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಎಚ್ಚರಿಸಿದರು.

ರೈತರು ಪ್ರತಿಭಟನೆ ನಡೆಸುತ್ತಿದ್ದ ಮಾಹಿತಿ ಪಡೆದ ತಹಶೀಲ್ದಾರ್ ಶಿವಕುಮಾರ್, ಗ್ರಾಮಾಂತರ ಪೊಲೀಸ್ ಠಾಣೆ ಎಸ್ಐ ಪರಮೇಶ್ ಸ್ಥಳಕ್ಕೆ ಬಂದು, ರೈತರ ಜಮೀನು ಹಾಗೂ ಅಲ್ಲಿರುವ ಎಲ್ಲಾ ಫಸಲಿನ ಪಂಚನಾಮೆ ಮಾಡಿ ನ್ಯಾಯಯುತ ಪರಿಹಾರ ಕೊಡುವವರೆಗೆ ಕಾಮಗಾರಿ ನಡೆಸಬಾರದು ಎಂದು ಕಂಪನಿ ಅಧಿಕಾರಿಗಳಿಗೆ
ಸೂಚಿಸಿದರು.

‘ತೋಟಗಾರಿಕೆ, ಕೃಷಿ ಮತ್ತು ಅರಣ್ಯ ಇಲಾಖೆಗಳಿಂದ ಬೆಳೆ ಸಮೀಕ್ಷೆ ಆಗಿ ರೈತರು ಒಪ್ಪುವಂತಹ ಪರಿಹಾರ ನೀಡುವವರೆಗೆ ಕಾಮಗಾರಿ ನಡೆಸಲು ಬಿಡುವುದಿಲ್ಲ. ಪರಿಹಾರದ ಮೊತ್ತ ಕಡಿಮೆ ಅನಿಸಿದಲ್ಲಿ ನ್ಯಾಯಾಲಯಕ್ಕೆ ಹೋಗಿ ಎಂಬ ಸಿದ್ಧ ಉತ್ತರ ಕೇಳಿ ಕೇಳಿ ರೋಸಿ ಹೋಗಿದ್ದೇವೆ. ನಮ್ಮ ಭೂಮಿಗೆ ನ್ಯಾಯಯುತ ಪರಿಹಾರ ಪಡೆಯಲು ನಾವು ನ್ಯಾಯಾಲಯಕ್ಕೆ ತಿರುಗಾಡಬೇಕೆ? ರಾಜ್ಯದ ಬೇರೆ ಕಡೆ ನ್ಯಾಯಾಲಯಗಳು ಘೋಷಿಸಿರುವ ಪರಿಹಾರವನ್ನು ಕೊಡಲು ನಿಮಗೇನು ಕಷ್ಟ’ ಎಂದು ತಿಪ್ಪೇಸ್ವಾಮಿ
ಪ್ರಶ್ನಿಸಿದರು.

ಭೂಸ್ವಾಧೀನಾಧಿಕಾರಿ ರಮೇಶ್, ಕಂಪನಿ ಎಂಜಿನಿಯರ್ ಶಿವಕುಮಾರ್, ರೈತರಾದಕಂದಿಕೆರೆ ಜಗದೀಶ್, ವೈ. ಶಿವಣ್ಣ, ಕೆಆರ್ ಹಳ್ಳಿ ರವಿ, ತಿಮ್ಮಾರೆಡ್ಡಿ, ರಂಗಸ್ವಾಮಿ, ಶಿವಣ್ಣ, ಕುಮಾರ್, ವೀರಣ್ಣ, ಈರಣ್ಣ, ಗೋಪಾಲಪ್ಪ, ಚಿತ್ರ ಲಿಂಗಪ್ಪ, ಋಷಿಕೇಶ್, ರಾಮಣ್ಣ,
ಸಿ. ಪಾತಲಿಂಗಪ್ಪ, ನರೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT