ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಗಳಲ್ಲಿಲ್ಲ ಸ್ವಚ್ಛತೆ; ನೀಡಬೇಕಿದೆ ಆದ್ಯತೆ

ಒಣ, ಹಸಿ ಕಸದಿಂದ ಅಪಾಯಕಾರಿ ಸಾಂಕ್ರಾಮಿಕ ರೋಗಗಳ ಭೀತಿ l ಜಾಗೃತಿಗೆ ಜಿಲ್ಲಾ ಪಂಚಾಯಿತಿ ಸಜ್ಜು
Last Updated 15 ಫೆಬ್ರುವರಿ 2021, 4:56 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿನ ಖಾಲಿ ಜಾಗಗಳಲ್ಲಿ ಕಸದ ರಾಶಿ, ತ್ಯಾಜ್ಯದಿಂದ ತುಂಬಿ ತುಳುಕುವ ಚರಂಡಿಗಳಿಂದ ರಸ್ತೆಗೆ ಹರಿಯುವ ಕೊಳಚೆ ನೀರು, ಎಲ್ಲೆಂದರಲ್ಲಿ ಕಸ ಎಸೆಯುವುದ‌ನ್ನು ರೂಢಿ ಮಾಡಿಕೊಂಡಿರುವ ಜನರು, ಕಣ್ಣಿಗೆ ರಾಚುವಷ್ಟು ಪರಿಸರಕ್ಕೆ ಹಾನಿಕಾರಕವಾದ ಪ್ಲಾಸ್ಟಿಕ್‌... ಹೀಗಾಗಿ ಸ್ವಚ್ಛತೆ ಎಂಬುದು ಹಲವು ಗ್ರಾಮಗಳಲ್ಲಿ ಮರೀಚಿಕೆಯಾಗಿದೆ.

ಗ್ರಾಮಗಳ ಸ್ವಚ್ಛತೆಯಿಂದಲೇ ದೇಶ ಸುಂದರವಾಗಲು ಸಾಧ್ಯ ಎಂಬುದು ಗಾಂಧೀಜಿ ಅವರ ಪರಿಕಲ್ಪನೆ. ಇದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸ್ವಚ್ಛತೆಗೆ ಆದ್ಯತೆ ನೀಡಿದ್ದರೂ ಜಿಲ್ಲೆಯಲ್ಲಿ ಇದು ಕನಸಾಗಿಯೇ ಉಳಿದಿದೆ.

ಬೇಸಿಗೆ ಕಾಲದಲ್ಲಂತೂ ಜಿಲ್ಲೆಯ ನೀರಿಲ್ಲದ ಕೆರೆಗಳಲ್ಲೂ ತ್ಯಾಜ್ಯ ತುಂಬಿರುತ್ತದೆ. ಮನೆಗಳಲ್ಲಿನ ಕಸ, ಪ್ಲಾಸ್ಟಿಕ್ ವಸ್ತುಗಳು, ಮದ್ಯದ ಬಾಟಲಿಗಳು ಹೀಗೆ ಅನೇಕ ವಸ್ತುಗಳು ಬಿದ್ದಿರುತ್ತವೆ. ಅಲ್ಲಿ ಬಹಿರ್ದೆಸೆಗೂ ಹೋಗುವವರೂ ಇದ್ದಾರೆ. ಗ್ರಾಮದ ಜನರಿಗೆ ನೀರು ಪೂರೈಸುವ ದೃಷ್ಟಿಯಿಂದ ನಿರ್ಮಾಣವಾದ ಕೆರೆಗಳು ಹಲವೆಡೆ ಮಲಿನಗೊಂಡಿವೆ. ಜಲಚರ ಜೀವಿಗಳಿಗೂ ಇದರಿಂದ ಹಾನಿಯಾಗಿದೆ. ಅವುಗಳನ್ನು ಹೂಳೆತ್ತಿ ಸ್ವಚ್ಛಗೊಳಿಸಲು ಕೋಟಿಗಟ್ಟಲೆ ಖರ್ಚು ಮಾಡಬೇಕಿದೆ. ಅದಕ್ಕಾಗಿ ಕೆರೆಗಳಿಗೆ ಕಸ ಎಸೆಯುವುದನ್ನು ನಿಲ್ಲಿಸಲು ಸಾರ್ವಜನಿಕರು ಮುಂದಾಗಬೇಕಿದೆ.

ತಿಪ್ಪೆಯಂತೆ ನಿರ್ಮಾಣವಾಗುವ ತ್ಯಾಜ್ಯದ ರಾಶಿಯನ್ನು ಸುಡುವ ಪ್ರಕ್ರಿಯೆಯೂ ನಡೆಯುತ್ತಿದೆ. ಇದು ಪರಿಸರಕ್ಕೆ ಮಾತ್ರವಲ್ಲ, ಅಕ್ಕಪಕ್ಕ ವಾಸಿಸುವ ಜನರ ಆರೋಗ್ಯದ ಮೇಲೂ ದುಷ್ಟರಿಣಾಮ ಬೀರುತ್ತಿದೆ. ತ್ಯಾಜ್ಯ ಸುಡಬೇಡಿ ಎಂದು ಅಧಿಕಾರಿಗಳು, ಗ್ರಾಮದ ಮುಖಂಡರು ಹೇಳಿದರೂ ಕೆಲವರು ಅದಕ್ಕೆ ಸ್ಪಂದಿಸುತ್ತಿಲ್ಲ.

ಇನ್ನು ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳು ಈವರೆಗೂ ಇಲ್ಲದಿರುವುದು ಕೂಡ ತ್ಯಾಜ್ಯ ಹೆಚ್ಚಲು ಕಾರಣವಾಗಿದೆ. ಪೌರಕಾರ್ಮಿಕರ ಕೊರತೆಯೂ ಇದೆ. ಕೆಲವೆಡೆ ಇದ್ದರೂ ರಸ್ತೆ, ಚರಂಡಿ ಸ್ವಚ್ಛಗೊಳಿಸಲು ಹದಿನೈದು ದಿನಗಳಿಗೊಮ್ಮೆ ಬರುತ್ತಾರೆ. ಮತ್ತೆ ಬರುವಷ್ಟರಲ್ಲಿ ಯಥಾಸ್ಥಿತಿ ತಲುಪಿರುತ್ತದೆ ಎಂಬುದು ಸಾರ್ವಜನಿಕರ ಆರೋಪ.

ಸ್ವಚ್ಛತೆ ಕುರಿತು ಜಿಲ್ಲಾ ಪಂಚಾಯಿತಿ ಎಚ್ಚೆತ್ತುಕೊಂಡಿದೆ. ಗ್ರಾಮೀಣ ಜನರ ಜೀವನವನ್ನು ಸುಧಾರಿಸುವ ನಿಟ್ಟಿನಲ್ಲಿ ಸ್ವಚ್ಛ ವಾತಾವರಣ ನಿರ್ಮಿಸಲು ಪಣತೊಟ್ಟಿದೆ. ಅದಕ್ಕಾಗಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಘನತ್ಯಾಜ್ಯ ನಿರ್ವಹಣಾ ಘಟಕಗಳನ್ನು ನಿರ್ಮಿಸಲು ಮುಂದಾಗಿದೆ. ಆದರೆ, ಬಹುತೇಕ ಗ್ರಾಮ ಪಂಚಾಯಿತಿಗಳಿಗೆ ಜಾಗದ ಕೊರತೆ ಎದುರಾಗಿದೆ.

ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಬೇಕು ಎಂಬುದು ಸರ್ಕಾರದ ಆಶಯ. 2022ರ ಒಳಗೆ ಇದನ್ನು ಸಫಲವಾಗಿಸಲು ಜಿಲ್ಲಾ ಪಂಚಾಯಿತಿ ಗುರಿ ಹೊಂದಿದೆ. ಪ್ರಥಮ ಹಂತದಲ್ಲಿ 84 ಪಂಚಾಯಿತಿಗಳಿಗೆ ಅನುಮೋದನೆ ಸಿಕ್ಕಿದೆ. ಉಳಿದ ಪಂಚಾಯಿತಿಗಳಲ್ಲೂ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲು ಮುಂದಾಗಿದೆ.

84 ಗ್ರಾಮ ಪಂಚಾಯಿತಿಗಳಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕಗಳ ನಿರ್ಮಾಣಕ್ಕೆ ಅನುದಾನದ ಕೊರತೆ ಇಲ್ಲ. ಅವುಗಳ ಪೈಕಿ 23 ಕಡೆಗಳಲ್ಲಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಎಂಟು ಕಡೆ ಪೂರ್ಣಗೊಂಡಿದ್ದು, ಉಪಯೋಗಿಸಲು ಸಿದ್ಧತೆ ಕೈಗೊಳ್ಳಲಾಗಿದೆ.

ಇನ್ನುಳಿದ ಗ್ರಾಮ ಪಂಚಾಯಿತಿಗಳಿಗೆ ಜಾಗದ ಕೊರತೆಯಿಂದಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಬಾಕಿ ಇದೆ. ಕೆಲವು ಗ್ರಾಮ ಪಂಚಾಯಿತಿಗಳ ಕಡತಗಳು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್‌ ಕಚೇರಿಗಳಲ್ಲಿ ಬಾಕಿ ಇದ್ದು, ಯೋಜನೆ ವೇಗ ಪಡೆದುಕೊಳ್ಳುತ್ತಿಲ್ಲ. ಈ ಕುರಿತು ಅಧಿಕಾರಿಗಳು ಗಮನಹರಿಸಿದಲ್ಲಿ ಚಟುವಟಿಕೆ ವೇಗ ಪಡೆಯಲಿದೆ.

ನಮ್ಮ ನಡಿಗೆ ಕಸಮುಕ್ತ ಕಡೆಗೆ:ಪ್ರತಿ ಹಳ್ಳಿಯನ್ನು ಕಸಮುಕ್ತ ಗ್ರಾಮಗಳನ್ನಾಗಿ ಮಾಡುವ ಉದ್ದೇಶದಿಂದ ‘ನಮ್ಮ ನಡಿಗೆ ಸ್ವಚ್ಛತೆ ಕಡೆಗೆ’ಎಂಬ ಕಾರ್ಯಕ್ರಮಈಗಾಗಲೇ ಆರಂಭವಾಗಿದೆ. ಎಲ್ಲ ಗ್ರಾಮಗಳಲ್ಲೂ ಕಸ ಸಂಗ್ರಹಿಸುವ ವಾಹನ ಸಂಚರಿಸಿ ಜಾಗೃತಿ ಮೂಡಿಸಲಿದೆ. ಮಾರ್ಚ್ 31ರ ವರೆಗೆ ನಡೆಯುವ ಈ ಕಾರ್ಯಕ್ರಮ
ದಲ್ಲಿ ಪ್ರತಿ ಮನೆಗೂ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭೇಟಿ ನೀಡಿ ಶುಚಿತ್ವದ ಪಾಠ ಹೇಳಲಿದ್ದಾರೆ.

ಹಸಿ ಕಸವನ್ನು ಸಂಸ್ಕರಣೆ ಮಾಡುವ ಬಗೆ, ಕಸವನ್ನು ಡಬ್ಬದಲ್ಲಿಯೇ ಹಾಕಬೇಕು, ಬೀದಿಯಲ್ಲಿ ಬಿಸಾಡುವುದರಿಂದ
ಆಗುವ ಅಪಾಯಗಳು, ಮನೆಯಲ್ಲಿಯೇ ಕಾಂಪೋಸ್ಟ್ ಮಾಡುವ ಕುರಿತು ಜನರಿಗೆ ಅರಿವು ಮೂಡಿಸುತ್ತಿದ್ದಾರೆ. ಅಪಾಯಕಾರಿಯಾದ ವೈದ್ಯಕೀಯ ತ್ಯಾಜ್ಯ ಬೇರ್ಪಡಿಸುವುದು, ಪ‍್ಲಾಸ್ಟಿಕ್ ಅನ್ನು ಸುಟ್ಟರೆ ಆಗುವ ಅನಾಹುತಗಳ ಬಗ್ಗೆಯೂ ಆಶಾ ಕಾರ್ಯಕರ್ತೆಯರು ಮನವರಿಕೆ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT