ಗುರುವಾರ , ಆಗಸ್ಟ್ 11, 2022
28 °C
ಕಬ್ಬಿಣದ ಕಡಲೆಯಾದ ಪಿಯು ಅಧ್ಯಯನ; ಕೊನೆಯ ಸ್ಥಾನಕ್ಕೆ ಕುಸಿತ

ಎಸ್ಸೆಸ್ಸೆಲ್ಸಿಯಲ್ಲಿ ಎತ್ತರಕ್ಕೆ; ಪಿಯುಸಿಯಲ್ಲಿ ಪಾತಾಳಕ್ಕೆ ಚಿತ್ರದುರ್ಗ

ಜಿ.ಬಿ. ನಾಗರಾಜ್‌ Updated:

ಅಕ್ಷರ ಗಾತ್ರ : | |

ಪ್ರಾತಿನಿಧಿಕ ಚಿತ್ರ

ಚಿತ್ರದುರ್ಗ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯದಲ್ಲಿಯೇ ನಾಲ್ಕನೇ ಸ್ಥಾನ ಪಡೆದಿರುವ ಚಿತ್ರದುರ್ಗ ಜಿಲ್ಲೆ, ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕೊನೆಯ ಸ್ಥಾನದಲ್ಲಿದೆ. ಎಸ್ಸೆಸ್ಸೆಲ್ಸಿಯಲ್ಲಿ ಗಗನಕ್ಕೆ ಏರುವ ಫಲಿತಾಂಶ ಪಿಯುಸಿಯಲ್ಲಿ ಪಾತಾಳಕ್ಕೆ ಕುಸಿಯುತ್ತಿರುವುದು ವಿಸ್ಮಯ ಮೂಡಿಸುತ್ತಿದೆ.

ಪರೀಕ್ಷಾ ಫಲಿತಾಂಶದಲ್ಲಿ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ನಿರ್ಲಕ್ಷಿತ ಜಿಲ್ಲೆಗಳು ಸಾಮಾನ್ಯವಾಗಿ ಕೊನೆಯ ಸ್ಥಾನ ಪಡೆಯುತ್ತಿದ್ದವು. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಜಿಲ್ಲೆಗಳ ಶೈಕ್ಷಣಿಕ ಪ್ರಗತಿ ಅಷ್ಟೇನೂ ತೃಪ್ತಿಕರವಾಗಿರಲಿಲ್ಲ. ಆದರೆ, ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಪರಿಸ್ಥಿತಿ ಭಿನ್ನವಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಉನ್ನತಿ ಸಾಧಿಸಿದ್ದ ಜಿಲ್ಲೆಯ ಫಲಿತಾಂಶ ಪ್ರತಿ ವರ್ಷ ಕುಸಿಯುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಜಿಲ್ಲೆಯಲ್ಲಿ 36 ಸರ್ಕಾರಿ, 47 ಅನುದಾನಿತ ಹಾಗೂ 43 ಅನುದಾನ ರಹಿತ ಸೇರಿ 126 ಪದವಿಪೂರ್ವ ಕಾಲೇಜುಗಳಿವೆ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಿಂದ 16,570 ವಿದ್ಯಾರ್ಥಿಗಳು ಏಪ್ರಿಲ್‌ ತಿಂಗಳಲ್ಲಿ ಪರೀಕ್ಷೆ ಬರೆದಿದ್ದರು. ಇದರಲ್ಲಿ 7,594 (ಸರಾಸರಿ ಶೇ 49ರಷ್ಟು) ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಜಿಲ್ಲೆಯ ಫಲಿತಾಂಶ ಸತತ ಎರಡನೇ ಬಾರಿಗೆ ಶೇ 50ಕ್ಕಿಂತ ಕೆಳಗೆ ಇಳಿದಿದೆ.

ವಿಜ್ಞಾನ ವಿಭಾಗದ 4,990ರಲ್ಲಿ 2,739 (ಶೇ 54) ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ವಾಣಿಜ್ಯ ವಿಭಾಗದ 4,635 ರಲ್ಲಿ 2,460 (ಶೇ 53) ಹಾಗೂ ಕಲಾ ವಿಭಾಗದ 6,945ರಲ್ಲಿ 2,395 (ಶೇ 34) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸಾಮಾನ್ಯಕ್ಕೆ ಸುಲಭ ಎಂದೇ ಪರಿಗಣಿತವಾದ ಕಲಾ ವಿಭಾಗದ ಫಲಿತಾಂಶವೇ  ಕಳಪೆಯಾಗಿದೆ.

ಪ್ರತಿಭಾ ಪಲಾಯನದ ಸಬೂಬು: ಫಲಿತಾಂಶ ಕುಸಿಯುತ್ತಿರುವುದಕ್ಕೆ ಪದವಿಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಉಪನ್ಯಾಸಕರು ‘ಪ್ರತಿಭಾ ಪಲಾಯನ’ದ ಸಬೂಬು ನೀಡುತ್ತಾರೆ. ಪ್ರತಿಭಾವಂತ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ನಂತರದ ಅಧ್ಯಯನಕ್ಕೆ ಹೊರ ಜಿಲ್ಲೆಗೆ ತೆರಳುತ್ತಿರುವುದು ಕಳಪೆ ಫಲಿತಾಂಶಕ್ಕೆ ಕಾರಣವಾಗುತ್ತಿದೆ ಎಂಬ ವಾದವನ್ನು ಮುಂದಿಡಲಾಗುತ್ತಿದೆ.

‘ಪದವಿಪೂರ್ವ ಶಿಕ್ಷಣಕ್ಕೆ ದಾವಣಗೆರೆ, ಬಳ್ಳಾರಿ, ತುಮಕೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಮಕ್ಕಳನ್ನು ಕಳುಹಿಸುವ ಪ್ರವೃತ್ತಿ ಜಿಲ್ಲೆಯಲ್ಲಿದೆ. ದುಬಾರಿ ಶುಲ್ಕ, ವಸತಿ ಸೌಕರ್ಯ ಭರಿಸುವ ಆರ್ಥಿಕ ಶಕ್ತಿ ಹೊಂದಿದವರು ಹೊರಜಿಲ್ಲೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ಅತ್ಯುತ್ತಮ ಅಂಕ ಪಡೆದ ಬಡ ವಿದ್ಯಾರ್ಥಿಗಳನ್ನು ಹೊರಜಿಲ್ಲೆಯ ಕಾಲೇಜುಗಳು ಸೆಳೆಯುತ್ತಿವೆ. ಸಾಮಾನ್ಯರಲ್ಲೇ ಸಾಮಾನ್ಯ ಎಂಬಂಥ ವಿದ್ಯಾರ್ಥಿಗಳು ಮಾತ್ರ ಜಿಲ್ಲೆಯಲ್ಲಿ ಉಳಿಯುವುದರಿಂದ ಫಲಿತಾಂಶ ಕುಸಿಯುತ್ತಿದೆ’ ಎಂಬುದು ಉಪನ್ಯಾಸಕರ ಅಭಿಪ್ರಾಯ.

ಆದರೆ, ಇದು ಅರ್ಧ ಸತ್ಯ ಎಂಬುದನ್ನು ಫಲಿತಾಂಶವೇ ಋಜುವಾತು ಪಡಿಸಿದೆ. ವಾಣಿಜ್ಯ ವಿಭಾಗದ ಯು. ಸಾಕ್ಷಿ ಹಾಗೂ ಎಂ. ಕಾವ್ಯಾ ಶೇ 98ರಷ್ಟು ಅಂಕ ಪಡೆದಿದ್ದಾರೆ. ವಿಜ್ಞಾನ ವಿಭಾಗದ ಆರ್‌. ನಿಖಿಲ್‌, ಎಸ್‌.ಎಸ್‌. ಮುಕ್ತಾ, ಕೆ.ಎಂ. ಶರತ್‌ ಶೇ 98.6 ಅಂಕ ಗಳಿಸಿದ್ದಾರೆ. ಕಲಾ ವಿಭಾಗದ ಎಸ್‌. ಮೇಘನ ಶೇ 97 ಅಂಕ ಪಡೆದಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸರಾಸರಿ ತೇರ್ಗಡೆ ಪ್ರಮಾಣ ಕುಸಿಯುತ್ತಿರುವುದಕ್ಕೆ ನಿಖರ ಕಾರಣ ಬೇರೆಯೇ ಇವೆ.

ತೇರ್ಗಡೆ ಪ್ರಮಾಣ ಶೇ 97

ಚಿತ್ರದುರ್ಗ ಜಿಲ್ಲೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಶೇ 97ರಷ್ಟು  ತೇರ್ಗಡೆ ಪ್ರಮಾಣ ಹೊಂದಿದೆ. ಶೇ 98ರಷ್ಟು ತೇರ್ಗಡೆ ಹೊಂದಿದ ಕಾರವಾರ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಗಳು ಮೊದಲ ಎರಡು ಸ್ಥಾನದಲ್ಲಿವೆ. ತೇರ್ಗಡೆ ಪ್ರಮಾಣದಲ್ಲಿ ಕೋಟೆನಾಡು ರಾಜ್ಯದಲ್ಲೇ ಮೂರನೇ ಸ್ಥಾನದಲ್ಲಿದೆ.

2020ರಲ್ಲಿ ಎಸ್ಸೆಸ್ಸೆಲ್ಸಿ ತೇರ್ಗಡೆ ಹೊಂದಿದ ಮಕ್ಕಳೇ 2022ರಲ್ಲಿ ಪಿಯು ಪರೀಕ್ಷೆ ಬರೆದಿದ್ದಾರೆ. ಎರಡು ವರ್ಷಗಳ ಹಿಂದೆ ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆ ಶೇ 88ರಷ್ಟು ಫಲಿತಾಂಶ ಪಡೆದಿತ್ತು. ಸುಮಾರು 22 ಸಾವಿರ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿದ್ದರು.

‘ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷಾ ಪದ್ಧತಿ ಭಿನ್ನವಾಗಿವೆ. ದ್ವಿತೀಯ ಪಿಯುಸಿ ಪರೀಕ್ಷೆ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತಿದೆ. ಪ್ರಥಮ ಪಿಯುಸಿಯಲ್ಲಿ ಈ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿರಲಿಲ್ಲ. ಹೀಗಾಗಿ, ಅವರ ಸಾಮರ್ಥ್ಯ ಅಳೆಯುವುದು ಸಾಧ್ಯವಾಗಲಿಲ್ಲ’ ಎಂಬುದು ಉಪನ್ಯಾಸಕರ ಸಬೂಬು.

* ಕಳಪೆ ಫಲಿತಾಂಶಕ್ಕೆ ವಿದ್ಯಾರ್ಥಿ ಹಾಗೂ ಪೋಷಕರೂ ಹೊಣೆ ಹೊರಬೇಕು. ಉಪನ್ಯಾಸಕರನ್ನು ದೂರುವುದರಿಂದ ಪ್ರಯೋಜನವಿಲ್ಲ. 2023ರಲ್ಲಿ ಮೊದಲ ಹತ್ತು ಸ್ಥಾನಗಳಲ್ಲಿ ಒಂದನ್ನು ಪಡೆಯುವ ಗುರಿ ಇದೆ.

-ಎನ್‌. ರಾಜು, ಉಪನಿರ್ದೇಶಕ, ಪದವಿಪೂರ್ವ ಶಿಕ್ಷಣ ಇಲಾಖೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು