ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ: ಚಿತ್ರದುರ್ಗದಲ್ಲಿ ತಡರಾತ್ರಿ ನಡೆದ ಸ್ಥಳ ಮಹಜರು

Published 14 ಜೂನ್ 2024, 1:47 IST
Last Updated 14 ಜೂನ್ 2024, 1:47 IST
ಅಕ್ಷರ ಗಾತ್ರ

ಚಿತ್ರದುರ್ಗ: ರೇಣುಕಸ್ವಾಮಿ ಕೊಲೆ ಪ್ರಕರಣ ಸಂಬಂಧ ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಶುಕ್ರವಾರ ಬೆಳಗಿನಜಾವ ಆರೋಪಿಗಳ ಜೊತೆ ನಗರಕ್ಕೆ ಭೇಟಿ ನೀಡಿ ವಿವಿಧ ಸ್ಥಳಗಳಲ್ಲಿ ಮಹಜರು ನಡೆಸಿದರು. 250ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ಅವರಿಗೆ ಭದ್ರತೆ ನೀಡಿದ್ದರು.

‘ಪೊಲೀಸರು ಆರೋಪಿಗಳೊಂದಿಗೆ ಬರುತ್ತಾರೆ, ಪ್ರಮುಖ ಆರೋಪಿ, ನಟ ದರ್ಶನ್‌ ಸಹ ಇರುತ್ತಾರೆ’ ಎಂಬ ಸುದ್ದಿಗಳು ಬೆಳಿಗ್ಗೆಯಿಂದಲೂ ಹರಿದಾಡು ತ್ತಿದ್ದವು. ಇದರಿಂದಾಗಿ ನಗರದ ವಿವಿ ಧೆಡೆ ಅಪಾರ ಸಂಖ್ಯೆಯ ಜನರು ಸೇರಿ ದ್ದರು. ಪೊಲೀಸರನ್ನು ಭದ್ರತೆಗೆ ನಿಯೋಜಿ ಸಿದ್ದರೂ ರಾತ್ರಿವರೆಗೂ ಬೆಂಗಳೂರು ಪೊಲೀಸರು ನಗರ ಪ್ರವೇಶಿಸಲಿಲ್ಲ.

ನಗರದಿಂದ ಹೊರಗೆ ಇದ್ದಾರೆ ಎಂಬ ಮಾಹಿತಿ ಬೆಳಿಗ್ಗೆಯಿಂದಲೂ ಇತ್ತು. ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶ ದಿಂದ ಮಹಜರು ಪ್ರಕ್ರಿಯೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ ಎಂಬ ಮಾಹಿತಿ ನೀಡಲಾಯಿತು. ಶುಕ್ರವಾರ ಬೆಳಗಿನಜಾವ 2 ಗಂಟೆ ಸುಮಾರಿಗೆ ನಗರಕ್ಕೆ ಬಂದ ಪೊಲೀಸರು ಮಹಜರು ಪಕ್ರಿಯೆ ಪೂರ್ಣಗೊಳಿಸಿದರು.

ರೇಣುಕಸ್ವಾಮಿಯನ್ನು ಬೆಂಗಳೂರಿಗೆ ಕರೆದೊಯ್ದ 4ನೇ ಆರೋಪಿ, ಅಖಿಲ ಕರ್ನಾಟಕ ದರ್ಶನ್‌ ತೂಗುದೀಪ ಸೇನಾ ಅಧ್ಯಕ್ಷ ರಾಘವೇಂದ್ರ ಹಾಗೂ ಇತರರ ಜತೆ ನಗರದ ವಿವಿಧ ಸ್ಥಳಗಳನ್ನು ಪರಿಶೀಲಿಸಲಾಯಿತು. ರೇಣುಕಸ್ವಾಮಿ ಕೆಲಸ ಮಾಡುತ್ತಿದ್ದ ಔಷಧ ಮಾರಾಟ ಮಳಿಗೆ, ಬೈಕ್ ನಿಲ್ಲಿಸಿದ್ದ ಪೆಟ್ರೋಲ್ ಬಂಕ್ ಸಮೀಪದ ಜಾಗ, ಕಾರಿಗೆ ಹತ್ತಿಸಿಕೊಂಡ ಚಳ್ಳಕೆರೆ ಗೇಟ್ ಹಾಗೂ ತುರುವನೂರು ರಸ್ತೆಯಲ್ಲಿರುವ ರೇಣುಕಸ್ವಾಮಿ ಅವರ ನಿವಾಸದ ಬಳಿ‌ ಪೊಲೀಸರು ಪರಿಶೀಲನೆ ನಡೆಸಿದರು. ಪಂಚರ ಸಮ್ಮುಖದಲ್ಲಿ ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿ ಸಹಿ ಪಡೆಯಲಾಯಿತು.

ಮತ್ತಿಬ್ಬರು ಆರೋಪಿಗಳ ಶರಣಾಗತಿ

ರೇಣುಕಸ್ವಾಮಿ ಕೊಲೆ ಪ್ರಕರಣದ 6ನೇ ಆರೋಪಿ, ನಗರದ ರೈಲ್ವೆ ಸ್ಟೇಷನ್‌ ಬಡಾವಣೆ ನಿವಾಸಿ ಜಗದೀಶ್‌ ಅಲಿಯಾಸ್‌ ಜಗ್ಗ, 7ನೇ ಆರೋಪಿ ಅನು ಅಲಿಯಾಸ್‌ ಅನುಕುಮಾರ್‌ ಶುಕ್ರವಾರ ಬೆಳಿಗ್ಗೆ ಪೊಲೀಸರೆದುರು ಶರಣಾದರು. ಇಬ್ಬರೂ ಆರೋಪಿಗಳನ್ನು ಬೆಂಗಳೂರಿನ ಕಾಮಾಕ್ಷಿ ಪಾಳ್ಯ ಪೊಲೀಸರಿಗೆ ಹಸ್ತಾಂತರ ಮಾಡಲಾಯಿತು.

ಚಿತ್ರದುರ್ಗ ಉಪ ವಿಭಾಗದ ಡಿವೈಎಸ್‌ಪಿ ಹಾಗೂ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಸಿಬ್ಬಂದಿ ನಗರದಲ್ಲಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು. ವಿಷಯ ತಿಳಿದು ಆರೋಪಿಗಳು ಶರಣಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಗದೀಶ್‌, ಅನುಕುಮಾರ್‌ ಇಬ್ಬರೂ ದರ್ಶನ್‌ ಅಭಿಮಾನಿಗಳಾಗಿದ್ದಾರೆ. ಅವರು ದರ್ಶನ್‌ ಜೊತೆಗಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

‘ವಿಚಾರಣಾಧಿಕಾರಿ ಮುಂದೆ ಸತ್ಯ ಹೇಳುತ್ತೇವೆ ಎಂದು ಕಚೇರಿಗೆ ಹಾಜರಾಗಿದ್ದರು. ಅವರನ್ನು ನಾವು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ಒಪ್ಪಿಸಿದ್ದೇವೆ, ನಾವು ವಿಚಾರಣೆ ನಡೆಸಿಲ್ಲ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್‌ ಮೀನಾ ‘ಪ್ರಜಾವಾಣಿ’ಗೆ ತಿಳಿಸಿದರು.

ಆರೋಪಿ ರವಿ ಹಸ್ತಾಂತರ: ಡಿವೈಎಸ್‌ಪಿ ಕಚೇರಿಯಲ್ಲಿ ಗುರುವಾರ ಶರಣಾಗಿದ್ದ 8ನೇ ಆರೋಪಿ ರವಿಯನ್ನೂ ಇದೇ ಸಂದರ್ಭದಲ್ಲಿ ಬೆಂಗಳೂರು ‌ಪೊಲೀಸರಿಗೆ ಹಸ್ತಾಂತರಿಸಲಾಯಿತು. ಜಿಲ್ಲಾ ಆಸ್ಪತ್ರೆಯಲ್ಲಿ ರವಿಯ ವೈದ್ಯಕೀಯ ಪರೀಕ್ಷೆಗೆ ನಡೆಸಿ ಬೆಂಗಳೂರಿಗೆ ಕರೆದೊಯ್ಯಲಾಯಿತು.

ಗೋಳಾಡಿದ ಕುಟುಂಬ ಸದಸ್ಯರು

ಆರೋಪಿಗಳಾದ ಜಗದೀಶ್‌, ಅನುಕುಮಾರ್‌ ಅವರ ಶರಣಾಗತಿ ವಿಷಯ ತಿಳಿಯುತ್ತಿದ್ದಂತೆಯೇ ಅವರ ಕುಟುಂಬ ಸದಸ್ಯರು ಗೋಳಾಡಿದರು.

‘ಆಟೊ ಓಡಿಸಿಕೊಂಡು ಬದುಕುತ್ತಿದ್ದ ನನ್ನ ಮಗ ಕುಟುಂಬಕ್ಕೆ ಆಸರೆಯಾಗಿದ್ದ. ಕೊಲೆ ಪ್ರಕರಣದಲ್ಲಿ ಹೇಗೆ ಸಿಕ್ಕಿಬಿದ್ದ ಎಂಬುದು ನಮಗೆ ಗೊತ್ತಿಲ್ಲ. ನಮ್ಮ ಮಗ ಕೊಲೆ ಮಾಡುವವನಲ್ಲ’ ಎಂದು ಅನುಕುಮಾರ್‌ ತಾಯಿ ಜಯಮ್ಮ ಹೇಳಿದರು.

‘ನನ್ನ ಮಗ ದರ್ಶನ್‌ ಅಭಿಮಾನಿ. ಜೂನ್‌ 8ರಂದು ಮನೆಯಿಂದ ಹೋದವ ಇನ್ನೂ ಬಂದಿಲ್ಲ. ಅವನನ್ನು ಮನಗೆ ಕರೆದುಕೊಂಡು ಬನ್ನಿ’ ಎಂದು ಜಗದೀಶ್‌ ತಾಯಿ ಸುಲೋಚನಮ್ಮ ಕೈಮುಗಿದು ಬೇಡಿಕೊಂಡರು.

‘ನನ್ನ ಪತಿಗೂ ಕೊಲೆ ಪ್ರಕರಣಕ್ಕೂ ಸಂಬಂಧವಿಲ್ಲ, ಬಾಡಿಗೆ ಪಡೆದವರಿಗಾಗಿ ಕಾರ್‌ ಚಾಲನೆ ಮಾಡಿಕೊಂಡು ಹೋಗಿದ್ದಾರೆ. ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದು ಏಕೆ’ ಎಂದು ಗುರುವಾರ ಶರಣಾಗಿದ್ದ ಆರೋಪಿ ರವಿ ಪತ್ನಿ ಕವಿತಾ ಪ್ರಶ್ನಿಸಿದರು.

ಆರೋಪಿಯ ತಂದೆಗೆ ಹೃದಯಾಘಾತ: ಸಾವು

7ನೇ ಆರೋಪಿ ಅನು ಅಲಿಯಾಸ್‌ ಅನುಕುಮಾರ್‌ ಪೊಲೀಸ್‌ ವಶಕ್ಕೆ ಒಪ್ಪಿಸಿದ ಸುದ್ದಿ ತಿಳಿದ ಬೆನ್ನಲ್ಲೇ ಆತನ ತಂದೆ ಚಂದ್ರಣ್ಣ ಶುಕ್ರವಾರ ಸಂಜೆ (60) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪುತ್ರ ಭಾಗಿಯಾಗಿದ್ದಾನೆ ಎಂಬ ವಿಷಯ ತಿಳಿದ ಚಂದ್ರಣ್ಣ ನೊಂದುಕೊಂಡಿದ್ದರು. ಶುಕ್ರವಾರ ಮಗನ ಶರಣಾಗತಿ ವಿಷಯ ತಿಳಿದು ಆಘಾತಕ್ಕೆ ಒಳಗಾಗಿದ್ದರು. ‘ನನ್ನ ಮಗ ಕೊಲೆಗಾರನಲ್ಲ’ ಎಂದು ಕಣ್ಣೀರು ಹಾಕಿದ್ದರು. ನಗರದ ಸಿಹಿನೀರು ಹೊಂಡ ಬಳಿಯ ತಮ್ಮ ನಿವಾಸದಲ್ಲಿ ಚಂದ್ರಣ್ಣ ಅಸ್ವಸ್ಥರಾದರು. ಆಸ್ಪತ್ರೆಗೆ ಕರೆದೊಯ್ಯುವಾಗ ಅವರು ಮೃತಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT