ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಣಿವಿಲಾಸದ ನೀರಿಗಾಗಿ ಅನಿರ್ದಿಷ್ಟ ಧರಣಿ: ಹೊಳಲ್ಕೆರೆ ತಾಲ್ಲೂಕು ರೈತ ಸಂಘದ ಬೆಂಬಲ

ಜವನಗೊಂಡನಹಳ್ಳಿ ಹೋಬಳಿ ಕೆರೆಗಳಿಗೆ ವಾಣಿವಿಲಾಸದ ನೀರಿಗಾಗಿ ಅನಿರ್ದಿಷ್ಟ ಧರಣಿ
Published 5 ಜುಲೈ 2024, 14:12 IST
Last Updated 5 ಜುಲೈ 2024, 14:12 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನ ಜವನಗೊಂಡನಹಳ್ಳಿಯಲ್ಲಿ ಹೋಬಳಿಯ ಕೆರೆಗಳಿಗೆ ವಾಣಿವಿಲಾಸ ಜಲಾಶಯದ ನೀರು ಹರಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿಯ 17ನೇ ದಿನವಾದ ಶುಕ್ರವಾರ ಹೊಳಲ್ಕೆರೆ ತಾಲ್ಲೂಕು ರೈತ ಸಂಘದ ಪದಾಧಿಕಾರಿಗಳು ಧರಣಿಯಲ್ಲಿ ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ರೈತ ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಮಾತನಾಡಿ, ‘ದೇಶದಲ್ಲಿ ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆ ಬಂದು 76 ವರ್ಷ ಕಳೆದರೂ ನಮ್ಮ ಹಕ್ಕುಗಳನ್ನು ಹೋರಾಟದ ಮೂಲಕವೇ ಈಡೇರಿಸಿಕೊಳ್ಳಬೇಕಾದುದು ವಿಪರ್ಯಾಸ. ಚುನಾವಣೆಗಳು ಹಣವಂತರಿಗೆ ಮಾತ್ರ ಎಂಬಂತಾಗಿವೆ. ಹಣ ಚೆಲ್ಲಿ ಎಲ್ಲಿಂದ ಬೇಕಾದರೂ ಸ್ಪರ್ಧಿಸಿ ಗೆದ್ದು ಹಣ ಮಾಡಿಕೊಳ್ಳುವುದು ಮಾಮೂಲಿ ಎಂಬಂತಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ರೈತರಿಗೆ ಬೇಕಿರುವ ಸೌಲಭ್ಯಗಳನ್ನು ಕೇಳದೆಯೇ ಪಡೆದುಕೊಳ್ಳಲು ರೈತರ ಮಕ್ಕಳನ್ನು ಆರಿಸಿ ಕಳಿಸಬೇಕಿತ್ತು. ಆಗ ರೈತರಿಗೆ, ಗ್ರಾಮೀಣ ಮಕ್ಕಳಿಗೆ, ಗ್ರಾಮಗಳಿಗೆ ಬೇಕಿರುವ ಕೆಲಸಗಳು ನಡೆಯುತ್ತಿದ್ದವು. ಚುನಾವಣೆಯಲ್ಲಿ ಬಲಾಢ್ಯರ ಎದುರು ಗೆಲುವು ಸಾಧಿಸುವಷ್ಟು ಶಕ್ತಿ ರೈತರಲ್ಲಿ ಇಲ್ಲ. ಅಧಿಕಾರದ ಚುಕ್ಕಾಣಿ ಹಿಡಿದ ಸರ್ಕಾರಗಳಿಗೆ ರೈತರ ಬಗ್ಗೆ ಕೊಂಚವೂ ಕಾಳಜಿ ಇಲ್ಲ. ಕಾರ್ಪೊರೇಟ್ ಕಂಪನಿಗಳ ಪರವಾಗಿ ಅವರೆಲ್ಲ ಇದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಈ ಭಾಗದಲ್ಲಿ ಜನರಿಗೆ ಬೇರೆ ಏನೂ ಕೊಡುವುದು ಬೇಡ, ನೀರು ಕೊಟ್ಟರೆ ಸಾಕು ಅವರ ಜೀವನ ಸುಧಾರಿಸುತ್ತದೆ. ಗಾಯತ್ರಿ ಜಲಾಶಯವನ್ನು ನಂಬಿಕೊಂಡು ಅನೇಕರು ಅಡಿಕೆ, ತೆಂಗಿನ ತೋಟಗಳನ್ನು ಬೆಳೆಸಿದ್ದು, ಈಗ ಅವೆಲ್ಲ ನೀರಿಲ್ಲದೆ ಒಣಗುತ್ತಿವೆ. ಲಕ್ಷಾಂತರ ರೂಪಾಯಿ ಹಣ ಹಾಕಿ ಮಕ್ಕಳಂತೆ ಜೋಪಾನ ಮಾಡಿ ಬೆಳೆಸಿದ ತೋಟಗಳು ಕಣ್ಣೆದುರು ಒಣಗುತ್ತಿದ್ದರೆ ಕಣ್ಣೀರಿನ ಬದಲು ರಕ್ತ ಸುರಿಯುತ್ತದೆ. ಆದ್ದರಿಂದ ಜಿಲ್ಲಾಡಳಿತ ಮತ್ತು ಸರ್ಕಾರ ಕೂಡಲೇ ಸ್ಥಳಕ್ಕೆ ಬಂದು ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲದಿದ್ದರೆ ಇಡೀ ಜಿಲ್ಲೆಯ ಎಲ್ಲ ತಾಲ್ಲೂಕುಗಳ ರೈತ ಸಂಘಟನೆಗಳ ಬೆಂಬಲದೊಂದಿಗೆ ತೀವ್ರ ರೀತಿಯ ಹೋರಾಟ ನಡೆಸಬೇಕಾಗುತ್ತದೆ’ ಎಂದು ಸಿದ್ದವೀರಪ್ಪ ಎಚ್ಚರಿಸಿದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ಆಲೂರು ಸಿದ್ದರಾಮಣ್ಣ, ಎಂ.ಆರ್.ವೀರಣ್ಣ, ನಟರಾಜ್ ಮಾತನಾಡಿದರು. ಪ್ರತಿಭಟನೆಯಲ್ಲಿ ಹೊಳಲ್ಕೆರೆಯ ಬಸವರಾಜಪ್ಪ, ಪರಮೇಶ್ವರಪ್ಪ, ರಾಜಣ್ಣ, ಪ್ರಶಾಂತ್, ಪ್ರಸನ್ನ, ಕನ್ಯಪ್ಪ, ತಿಮ್ಮಾರೆಡ್ಡಿ, ರಾಜಣ್ಣ, ಈರಣ್ಣ, ಶಿವಣ್ಣ, ರಾಮಕೃಷ್ಣ, ಕುಮಾರ, ಬಾಲಕೃಷ್ಣ, ಚಿತ್ರಲಿಂಗಪ್ಪ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT