ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಬಂಧುತ್ವ ಅಧಿವೇಶನ ನಾಳೆಯಿಂದ

ಸತೀಶ್‌ ಜಾರಕಿಹೊಳಿ ನೇತೃತ್ವದ ಮಾನವ ಬಂಧುತ್ವ ವೇದಿಕೆ ಆಯೋಜನೆ
Last Updated 6 ಏಪ್ರಿಲ್ 2022, 13:08 IST
ಅಕ್ಷರ ಗಾತ್ರ

ಚಿತ್ರದುರ್ಗ: ಸಾಂವಿಧಾನಿಕ ಸದೃಢ ಭಾರತದ ಸಂಕಲ್ಪಕ್ಕಾಗಿ ಮಾನವ ಬಂಧುತ್ವ ವೇದಿಕೆಯು ‘ರಾಜ್ಯ ಬಂಧುತ್ವ ಅಧಿವೇಶನ’ವನ್ನು ಏ. 8 ಮತ್ತು 9ರಂದು ನಗರದ ತರಾಸು ರಂಗಮಂದಿರದಲ್ಲಿ ಹಮ್ಮಿಕೊಂಡಿದೆ. ಎರಡು ದಿನ ವಿಚಾರಗೋಷ್ಠಿ, ಸಂವಾದ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

‘ಸಮಾಜದ ಎದುರು ಹಲವು ಸವಾಲುಗಳು ಎದುರಾಗಿವೆ. ಸಂವಿಧಾನದ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಸಾಂಸ್ಕೃತಿಕ, ಧಾರ್ಮಿಕ ಭಾವನೆ ಕೆರಳಿಸುವ ಕೃತ್ಯಕ್ಕೆ ಸರ್ಕಾರವೇ ಕುಮ್ಮಕ್ಕು ನೀಡುತ್ತಿದೆ. ಕೃಷಿ ಹಾಗೂ ನಿರುದ್ಯೋಗದ ಬಿಕ್ಕಟ್ಟು ಸೃಷ್ಟಿಯಾಗಿದೆ. ಇಂತಹ ಸಂದರ್ಭದಲ್ಲಿ ಸಾಂವಿಧಾನಿಕ ಆಶಯಗಳನ್ನು ಉಳಿಸುವ ಉದ್ದೇಶದಿಂದ ಅಧಿವೇಶನ ನಡೆಸಲಾಗುತ್ತಿದೆ’ ಎಂದು ಮಾನವ ಬಂಧುತ್ವ ವೇದಿಕೆಯ ವಿಭಾಗೀಯ ಸಂಚಾಲಕ ಎನ್‌.ಅನಂತನಾಯ್ಕ್‌ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಏ.8ರಂದು ಬೆಳಿಗ್ಗೆ 10.30ಕ್ಕೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎಸ್‌.ನಾಗಮೋಹನ್‌ ದಾಸ್‌ ಅಧಿವೇಶನ ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮಾನವ ಬಂಧುತ್ವ ವೇದಿಕೆಯ ಅಧ್ಯಕ್ಷರೂ ಆಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸ್ಕೃತಿ ಚಿಂತಕ ಪ್ರೊ.ಪುರುಷೋತ್ತಮ ಬಿಳಿಮಲೆ, ಶಾಸಕ ಟಿ.ರಘುಮೂರ್ತಿ, ವೇದಿಕೆಯ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಪ್ರಸ್ತುತ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ದಾಳಿಗಳು ಮತ್ತು ಪ್ರತಿರೋಧ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ವಿಧಾನಪರಿಷತ್‌ ಸದಸ್ಯ ಸಲೀಂ ಅಹಮ್ಮದ್‌ ವಹಿಸಿಕೊಳ್ಳಲಿದ್ದಾರೆ. ಚಿಂತಕ ಡಾ.ಸಿದ್ದನಗೌಡ ಪಾಟೀಲ್‌, ರಂಗಕರ್ಮಿ ಸಿ.ಬಸವಲಿಂಗಯ್ಯ, ಆರ್ಥಿಕ ಚಿಂತಕ ಕೆ.ಸಿ.ರಘು ಪಾಲ್ಗೊಳ್ಳಲಿದ್ದಾರೆ. ಪರಿಶಿಷ್ಟರು, ಅಲೆಮಾರಿ, ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ಮಹಿಳಾ ಸಮುದಾಯದ ತಲ್ಲಣಗಳು ಗೋಷ್ಠಿಯ ಅಧ್ಯಕ್ಷತೆಯನ್ನು ಕವಯತ್ರಿ ಕೆ.ಷರೀಫಾ ವಹಿಸಿಕೊಳ್ಳಲಿದ್ದಾರೆ. ಪತ್ರಕರ್ತ ದಿನೇಶ್‌ ಅಮಿನ್‌ಮಟ್ಟು, ಮಾವಳ್ಳಿ ಶಂಕರ್‌, ಕಿರಣ್‌ ಕೊತ್ತಗೆರೆ, ಡಾ.ಗಿರೀಶ್‌ ಮೂಡ್‌’ ಭಾಗವಹಿಸಲಿದ್ದಾರೆ’ ಎಂದರು.

‘ಮಾಧ್ಯಮ, ಸಾಮಾಜಿಕ ಜಾಲತಾಣಗಳ ಜವಾಬ್ದಾರಿ ಮತ್ತು ಸವಾಲು ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಸಂಶೋಧಕ ಅರುಣ್‌ ಜೋಳದ ಕೂಡ್ಲಗಿ ವಹಿಸಲಿದ್ದಾರೆ. ಪತ್ರಕರ್ತರಾದ ಸತೀಶ್‌ ಶಿಲೆ, ನವೀನ್‌ ಸೂರಿಂಜೆ, ಪೂಜಾ ಪ್ರಸನ್ನ ಪಾಲ್ಗೊಳ್ಳಲಿದ್ದಾರೆ. ಏ.9ರಂದು ಬೆಳಿಗ್ಗೆ 10ಕ್ಕೆ ರೈತ, ಕಾರ್ಮಿಕರು ಮತ್ತು ಸರ್ಕಾರಿ ನೌಕರರ ಸವಾಲು ವಿಚಾರಗೋಷ್ಠಿ ಚಿಂತಕ ಬಂಜಗೆರೆ ಜಯಪ್ರಕಾಶ್‌ ಅಧ್ಯಕ್ಷತೆಯಲ್ಲಿ ನಡೆಯಲಿದೆ. ವಕೀಲ ಡಿ.ಬಾಲನ್‌, ಡಿ.ಚಂದ್ರಶೇಖರಯ್ಯ, ಆದರ್ಶ ಯಲ್ಲಪ್ಪ’ ಭಾಗವಹಿಸಲಿದ್ದಾರೆ ಎಂದು ಹೇಳಿದರು.

‘ಮಧ್ಯಾಹ್ನ 3ಕ್ಕೆ ನಡೆಯುವ ಸಮಾರಂಭದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಸಮಾರೋಪ ಭಾಷಣ ಮಾಡಲಿದ್ದಾರೆ. ಮಾಜಿ ಸಂಸದರಾದ ಆರ್‌.ಧ್ರುವನಾರಾಯಣ್‌, ಬಿ.ಎನ್‌.ಚಂದ್ರಪ್ಪ, ಸಾಹಿತಿ ಎಸ್‌.ಜಿ.ಸಿದ್ದರಾಮಯ್ಯ, ಮುರುಘಾ ಮಠದ ಆಡಳಿತಾಧಿಕಾರಿ ಎಸ್‌.ಕೆ.ಬಸವರಾಜನ್‌ ಪಾಲ್ಗೊಳ್ಳಲಿದ್ದಾರೆ. 500ಕ್ಕೂ ಅಧಿಕ ಪ್ರತಿನಿಧಿಗಳು ರಾಜ್ಯದ ಎಲ್ಲೆಡೆಯಿಂದ ಆಗಮಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ವೇದಿಕೆಯ ಜಿಲ್ಲಾ ಸಂಚಾಲಕ ಎಚ್‌.ಅಂಜನಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬುರೆಡ್ಡಿ, ಕುಮಾರಗೌಡ, ಮುದಾಸೀರ್‌, ಶಿವಕುಮಾರ್‌ ಇದ್ದರು.

***

ದೇಶದಲ್ಲಿ ಸಾಂವಿಧಾನಿಕ ಆಶಯಗಳನ್ನು ದಮನ ಮಾಡುವ ಹುನ್ನಾರಗಳು ನಡೆಯುತ್ತಿವೆ. ಜಾತ್ಯತೀತ ಮೌಲ್ಯಗಳು ಅಧಃಪತನಗೊಳ್ಳುತ್ತಿವೆ. ಭಾವನಾತ್ಮಕ ವಿಚಾರಗಳನ್ನು ಕೆರಳಿಸಿ ಸಮಾಜದ ಸ್ವಾಸ್ಥ್ಯ ಕದಡಲಾಗುತ್ತಿದೆ.

ಟಿ.ರಘುಮೂರ್ತಿ,ಶಾಸಕ, ಚಳ್ಳಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT