ಭಾನುವಾರ, ಮೇ 22, 2022
29 °C
ಜಿಲ್ಲಾಧಿಕಾರಿ ಸ್ಥಳ ಭೇಟಿಗೆ ಗ್ರಾಮಸ್ಥರ ಆಗ್ರಹ

ಬಿ.ಜಿ.ಕೆರೆ: 25ರಿಂದ ಶಾಲೆ ಬಹಿಷ್ಕರಿಸುವ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಿ.ಜಿ.ಕೆರೆ (ಮೊಳಕಾಲ್ಮುರು): ತಾಲ್ಲೂಕಿನ ಬಿ.ಜಿ.ಕೆರೆ ಗ್ರಾಮದ ಬಸವೇಶ್ವರ ಬಡಾವಣೆಗೆ 150 ‘ಎ’ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಅಂಡರ್‌ಪಾಸ್ ನಿರ್ಮಿಸಬೇಕು ಎಂದು ಹಲವು ದಿನಗಳಿಂದ ಗ್ರಾಮಸ್ಥರು ಪ್ರತಿಭಟನೆ ಮಾಡುತ್ತಿದ್ದರೂ, ಜಿಲ್ಲಾಡಳಿತ ನಿರ್ಲಕ್ಷ್ಯ ತೋರುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಮಂಗಳವಾರ ಗ್ರಾಮದಲ್ಲಿ ಅಂಡರ್‌ಪಾಸ್ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಬಸವೇಶ್ವರ ಬಡಾವಣೆಯಲ್ಲಿ ಶಾಲಾ, ಕಾಲೇಜು, ಕಚೇರಿಗಳು, ರೈತರ ಜಮೀನುಗಳಿಗೆ ಹೋಗಲು ದಾರಿಗಳಿವೆ. ಹೆದ್ದಾರಿ ನಿರ್ಮಾಣ ಸಮಯದಲ್ಲಿ ಇಲ್ಲಿ ದಾರಿ ಬಿಡದೇ ಅವೈಜ್ಞಾನಿಕವಾಗಿ ಮಾಡಲಾಗಿದೆ. 3 ವರ್ಷಗಳಿಂದ ಈ ಬಗ್ಗೆ ಮನವಿ, ಪ್ರತಿಭಟನೆ ಮೂಲಕ ಗಮನ ಸೆಳೆಯುತ್ತಿದ್ದರೂ ಹೆದ್ದಾರಿ ಪ್ರಾಧಿಕಾರ, ಜಿಲ್ಲಾಡಳಿತ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಈಗ ಜನರು, ವಿದ್ಯಾರ್ಥಿಗಳು ಸಂಚರಿಸುವುದು ದುಸ್ತರವಾಗಿದೆ ಎಂದು ದೂರಿದರು.

ಸಮಸ್ಯೆ ತೀವ್ರವಾಗಿದ್ದರೂ ಹೆದ್ದಾರಿ ಪ್ರಾಧಿಕಾರದವರು ಸ್ಪಂದಿಸುತ್ತಿಲ್ಲ. ಜಿಲ್ಲಾಧಿಕಾರಿ ಅವರು ಸ್ಥಳಕ್ಕೆ ಬಂದು ಸಮಸ್ಯೆ ಆಲಿಸುತ್ತಿಲ್ಲ. ಪ್ರಾಧಿಕಾರದವರು ಫೆಬ್ರುವರಿ 24ರಂದು ಚಿತ್ರದುರ್ಗದಲ್ಲಿ ಈ ಕುರಿತು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸುವ ಭರವಸೆ ನೀಡಿದ್ದಾರೆ. ಇದನ್ನು ನೋಡಿಕೊಂಡು 25ರಿಂದ ಗ್ರಾಮದಲ್ಲಿ ಶಾಲೆಗಳಿಗೆ ಬೀಗ ಜಡಿದು ನಿರಂತರ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಹೇಳಿದರು.

ಫೆಬ್ರುವರಿ 20ರಂದು ಜಿಲ್ಲಾಧಿಕಾರಿ ಅವರು ಗ್ರಾಮವಾಸ್ತವ್ಯಕ್ಕೆ ತಾಲ್ಲೂಕಿಗೆ ಇದೇ ಮಾರ್ಗವಾಗಿ ಬರಲಿದ್ದಾರೆ. ಅಂದು ಅವರನ್ನು ಸ್ಥಳಕ್ಕೆ ಕರೆದುಕೊಂಡು ಬಂದು ಸಮಸ್ಯೆ ತೀವ್ರತೆ ಮನದಟ್ಟು ಮಾಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಿ. ಯೋಗೇಶ್ ಬಾಬು, ಸಿಪಿಐ ಕಾರ್ಯದರ್ಶಿ ಜಾಫರ್ ಷರೀಫ್ ಹೇಳಿದರು.

ಮುಖಂಡರಾದ ಬಿ.ಟಿ. ನಾಗಭೂಷಣ, ರಾಮಾಂಜನೇಯಪ್ಪ, ಎಸ್. ಜಯಣ್ಣ, ಎಂ.ಪಿ. ನಾಗರಾಜ್, ಬಸಣ್ಣ, ತಿಪ್ಪೇಸ್ವಾಮಿ ಮತ್ತು ಹಟ್ಟಿ ಯಜಮಾನರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು