ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಬಿ ಹರಿದ ಚೆಕ್‌‌ ಡ್ಯಾಂ, ಬ್ಯಾರೇಜ್‌

Last Updated 19 ಜುಲೈ 2021, 6:11 IST
ಅಕ್ಷರ ಗಾತ್ರ

ಹೊಸದುರ್ಗ: ಪಟ್ಟಣ ಸೇರಿ ತಾಲ್ಲೂಕಿನ ಹಲವೆಡೆ ಶನಿವಾರ ರಾತ್ರಿಯಿಂದ ಭಾನುವಾರ ದಿನವಿಡೀ ಆಗಾಗ ಹದ ಮಳೆಯಾಗಿದೆ.

ಬೆಳಿಗ್ಗೆಯಿಂದಲೂ ತಾಲ್ಲೂಕಿನಲ್ಲಿ ಮೋಡ ಕವಿದ ವಾತಾವರಣವಿತ್ತು. ಆಗಾಗ ಶೀತಗಾಳಿಯೊಂದಿಗೆ ಮಳೆ ಸುರಿಯಿತು. ಇದರಿಂದಾಗಿ ಕೃಷಿ ಚುಟುವಟಿಕೆಗೆ ಹಿನ್ನಡೆಯಾಯಿತು.

ಮಾಡದಕೆರೆ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದ್ದು, ಇಲ್ಲಿನ ಹಿರೇಹಳ್ಳ, ಗುಂಡಿಹಳ್ಳ, ಕಾನಿಹಳ್ಳ ಸೇರಿ ಇನ್ನಿತರ ಹಳ್ಳಗಳಲ್ಲಿ ಸಾಕಷ್ಟು ನೀರು ಹರಿಯುತ್ತಿದೆ. ಹಳ್ಳದ ವ್ಯಾಪ್ತಿಯಲ್ಲಿರುವ ಚೆಕ್‌ ಡ್ಯಾಂ, ಬ್ಯಾರೇಜ್‌, ಗೋಕಟ್ಟೆಗಳು ಭರ್ತಿಯಾಗಿದ್ದು, ವಿವಿಧ ಹಳ್ಳದ ಮಾರ್ಗವಾಗಿ ವಾಣಿವಿಲಾಸ ಜಲಾಶಯಕ್ಕೆ ನೀರು ಹರಿಯುತ್ತಿದೆ.

ಕಸಬಾ, ಮತ್ತೋಡು, ಶ್ರೀರಾಂಪುರ ಹೋಬಳಿ ವ್ಯಾಪ್ತಿಯಲ್ಲಿಯೂ ಹದ ಮಳೆಯಾಗಿದೆ. ತಗ್ಗು ಪ್ರದೇಶದ ಜಮೀನುಗಳಲ್ಲಿ ನೀರು ನಿಂತಿದೆ. ಅಡಿಕೆ, ತೆಂಗು ಬಾಳೆ ತೋಟಗಾರಿಕೆ ಬೆಳೆಗಳಿಗೆ ಜೀವಕಳೆ ಬಂದಿದೆ. ಇದರಿಂದ ಬಹುತೇಕ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದೆ.

ರಾಗಿ ಬಿತ್ತನೆಗೆ ಹದ ಮಳೆ ನೆರವಾಗಿದೆ. ಎರಡು ದಿನಗಳಿಂದ ಬರುತ್ತಿರುವ ಮಳೆಯೂ ಹೆಸರು ಬೆಳೆ ಕಟಾವು ಮಾಡಿರುವ ರೈತರ ಸುಗ್ಗಿ ಕಾರ್ಯಕ್ಕೆ ತೊಂದರೆಯನ್ನುಂಟು ಮಾಡಿದೆ. ಹೆಸರು ಬೆಳೆ ಹೂವು, ಹೀಚು ಹಾಗೂ ಕಾಯಿಗಟ್ಟುವ ಹಂತದಲ್ಲಿ ಮಳೆ ಕೈಕೊಟ್ಟಿತ್ತು. ಇದರಿಂದಾಗಿ ಹಲವೆಡೆ ಶೇ 50ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಇಳುವರಿ ಕುಸಿತವಾಯಿತು. ಈ ಬೆಳೆ ಕಟಾವಿಗೆ ಬಂದಿದ್ದರಿಂದ ರೈತರು ಹೆಸರು ಕಿತ್ತು ಸುಗ್ಗಿ ಕಾರ್ಯದಲ್ಲಿ ತೊಡಗಿದ್ದರು. ಈ ಕಾರ್ಯಕ್ಕೆ ಅಡ್ಡಿಯಾಗಿದೆ. ಈ ಸಮಯದಲ್ಲಿ ಮಳೆ ಬರುತ್ತಿರುವುದು ಬೆಳೆಗೆ ಪೂರ್ಣ ಪ್ರಮಾಣದಲ್ಲಿ ನೆರವಾಗುವುದಿಲ್ಲ.

6 ಮನೆಗಳಿಗೆ ಭಾಗಶಃ ಹಾನಿ:
ತಾಲ್ಲೂಕಿನ ಹಲವೆಡೆ ಶನಿವಾರ ರಾತ್ರಿ ಸುರಿದ ಮಳೆಗೆ 6 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ₹ 10.50 ಲಕ್ಷ ನಷ್ಟ ಉಂಟಾಗಿದೆ ಎಂದು ಕಂದಾಯ ಇಲಾಖೆ ಅಂದಾಜಿಸಿದೆ.

ಕಸಬಾ ಹೋಬಳಿಯ ಗೊರವಿಗೊಂಡನಹಳ್ಳಿ ಗ್ರಾಮದ ಪ್ರಹ್ಲಾದ, ರತ್ನಮ್ಮ, ಮಧುರೆ ಯೋಗೀಶ್‌, ಕೆಲ್ಲೋಡು ಗುರುಸಿದ್ದಪ್ಪ, ಅತ್ತಿಗಟ್ಟ ಪದ್ಮಾ, ಹಾಗೂ ನಾಯಿಗೆರೆ ಗ್ರಾಮದ ಪದ್ಮಾವತಿ ಅವರ ಮನೆ ಗೋಡೆ ಕುಸಿದಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT