ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನೆಗುದಿಗೆ ಬಿದ್ದ ಎಆರ್‌ಟಿಒ ಪ್ರಸ್ತಾವ

ಸಾರಿಗೆ ಸಚಿವರ ಸ್ವಕ್ಷೇತ್ರದ ಜನರಿಗೆ ಅನುಕೂಲ
Last Updated 17 ಆಗಸ್ಟ್ 2021, 3:05 IST
ಅಕ್ಷರ ಗಾತ್ರ

ಚಿತ್ರದುರ್ಗ: ವಾಹನ ಬಳಕೆದಾರರಿಗೆ ತ್ವರಿತ ಸೇವೆಯನ್ನು ನೀಡುವ ಉದ್ದೇಶದಿಂದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ (ಎಆರ್‌ಟಿಒ) ಕಚೇರಿ ಮಂಜೂರು ಮಾಡುವಂತೆ ಕೋರಿ ಸಾರಿಗೆ ಇಲಾಖೆಗೆ ಸಲ್ಲಿಸಿದ್ದ ಪ್ರಸ್ತಾವ ನಾಲ್ಕು ವರ್ಷಗಳಿಂದ ನನೆಗುದಿಗೆ ಬಿದ್ದಿದೆ.

ಹಿರಿಯೂರು, ಚಳ್ಳಕೆರೆ ಹಾಗೂ ಮೊಳಕಾಲ್ಮುರು ತಾಲ್ಲೂಕಿಗೆ ಪ್ರತ್ಯೇಕ ಎಆರ್‌ಟಿಒ ಕಚೇರಿ ಸ್ಥಾಪಿಸುವಂತೆ ದಶಕದ ಹಿಂದೆಯೇ ಸರ್ಕಾರವನ್ನು ಕೋರಲಾಗಿತ್ತು. 2020ರಲ್ಲಿ ಸಾರಿಗೆ ಆಯುಕ್ತರಿಗೆ ಪೂರಕ ಮಾಹಿತಿಯನ್ನು ಒದಗಿಸಲಾಗಿತ್ತು. ಈ ಪಕ್ರಿಯೆ ಇನ್ನಷ್ಟು ವಿಳಂಬವಾದರೆ ಎಆರ್‌ಟಿಒ ಕಚೇರಿ ಕೈತಪ್ಪುವ ಸಾಧ್ಯತೆ ಇದೆ.

ಜಿಲ್ಲೆಯಲ್ಲಿ ಸುಮಾರು ನಾಲ್ಕು ಲಕ್ಷ ವಾಹನಗಳಿವೆ. ನಿತ್ಯ ಸರಾಸರಿ 40ರಿಂದ 50 ವಾಹನ ನೋಂದಣಿಯಾಗುತ್ತಿವೆ. ದ್ವಿಚಕ್ರ ವಾಹನಗಳ ಸಂಖ್ಯೆ ದಿನ ಕಳೆದಂತೆ ಹೆಚ್ಚಾಗುತ್ತಿದೆ. ವಾಹನ ನೋಂದಣಿ, ಚಾಲನಾ ಪರವಾನಗಿ, ರಸ್ತೆ ಶುಲ್ಕ ಪಾವತಿ, ಸಾಮರ್ಥ್ಯ ಪರಿಶೀಲನಾ ಪತ್ರ, ತೆರಿಗೆ ಪಾವತಿಗೆ ನಿತ್ಯ ನೂರಾರು ಜನರು ಚಿತ್ರದುರ್ಗದ ಆರ್‌ಟಿಒ ಕಚೇರಿಗೆ ಭೇಟಿ
ನೀಡಬೇಕಿದೆ.

ಮೊಳಕಾಲ್ಮುರು, ಹಿರಿಯೂರು ಹಾಗೂ ಚಳ್ಳಕೆರೆ ತಾಲ್ಲೂಕಿನ ಆಂಧ್ರಪ್ರದೇಶದ ಗಡಿ ಗ್ರಾಮಗಳಿಂದ ಜಿಲ್ಲಾ ಕೇಂದ್ರಕ್ಕೆ ಬರುವುದು ದುಸ್ತರವಾಗಿದೆ. ಜಿಲ್ಲೆಯ ಅರ್ಧದಷ್ಟು ವಾಹನಗಳು ಈ ಮೂರು ತಾಲ್ಲೂಕಿನಲ್ಲಿದ್ದು, ಚಳ್ಳಕೆರೆಯಲ್ಲಿ ಎಆರ್‌ಟಿಒ ಕಚೇರಿ ಸ್ಥಾಪಿಸುವಂತೆ ಅಧಿಕಾರಿಗಳು ಶಿಫಾರಸು ಮಾಡಿದ್ದರು. ಇದು ಜಾರಿಯಾದರೆ ಸಾರಿಗೆ ಸಚಿವ ಬಿ. ಶ್ರೀರಾಮುಲು ಪ್ರತಿನಿಧಿಸುವ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಜನರಿಗೆಅನುಕೂಲವಾಗಲಿದೆ.

ಸಾರ್ವಜನಿಕರು ಜಿಲ್ಲಾ ಕೇಂದ್ರಕ್ಕೆ ಬರುವುದು ಕಷ್ಟ ಎಂಬುದನ್ನು ಅರಿತ ಸಾರಿಗೆ ಇಲಾಖೆ, ಹಲವು ಸೇವೆಗಳನ್ನು ಒದಗಿಸಲು ತಾಲ್ಲೂಕು ಮಟ್ಟದಲ್ಲಿ ಕ್ಯಾಂಪ್‌ಗಳನ್ನು ನಡೆಸುತ್ತಿದೆ. ವಾರ ಅಥವಾ ಎರಡು ವಾರಕ್ಕೊಮ್ಮೆ ಈ ಕ್ಯಾಂಪ್‌ಗಳನ್ನು ಆಯೋಜಿಸಲಾಗುತ್ತಿದೆ. ಆಯಾ ತಾಲ್ಲೂಕಿನ ವಾಹನಗಳ ನೋಂದಣಿ, ಚಾಲನಾ ಪರವಾನಗಿ ಪರೀಕ್ಷೆಗೆ ಇದು ಅನುಕೂಲವಾಗಿದೆ. ಆದರೆ, ಈ ಕ್ಯಾಂಪ್‌ ನಡೆಸಲು ಸ್ಥಳಾವಕಾಶದ ಸಮಸ್ಯೆ ಎದುರಾಗಿದೆ. ಬಡಾವಣೆಯ ಖಾಲಿ ನಿವೇಶನ, ಆಟದ ಮೈದಾನಗಳನ್ನು ಆಶ್ರಯಿಸಬೇಕಾಗಿದೆ. ಇದಕ್ಕೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಿದರೆ ಅನುಕೂಲ ಎಂಬುದು ಸಾರಿಗೆ ಇಲಾಖೆ ಅಧಿಕಾರಿಗಳಕೋರಿಕೆ.

‘ಸಾರಿಗೆ ಇಲಾಖೆಯ ಸೇವೆಗಳು ಕಾಗದರಹಿತವಾಗಿ ಆಗುತ್ತಿವೆ. ಆನ್‌ಲೈನ್‌ ಮೂಲಕ ಸೇವೆ ಪಡೆಯುವಂತೆ ಸಾರ್ವಜನಿಕರನ್ನು ಪ್ರೇರೇಪಿಸಲಾಗುತ್ತಿದೆ. ಕುಳಿತಲ್ಲೇ ಹಲವು ಸೇವೆ ಒದಗಿಸುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ. ಸರ್ಕಾರದ ಮುಂದಿರುವ ಪ್ರಸ್ತಾವಕ್ಕೆ ಅನುಮೋದನೆ ನೀಡುವುದು ಇನ್ನಷ್ಟು ವಿಳಂಬವಾದರೆ ಎಆರ್‌ಟಿಒ ಕಚೇರಿ ಕೈತಪ್ಪುವ
ಸಾಧ್ಯತೆ ಇದೆ’ ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಕಳವಳ ವ್ಯಕ್ತಪಡಿಸಿದರು.

ಚಳ್ಳಕೆರೆಯಲ್ಲಿ ಎಆರ್‌ಟಿಒ ಕಚೇರಿ ಸ್ಥಾಪನೆಯಾದರೆ ಹಿರಿಯೂರು ಹಾಗೂ ಮೊಳಕಾಲ್ಮುರು ತಾಲ್ಲೂಕಿನ ಜನರಿಗೂ ಅನುಕೂಲವಾಗಲಿದೆ ಎಂದು ಪ್ರಸ್ತಾವನೆಯಲ್ಲಿ ವಿವರಿಸಲಾಗಿತ್ತು. ಇದಕ್ಕೆ ಹಿರಿಯೂರು ತಾಲ್ಲೂಕಿನ ಜನಪ್ರತಿನಿಧಿಗಳು ಆಕ್ಷೇಪ ವ್ಯಕ್ತ
ಪಡಿಸಿದ್ದರಿಂದ ಮತ್ತೊಂದು ಸಮಸ್ಯೆ ಸೃಷ್ಟಿಯಾಗಿತ್ತು. ಎಆರ್‌ಟಿಒ ಕಚೇರಿ ಮಂಜೂರಾದರೆ ಆರ್‌ಟಿಒ ಕಚೇರಿ ಮೇಲಿನ ಒತ್ತಡ
ಕಡಿಮೆಯಾಗಲಿದೆ. ಸಾರಿಗೆ ಇಲಾಖೆಯ ಸೇವೆಗಳು ಸಕಾಲದಲ್ಲಿ ಜನರನ್ನು ತಲುಪಲು ಸಾಧ್ಯವಾಗಲಿದೆ.

‘ಡ್ರೈವಿಂಗ್‌ ಟ್ರ್ಯಾಕ್‌’ಗೆ ಇಲ್ಲ ಜಾಗ

ಚಾಲನಾ ಪರವಾನಗಿ ಪರೀಕ್ಷೆಗೆ ಅತ್ಯಾಧುನಿಕ ‘ಡ್ರೈವಿಂಗ್‌ ಟ್ರ್ಯಾಕ್‌’ ನಿರ್ಮಾಣಕ್ಕೆ ಸಾರಿಗೆ ಇಲಾಖೆ ಸಜ್ಜಾಗಿದೆ. ಆದರೆ, ಜಿಲ್ಲಾಡಳಿತ ಭೂಮಿ ಮಂಜೂರು ಮಾಡಲು ಮೀನಮೇಷ ಎಣಿಸುತ್ತಿದೆ. ಎಂಟು ವರ್ಷಗಳಷ್ಟು ಹಳೆಯದಾದ ಕೋರಿಕೆ ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರ ಕಾಲದಲ್ಲಾದರೂ ಈಡೇರಬಹುದೇ ಎಂಬ ಕುತೂಹಲ ಮೂಡಿಸಿದೆ.

ಚಾಲನಾ ಪರವಾನಗಿ ಪಡೆಯಲು ಆರ್‌ಟಿಒ ಕಚೇರಿ ಅಧಿಕಾರಿಗಳು ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಸುಸಜ್ಜಿತ ‘ಡ್ರೈವಿಂಗ್‌ ಟ್ರ್ಯಾಕ್‌’ ನಿರ್ಮಾಣವಾದರೆ ಪರೀಕ್ಷೆ ಇನ್ನಷ್ಟು ಸರಳವಾಗಲಿದೆ. ಚಿತ್ರದುರ್ಗ ತಾಲ್ಲೂಕಿನ ಇಂಗಳದಾಳ್‌ ಗ್ರಾಮದ ಸಮೀಪ ಹತ್ತು ಎಕರೆ ಭೂಮಿಯನ್ನು ಗುರುತಿಸಲಾಗಿತ್ತು. ಆದರೆ, ಇದು ಸಾರಿಗೆ ಇಲಾಖೆಗೆ ಹಸ್ತಾಂತರವಾಗಲಿಲ್ಲ.

ಮಾಲಿನ್ಯ ತಪಾಸಣಾ ಕೇಂದ್ರದ ಕೊರತೆ

ಜಿಲ್ಲೆಯಲ್ಲಿ ಸುಮಾರು ನಾಲ್ಕು ಲಕ್ಷ ವಾಹನಗಳಿವೆ. ಆದರೆ, ಮಾಲಿನ್ಯ ತಪಾಸಣೆ ಮಾಡುವ ಕೇಂದ್ರಗಳು ಮಾತ್ರ ಬೆರಳೆಣಿಕೆಯಲ್ಲಿವೆ. ಇದರಿಂದ ಮಾಲಿನ್ಯ ತಪಾಸಣೆ ಮಾಡಿಸುವುದು ಕಷ್ಟವಾಗುತ್ತಿದೆ.

ಸಂಚಾರ ನಿಯಮಗಳನ್ನು ಸರ್ಕಾರ ಬಿಗಿಗೊಳಿಸಿದೆ. ಸಂಚಾರ ನಿಮಯ ಉಲ್ಲಂಘಿಸುವ ವಾಹನಗಳಿಗೆ ವಿಧಿಸುವ ದಂಡ ಹೆಚ್ಚಿಸಲಾಗಿದೆ. ಹೊಗೆ ತಪಾಸಣೆ ಮಾಡಿಕೊಳ್ಳಲು ಜಿಲ್ಲಾ ಕೇಂದ್ರದಲ್ಲಿ ಎರಡೇ ತಪಾಸಣಾ ಕೇಂದ್ರಗಳಿವೆ. ಹಿರಿಯೂರು ಹಾಗೂ ಚಳ್ಳಕೆರೆಯಲ್ಲಿ ಈಗಷ್ಟೇ ಆರಂಭವಾಗಿವೆ.

ಪ್ರತಿ ವಾಹನ ಆರು ತಿಂಗಳಿಗೊಮ್ಮೆ ಹೊಗೆ ತಪಾಸಣೆ ಮಾಡಿಸುವುದು ಕಡ್ಡಾಯ. ತಪಾಸಣೆ ಮಾಡಿಸದಿದ್ದರೆ ಪೊಲೀಸರು ಅಥವಾ ಆರ್‌ಟಿಒ ಕಚೇರಿ ಅಧಿಕಾರಿಗಳು ದಂಡ ವಿಧಿಸುತ್ತಾರೆ.

....

ಡ್ರೈವಿಂಗ್‌ ಟ್ರ್ಯಾಕ್‌’ ನಿರ್ಮಾಣಕ್ಕೆ ಸ್ಥಳ ಗುರುತಿಸುವಂತೆ ಸಾರಿಗೆ ಸಚಿವರು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ. ಎಆರ್‌ಟಿಒ ಕಚೇರಿ ಮಂಜೂರಾದರೆ ಜಿಲ್ಲೆಗೆ ಅನುಕೂಲವಾಗಲಿದೆ.

-ಬಾಲಕೃಷ್ಣ, ಆರ್‌ಟಿಒ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT