ಶನಿವಾರ, ಮೇ 28, 2022
30 °C
ಬಗರ್‌ಹುಕುಂ ಸಮಿತಿ ಸಭೆ

ಬೋಗಸ್ ಅರ್ಜಿಗಳನ್ನು ಮುಲಾಜಿಲ್ಲದೆ ತಿರಸ್ಕರಿಸಿ: ಶಾಸಕ ಎಂ.ಚಂದ್ರಪ್ಪ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಳಲ್ಕೆರೆ: ಜಮೀನು ಮಂಜೂರು ಕೋರಿ ಸಲ್ಲಿಸುವ ಬೋಗಸ್ ಅರ್ಜಿಗಳನ್ನು ಮುಲಾಜಿಲ್ಲದೆ ತಿರಸ್ಕರಿಸಿ ಎಂದು ಶಾಸಕ ಎಂ. ಚಂದ್ರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದ ಮೈರಾಡ ತರಬೇತಿ ಕೇಂದ್ರದಲ್ಲಿ ಸೋಮವಾರ ನಡೆದ ಅನಧಿಕೃತ ಭೂಮಿ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ಜಮೀನು ರಹಿತ ಅರ್ಹ ಫಲಾನುಧವಿಗಳಿಗೆ ಭೂಮಿ ಸಿಗಬೇಕು. ತಲೆತಲಾಂತರದಿಂದ ಉಳುಮೆ ಮಾಡಿಕೊಂಡು ಬಂದ ರೈತರ ಹೆಸರಿಗೆ ಜಮೀನು ಮಂಜೂರಾಗಬೇಕು. ಕೆಲವರು ಪ್ರಭಾವ ಬಳಸಿಕೊಂಡು ಜಮೀನಿಗೆ ಅರ್ಜಿ ಸಲ್ಲಿಸಿರುತ್ತಾರೆ. ಜಮೀನು ಉಳುಮೆ ಮಾಡದೆ ಜಮೀನು ಬೇಕು ಎಂದು ಅರ್ಜಿ ಹಾಕಿರುತ್ತಾರೆ. ಅಂತವರ ಅರ್ಜಿಗಳನ್ನು ಮಾನ್ಯ ಮಾಡಬೇಡಿ. ಎರಡು ಮೂರು ತಲೆಮಾರುಗಳಿಂದ ಜಮೀನು ಉಳುಮೆ ಮಾಡುತ್ತಿದ್ದರೂ ಕೆಲವರು ಅರ್ಜಿ ಹಾಕಿರುವುದಿಲ್ಲ.
ಅಂತವರನ್ನು ಗುರುತಿಸಿ ಜಮೀನು ಮಂಜೂರು ಮಾಡಬೇಕು’ ಎಂದು ಸೂಚಿಸಿದರು.

‘ಅಮೃತ್ ಮಹಲ್ ಕಾವಲ್, ಅರಣ್ಯ ಪ್ರದೇಶ, ಹಿಡುವಳಿ ಭೂಮಿ, ಕೆರೆ, ಪುರಸಭೆ ವ್ಯಾಪ್ತಿಯಲ್ಲಿ ಜಮೀನು ಮಂಜೂರು ಮಾಡಲು ಬರುವುದಿಲ್ಲ. 121 ಹಳ್ಳಿಗಳಿಂದ ಅರ್ಜಿಗಳು ಬಂದಿದ್ದು, 40 ಹಳ್ಳಿಗಳಲ್ಲಿ ಸರ್ಕಾರಿ ಜಮೀನು ಲಭ್ಯವಿದೆ. ಸದ್ಯಕ್ಕೆ 8 ಹಳ್ಳಿಗಳ 121 ಫಲಾನುಭವಿಗಳಿಗೆ ಜಮೀನು ಮಂಜೂರು ಮಾಡಲಾಗಿದೆ. ತಾಳ್ಯ, ಗಟ್ಟಿ ಹೊಸಹಳ್ಳಿ, ತಿರುಮಲಾಪುರ, ಕುಮ್ಮಿನಘಟ್ಟ, ಹುಣಸೆ ಪಂಚೆ, ಮಲಸಿಂಗನಹಳ್ಳಿ, ಮದ್ದೇರು ಗ್ರಾಮಗಳ 121 ರೈತರಿಗೆ 161 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಉಳಿದ ಗ್ರಾಮಗಳಲ್ಲಿ ಸರ್ವೆ ಕಾರ್ಯ ನಡೆಯುತ್ತಿದ್ದು, ಒಂದು ತಿಂಗಳಲ್ಲಿ ಜಮೀನು ಹಂಚಿಕೆ ಮಾಡಲಾಗುವುದು. ಬಡವರಿಗೆ ಜಮೀನು ಸಿಗಬೇಕು ಎಂಬುದು ನಮ್ಮ ಉದ್ದೇಶ. ಹಂತಹಂತವಾಗಿ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು. ಆದ್ದರಿಂದ ಅರ್ಜಿ ಹಾಕಿರುವವರು ನಿರಾಸೆ ಹೊಂದುವುದು ಬೇಡ’ ಎಂದು ಚಂದ್ರಪ್ಪ ಭರವಸೆ ನೀಡಿದರು.

‘ಸರ್ಕಾರಿ ಜಮೀನು ಲಭ್ಯವಿರದ ಕಡೆ ಖಾಸಗಿಯವರಿಂದ ಖರೀದಿ ಮಾಡಿ ಪರಿಶಿಷ್ಟ ರೈತರಿಗೆ ಹಂಚಿಕೆ ಮಾಡಲು ಅವಕಾಶ ಇದೆ. ಅರಣ್ಯ ಪ್ರದೇಶದಲ್ಲಿ ಮೂರು ತಲೆಮಾರುಗಳಿಂದ ಉಳುಮೆ ಮಾಡಿದವರಿಗೆ ಜಮೀನು ಸಕ್ರಮ ಮಾಡಬಹುದು. ತಾಲ್ಲೂಕಿನ ಅರೆಹಳ್ಳಿ, ಗುಂಡೇರಿ, ತಾಳಿಕಟ್ಟೆ, ವನಕೆ ಮರಡಿ ಕಾವಲ್‌ಗಳಲ್ಲಿ ರೈತರು ಗುತ್ತಿಗೆ ಆಧಾರದಲ್ಲಿ ಜಮೀನು ಉಳುಮೆ ಮಾಡುತ್ತಿದ್ದಾರೆ. ತಾತ, ಮುತ್ತಾತರ ಕಾಲದಿಂದ ಉಳುಮೆ ಮಾಡಿದರೂ ಜಮೀನು ಅವರ ಹೆಸರಿಗೆ ಆಗಿಲ್ಲ. ಇದರಿಂದ ಅವರು ಸರ್ಕಾರದ ಸೌಲಭ್ಯ ಪಡೆಯಲು ಆಗುತ್ತಿಲ್ಲ. ಈ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ದನಿಯೆತ್ತಿದ್ದೆ. ಈಗ ಈ ಜಮೀನು ಸರ್ವೇ ಕಾರ್ಯ ಪ್ರಗತಿಯಲ್ಲಿದ್ದು, ಮುಂದಿನ ಅಧಿವೇಶನ ಸಂದರ್ಭದಲ್ಲಿ ಕ್ಯಾಬಿನೆಟ್ ಒಪ್ಪಿಗೆ ಪಡೆಯಲಾಗುವುದು’ ಎಂದರು.

ಬಗರ್‌ಹುಕುಂ ಸಮಿತಿಯ ಸದಸ್ಯರಾದ ದಗ್ಗೆ ಶಿವಪ್ರಕಾಶ್, ಅಂಗಡಿ ಹಾಲಮ್ಮ, ಕೃಷ್ಣಮೂರ್ತಿ, ಹೊಳಲ್ಕೆರೆ ತಹಶೀಲ್ದಾರ್ ರಮೇಶಾಚಾರಿ, ಚಿತ್ರದುರ್ಗ ತಹಶೀಲ್ದಾರ್ ಸತ್ಯನಾರಾಯಣ, ನಾಗಭೂಷಣ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು