ಸೋಮವಾರ, ನವೆಂಬರ್ 29, 2021
20 °C

ರಾಜಧಾನಿಯಲ್ಲಿ ಕನ್ನಡ ಉಳಿಯಬೇಕು: ಮಾಜಿ ಸಚಿವೆ ಲೀಲಾದೇವಿ ಆರ್‌.ಪ್ರಸಾದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಪರಭಾಷೆಯ ಬಗೆಗಿನ ವ್ಯಾಮೋಹ ಹೆಚ್ಚಾಗಿರುವುದರಿಂದ ಕನ್ನಡಕ್ಕೆ ದುಃಸ್ಥಿತಿ ಒದಗಿಬಂದಿದೆ. ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಉಳಿಸುವ ಕೆಲಸ ಆಗಬೇಕಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಮಾಜಿ ಸಚಿವೆ ಲೀಲಾದೇವಿ ಆರ್‌.ಪ್ರಸಾದ್‌ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಸ್ಪರ್ಧಿಸಿದ ಮಾಯಣ್ಣ ಪರವಾಗಿ ಮತಯಾಚನೆಗೆ ಸೋಮವಾರ ಚಿತ್ರದುರ್ಗಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರ ಪ್ರಮಾಣ ಶೇ 30 ಮಾತ್ರ. ಕನ್ನಡ ಮಾತನಾಡುವುದೇ ಕೀಳರಿಮೆ ಎಂಬಂತಹ ಸ್ಥಿತಿ ರಾಜಧಾನಿಯಲ್ಲಿ ನಿರ್ಮಾಣವಾಗಿದೆ. ಇದು ಹೀಗೆ ಮುಂದುವರಿದರೆ ಕನ್ನಡಕ್ಕೆ ದೊಡ್ಡ ಅಪಾಯ ಎದುರಾಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ತಮಿಳುನಾಡು ಮತ್ತು ಆಂಧ್ರಪ್ರದೇಶದ ಜನರಿಗೆ ಭಾಷೆಯ ಮೇಲಿರುವ ಆತ್ಮಾಭಿಮಾನ ಕನ್ನಡಿಗರಲ್ಲಿ ಕಾಣುತ್ತಿಲ್ಲ. ಕನ್ನಡ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಬಳಲುತ್ತಿವೆ. ನಗರ ಪ್ರದೇಶದಲ್ಲಿ ಇಂಗ್ಲಿಷ್‌ ವ್ಯಾಮೋಹ ಹೆಚ್ಚಾಗುತ್ತಿದೆ. ಆಂಗ್ಲ ಮಾಧ್ಯಮ ಶಿಕ್ಷಣದ ಪ್ರಭಾವವೂ ಕನ್ನಡವನ್ನು ಅಳಿವಿನ ಅಂಚಿಗೆ ತಳ್ಳುತ್ತಿದೆ’ ಎಂದು ಬೇಸರ ಹೊರಹಾಕಿದರು.

‘ಕನ್ನಡಿಗರು ಪರಭಾಷೆ ದ್ವೇಷಿಗಳಾಗಬಾರದು. ಆದರೆ, ಮಾತೃಭಾಷೆಯ ಆತ್ಮಾಭಿಮಾನವನ್ನು ಕಳೆದುಕೊಳ್ಳಬಾರದು. ಕನ್ನಡ ಸಾಹಿತ್ಯ ಪರಿಷತ್ತು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಬೆಂಗಳೂರು ಜಿಲ್ಲಾ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿ ಕೆಲಸ ಮಾಡಿದ ಮಾಯಣ್ಣ ಕನ್ನಡಿಗರಲ್ಲಿ ಭರವಸೆ ಮೂಡಿಸಿದ್ದಾರೆ. ಕನ್ನಡ ಉಳಿಸುವ ಕೆಲಸವನ್ನು ಅವರು ಸಮರ್ಥವಾಗಿ ಮಾಡಲಿದ್ದಾರೆ’ ಎಂದು ಹೇಳಿದರು.

ಸಾಹಿತಿ ಕಮಲಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು