ಗುರುವಾರ , ಫೆಬ್ರವರಿ 27, 2020
19 °C
ಅಂಬಿಗರ ಚೌಡಯ್ಯ ಜಯಂತಿಯಲ್ಲಿ ನಿವೃತ್ತ ಪ್ರಾಂಶುಪಾಲ ಎನ್.ಕೆ. ರಾಮಚಂದ್ರಪ್ಪ

ಚೌಡಯ್ಯ ಮಾನವೀಯತೆ ಬಿತ್ತಿದ ಮಹಾಶರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಎಲ್ಲ ಧರ್ಮಕ್ಕಿಂತಲೂ ಮಾನವೀಯ ಮೌಲ್ಯ ಅಳವಡಿಸಿಕೊಂಡ ಧರ್ಮವೇ ಶ್ರೇಷ್ಠ ಎಂಬ ಬೀಜವನ್ನು ಬಿತ್ತಿ, ಜಾತಿ ತಾರತಮ್ಯ ಹೋಗಲಾಡಿಸಲು ಶ್ರಮಿಸಿದ ಮಹಾಶರಣ ಅಂಬಿಗರ ಚೌಡಯ್ಯ’ ಎಂದು ರಾಣೆಬೆನ್ನೂರು ನಿವೃತ್ತ ಪ್ರಾಂಶುಪಾಲ ಎನ್.ಕೆ. ರಾಮಚಂದ್ರಪ್ಪ ಅವರು ಹೇಳಿದರು.

ತರಾಸು ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆಯಿಂದ ಆಯೋಜಿಸಿದ್ದ ‘ನಿಜಶರಣ ಅಂಬಿಗರ ಚೌಡಯ್ಯ ಜಯಂತಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಅಂಬಿಗರ ಚೌಡಯ್ಯ ರಾಣೆಬೆನ್ನೂರಿನ ಧಾನಪುರದಲ್ಲಿ 1186ರಲ್ಲಿ ಜನಿಸಿದ್ದಾರೆ ಎಂಬ ಉಲ್ಲೇಖಗಳಿವೆ. ಸಮಾಜದ ಅನಿಷ್ಟ ಪದ್ಧತಿಗಳನ್ನು ದೂರಮಾಡಿ ಸ್ತ್ರೀ-ಪುರುಷರು ಸಮಾನರು ಎಂಬ ಕಲ್ಪನೆ ನೀಡಿದ್ದಾರೆ. ಉತ್ತಮ ಸಮಾಜ ನಿರ್ಮಾಣಕ್ಕೆ ಇವರು ಸೇರಿ ಶರಣ ಪರಂಪರೆ ನೀಡಿದ ಕಲ್ಪನೆ ಅಗಾಧವಾದದ್ದು’ ಎಂದು ಬಣ್ಣಿಸಿದರು.

‘ಬುದ್ಧ, ಬಸವಣ್ಣ ಅವರ ಸಮಕಾಲೀನರಾದ ಅಂಬಿಗರ ಚೌಡಯ್ಯ ರಚಿಸಿರುವ 330 ವಚನಗಳು ಪತ್ತೆಯಾಗಿವೆ. ಅವರ ಸಾಧನೆ ಸ್ಮರಿಸುವ ಬದಲು ಪ್ರಸ್ತುತ ದಿನಗಳಲ್ಲಿ ಧರ್ಮ, ಜಾತಿಗಳನ್ನು ವಿಭಜಿಸುವ ಕಾರ್ಯವಾಗುತ್ತಿದೆ’ ಎಂದು ವಿಷಾದಿಸಿದರು.

‘ಅಂಬಿಗರ ಚೌಡಯ್ಯ ಸ್ವಾಮಿ ನಿಷ್ಠೆ, ಸ್ವಾಭಿಮಾನ, ಘನತೆ, ಗೌರವಕ್ಕೆ ಪಾತ್ರರಾದವರು. ಸ್ಥಳದಲ್ಲಿಯೇ ಅನ್ಯಾಯ ಖಂಡಿಸಿ, ಕಠೋರ ಹಾಗೂ ನಿಷ್ಠುರವಾದಿ ಎನಿಸಿದ್ದಾರೆ. ಜಂಗಮ ಎಂದರೆ ನಡೆ-ನುಡಿ ಶುದ್ಧವಾಗಿರಬೇಕು. ಡಾಂಭಿಕ ಪೂಜೆಗಿಂತ ಭಕ್ತಿ ಪೂಜೆ ಮುಖ್ಯ. ಪ್ರತಿಯೊಬ್ಬರಿಗೆ ಶಿಕ್ಷಣ ನೀಡಬೇಕು. ದುಂದುವೆಚ್ಚದ ಬದಲು ಶಿಕ್ಷಣಕ್ಕಾಗಿ ಹಣ ವ್ಯಯಿಸಬೇಕು ಎಂಬುದು ಅವರ ವಚನಗಳ ತಾತ್ಪರ್ಯ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ನಗರಸಭೆ ಪೌರಾಯುಕ್ತ ಜಿ.ಟಿ. ಹನುಮಂತರಾಜು, ಜಿಲ್ಲಾ ಗಂಗಾಂಬಿಕ ಬೆಸ್ತರ ಸಂಘದ ಡಿ.ಎಚ್. ರಂಗಯ್ಯ, ಪಿ.ಶ್ರೀನಿವಾಸ್ ಅವರೂ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು