ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕನಹಟ್ಟಿ: ಕೆರೆ ಏರಿ ಮೇಲೆ ಜಾಲಿಗಿಡದ ಕಾರುಬಾರು

ಕಣ್ಮುಚ್ಚಿ ಕುಳಿತ ಜನಪ್ರತಿನಿಧಿಗಳು, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು
Last Updated 20 ಅಕ್ಟೋಬರ್ 2021, 6:47 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಜಿಲ್ಲೆಯ ಐತಿಹಾಸಿಕ ಹಿನ್ನೆಲೆಯಿರುವ ಪಟ್ಟಣದ ಗುರು ತಿಪ್ಪೇರುದ್ರಸ್ವಾಮಿ ಚಿಕ್ಕಕೆರೆಯ ಏರಿಯ ಮೇಲೆ ಯಥೇಚ್ಛವಾಗಿ ಜಾಲಿಗಿಡಗಳು ಬೆಳೆದಿರುವ ಪರಿಣಾಮವಾಗಿ ಕೆರೆ ಏರಿಯು ಬಿರುಕು ಬಿಡುವ ಸಂಭವವಿದೆ ಎಂದು ಪಟ್ಟಣದ ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಚಿಕ್ಕಕೆರೆಯು 16ನೇ ಶತಮಾನದಲ್ಲಿ ಕಾಯಕಯೋಗಿ ಗುರು ತಿಪ್ಪೇರುದ್ರಸ್ವಾಮಿಯವರು ನಾಯಕನಹಟ್ಟಿ ಹೋಬಳಿಯಲ್ಲಿ ಕಟ್ಟಿಸಿದ ಸುಸಜ್ಜಿತ 5 ಕೆರೆಗಳಲ್ಲಿ ಒಂದು ಎನ್ನುವ ಪ್ರತೀತಿ ಇದೆ. ಹಾಗಾಗಿ ಈ ಭಾಗದ ಜನರಿಗೆ ಈ ಕೆರೆಗಳೆಂದರೆ ಅಪಾರ ಭಕ್ತಿಭಾವವಿದೆ. ಇಂದಿಗೂ ಈ ಕೆರೆಗಳು ಸುಸ್ಥಿತಿಯಲ್ಲಿವೆ. ಆದರೆ ಕೆರೆಯಲ್ಲಿ ಮತ್ತು ಕೆರೆಯ ಏರಿಯ ಮೇಲೆ ಬೆಳದಿರುವ ಜಾಲಿಗಿಡಗಳು ಕೆರೆಯ ಸೌಂದರ್ಯವನ್ನು ಹಾಳು ಮಾಡಿವೆ.

‘ಪಟ್ಟಣದ ಚಿಕ್ಕಕೆರೆಯ ಏರಿಯು ಸುಮಾರು 300 ಮೀಟರ್ ಉದ್ದವಿದ್ದು, 60 ಅಡಿ ಅಗಲವಿದೆ. ಇಂತಹ ಕೆರೆ ಏರಿಯ ಮೇಲೆ ಹಲವು ವರ್ಷಗಳಿಂದ ಜಾಲಿಗಿಡಗಳು ಬೆಳೆದು ನಿಂತಿವೆ. ಜೊತೆಗೆ ಇದರ ಬೇರುಗಳು ವಿಶಾಲವಾಗಿ ಹರಡಿಕೊಳ್ಳುವ ಕಾರಣ ಕೆರೆಯ ಏರಿಯ ಮೇಲೆ ಬೆಳೆದಿರುವ ಜಾಲಿಗಿಡಗಳಿಂದ ಏರಿಯು ಬಿರುಕು ಬಿಡುವ ಸಂಭವವಿದೆ. ಇದರಿಂದ ಮುಂದಿನ ದಿನಗಳಲ್ಲಿ ಭಾರಿ ಅನಾಹುತ ಎದುರಾಗುವ ಸಂಭವವಿದೆ. ಕೆರೆ ಏರಿಯ ಮೇಲೆ ರಾಜ್ಯಹೆದ್ದಾರಿ-45 ಹಾದು ಹೋಗಿದ್ದು, ಯಾವಾಗಲೂ ವಾಹನ ಸಂಚಾರ ದಟ್ಟಣೆ ಯಥೇಚ್ಛವಾಗಿರುತ್ತದೆ. ಕೆರೆ ಏರಿಯ ಪಕ್ಕದ ಜಾಲಿ ಗಿಡಗಳು ರಸ್ತೆಯ ಪಕ್ಕಕ್ಕೆ ಹರಡಿಕೊಂಡಿವೆ. ಇದರಿಂದ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡಿವೆ’ ಎಂದು ಗ್ರಾಮಸ್ಥರಾದ ಶಿವಪ್ರಕಾಶ್, ಪಿ. ರುದ್ರೇಶ ಆತಂಕ ವ್ಯಕ್ತಪಡಿಸಿದರು.

ನಾಯಕನಹಟ್ಟಿ ಚಿಕ್ಕಕೆರೆಯು ನೂರಾರು ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಸುತ್ತದೆ. ಇದು ಸುಮಾರು 389.19 ಎಕರೆ ವಿಸ್ತೀರ್ಣ ಹೊಂದಿದ್ದು, ಪಟ್ಟಣದ ಸರ್ವೆ ನಂ. 131ರಲ್ಲಿ ಕಂಡು ಬರುತ್ತದೆ. ಇಷ್ಟು ದೊಡ್ಡ ಪ್ರಮಾಣದ ಕೆರೆಯಲ್ಲಿ ನೀರು ಸಂಗ್ರಹವಾದಾಗ ನಾಯಕನಹಟ್ಟಿ ಹೋಬಳಿಯ ಸುಮಾರು 20ಕ್ಕೂ ಹೆಚ್ಚು ಗ್ರಾಮಗಳ ಅಂತರ್ಜಲದ ಮಟ್ಟ ಹೆಚ್ಚುತ್ತದೆ. ಆದರೆ ಕಳೆದ ಕೆಲ ವರ್ಷಗಳಿಂದ ಮಳೆಯ ಕೊರತೆಯಿಂದ ಚಿಕ್ಕಕೆರೆಗೆ ನೀರು ಬಾರದೇ ಇರುವುದರಿಂದ ಯಥೇಚ್ಛವಾಗಿ ಬೆಳೆದಿರುವ ಜಾಲಿಗಿಡಗಳಿಂದ ಕೆರೆಗೆ ಏನೂ ಅಪಾಯವಾಗಿಲ್ಲ. ಒಂದು ವೇಳೆ ಕೆರೆಗೆ ನೀರು ಬಂದರೆ ಕೆರೆಯ ಏರಿಯ ಮೇಲೆ ಬೆಳೆದಿರುವ ಜಾಲಿಗಿಡಗಳ ಬೇರುಗಳು ನೀರನ್ನು ಹೀರಿಕೊಂಡು ಏರಿಯನ್ನು ಬಿರುಕುಗೊಳಿಸುತ್ತವೆ. ಇದರಿಂದ ಸಾಕಷ್ಟು ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳು ಇವೆ ಎನ್ನಲಾಗಿದೆ.

ಈ ಚಿಕ್ಕಕೆರೆಯು ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಒಳಪಡಲಿದೆ. ಕೆರೆ ಏರಿಯ ಮೇಲೆ ಇಷ್ಟೆಲ್ಲ ಸಮಸ್ಯೆ
ಗಳಿದ್ದರೂ ಸಣ್ಣ ನೀರಾವರಿ ಇಲಾಖೆಯ ಯಾವೊಬ್ಬ ಎಂಜಿನಿಯರ್‌, ಅಧಿಕಾರಿ ಸಹ ಇತ್ತಕಡೆ ಗಮನ ಹರಿಸಿಲ್ಲ. ಕೆರೆಯ ಪುನಶ್ಚೇತನಕ್ಕೆ ದುರಸ್ತಿಗೆ ಸರ್ಕಾರ ಪ್ರತಿವರ್ಷ ಲಕ್ಷಾಂತರ ರೂಪಾಯಿ ಅನುದಾನ ಮೀಸಲಿಟ್ಟಿದರೂ ಅದನ್ನು ಬಳಕೆ ಮಾಡುವಲ್ಲಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು, ಎಂಜಿನಿಯರ್‌ಗಳು ಮತ್ತು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಇವರು ತಿಂಗಳಿಗೆ ಒಮ್ಮೆಯೂ ಕೆರೆಯ ಬಳಿ ಸುಳಿದಾಡುವುದಿಲ್ಲ’ ಎಂದು ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಟಿ. ರುದ್ರಮುನಿ ಆಕ್ರೋಶ ವ್ಯಕ್ತಪಡಿಸುತ್ತಾರೆ.

........

ಕೆರೆ ಪರಿಸರ ರಕ್ಷಣೆಯು ತಾಲ್ಲೂಕು ಆಡಳಿತದ ಕರ್ತವ್ಯವಾಗಿದೆ. ಒಂದು ವಾರದಲ್ಲಿ ಕೆರೆಏರಿಯ ಮೇಲೆ ಬೆಳೆದಿರುವ ಜಾಲಿಗಿಡಗಳನ್ನು ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.

–ಎನ್. ರಘುಮೂರ್ತಿ, ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT