ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಬಾಲ ಭವನ ನಿರ್ವಹಣೆಯಲ್ಲಿ ಲೋಪ: ಪೂರ್ಣಿಮಾ ಪ್ರಕಾಶ್‌ ಬೇಸರ

ರಾಜ್ಯ ಬಾಲಭವನ ಸೊಸೈಟಿ ಅಧ್ಯಕ್ಷೆ ಪೂರ್ಣಿಮಾ ಪ್ರಕಾಶ್‌ ಬೇಸರ
Last Updated 25 ಜನವರಿ 2023, 6:44 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ನಗರದಲ್ಲಿ ಲಕ್ಷಾಂತರ ರೂಪಾಯಿ ವ್ಯಯಿಸಿ ನಿರ್ಮಿಸಿರುವ ಜಿಲ್ಲಾ ಬಾಲಭವನದ ಇಂದಿನ ಸ್ಥಿತಿ ಅತ್ಯಂತ ಭೀಕರ ಅನಿಸುತ್ತಿದೆ. ನಿರ್ವಹಣೆ ವಿಚಾರದಲ್ಲಿ ಅಧಿಕಾರಿಗಳು ಅಸಡ್ಡೆ ತೋರುತ್ತಿರುವುದೇ ಈ ಸ್ಥಿತಿಗೆ ಕಾರಣ’ ಎಂದು ರಾಜ್ಯ ಬಾಲಭವನ ಸೊಸೈಟಿ ಅಧ್ಯಕ್ಷೆ ಪೂರ್ಣಿಮಾ ಪ್ರಕಾಶ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ, ತಾಲ್ಲೂಕು ಬಾಲಭವನಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘3.10 ಎಕರೆ ವಿಸ್ತೀರ್ಣದಲ್ಲಿ ಸರ್ಕಾರ ಜಿಲ್ಲಾ ಬಾಲ ಭವನ ನಿರ್ಮಿಸಿದೆ. ಇಲ್ಲಿ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಕಟ್ಟಡ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ನಿಮಾತೃ ಸಂಸ್ಥೆ ಯಾವುದೇ ರೀತಿಯ ನಿರ್ವಹಣೆ ಮಾಡುತ್ತಿಲ್ಲ. ಶೌಚಾಲಯಗಳು ದುಸ್ಥಿತಿಯಲ್ಲಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪುಟ್ಟ ಮಕ್ಕಳ ಸರ್ವಾಂಗೀಣ ವಿಕಾಸಕ್ಕಾಗಿ ನಿರ್ಮಿಸಿರುವ ಬಾಲಭವನ ಅವ್ಯವಸ್ಥೆಯ ಆಗರವಾಗಿದೆ. ನಿರ್ವಹಣೆಯಲ್ಲಿ ಅಧಿಕಾರಿಗಳು ಅಸಡ್ಡೆ ತೋರ‌ಬಾರದು ಎಂದು ಎಚ್ಚರಿಕೆ ನೀಡಿದರು.

‘ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಬಾಲಭವನ ಉನ್ನತೀಕರಿಸಲು ಚಿಂತನೆ ಮಾಡಲಾಗಿದೆ. ಆರೋಗ್ಯ, ಶಿಕ್ಷಣ, ಮನೋರಂಜನೆ, ತಾರ್ಕಿಕ ಮನೋಭಾವನೆಯನ್ನು ಮಕ್ಕಳಲ್ಲಿ ಬೆಳೆಸಿ, ಪೂರ್ಣ ವ್ಯಕ್ತಿತ್ವ ರೂಪಿಸುವ ಉದ್ದೇಶದಿಂದ ಬಾಲಭವನಗಳನ್ನು ನಿರ್ಮಾಣ ಮಾಡಲಾಗಿದೆ. ಇವುಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು’ ಎಂದು ಸೂಚಿಸಿದರು.

‘ಸಮಾಜದಲ್ಲಿ ಹಿಂದುಳಿದ ಮಕ್ಕಳಿಗೆ ಮನೋರಂಜನೆ ಹಾಗೂ ಮನೋವಿಕಾಸಕ್ಕೆ ದೊರೆಯುವ ಅವಕಾಶಗಳು ಕಡಿಮೆ. ಇಂತಹ ಮಕ್ಕಳಿಗಾಗಿಯೇ ಬಾಲ ಭವನಗಳು ರೂಪುಗೊಂಡಿವೆ. ಜಿಲ್ಲಾ ಬಾಲಭವನಗಳನ್ನು ರೆಸಾರ್ಟ್‌ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಗ್ರಾಮೀಣ ಭಾಗದ ಮಕ್ಕಳಿಗೆ ಈ ತಾಣಗಳಿಗೆ ಭೇಟಿ ನೀಡುವುದು ಪ್ರವಾಸದ ಅನುಭವ ಒದಗಿಸಬೇಕು’ ಎಂದರು.

‘ಮಕ್ಕಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರ್ಕಾರ ಯೋಜನೆಗಳನ್ನು ರೂಪಿಸಿ ಅನುದಾನ ಬಿಡುಗಡೆ ಮಾಡಿದೆ. ಇದನ್ನು ಬಳಕೆ ಮಾಡಿಕೊಳ್ಳದೇ ಸರ್ಕಾರಕ್ಕೆ ಹಿಂದಿರುಗಿಸುವುದು ಯೋಜನೆಯ ಪಾವಿತ್ರ್ಯತೆ ಹಾಳು ಮಾಡಿದಂತೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಸ್‌.ದಿವಾಕರ್‌ ಎಚ್ಚರಿಸಿದರು.

ಮಾರ್ಚ್‌ ಅಂತ್ಯಕ್ಕೆ ಅಧಿಕಾರಿಗಳ ಒತ್ತಡದಿಂದ ಕಾರ್ಯಕ್ರಮಗಳನ್ನು ಮಾಡಿ ರಶೀದಿ ಸಲ್ಲಿಸುವ ಕೆಲಸವಾಗಬಾರದು. ಅನುದಾನ ಬಿಡುಗಡೆಯಾಗಿ ವಾರಾಂತ್ಯ ತರಗತಿಗಳನ್ನು ಆಯೋಜಿಸದ ಸಿಡಿಪಿಒಗಳಿಗೆ ನೋಟಿಸ್ ನೀಡಿ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗೆ ಸೂಚನೆ ನೀಡಿದರು.

ಸಭೆಗೂ ಮುನ್ನ ಜಿಲ್ಲಾ ಬಾಲಭವನಕ್ಕೆ ಪೂರ್ಣಿಮಾ ಪ್ರಕಾಶ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಭಾರತಿ ಬಣಕಾರ್‌, ನಿರೂಪಣಾಧಿಕಾರಿ ಕೆಂಪಹನುಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್‌.ಕೆ.ಮಲ್ಲಿಕಾರ್ಜುನ, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್‌ ಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT