ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ದಿಟ್ಟ ಹೆಜ್ಜೆಗೆ ವಿಶ್ವ ಮೆಚ್ಚುಗೆ: ಸಚಿವ ಬಿ.ಶ್ರೀರಾಮುಲು

Last Updated 26 ಜನವರಿ 2021, 12:59 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೋವಿಡ್ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಇಟ್ಟಿರುವ ದಿಟ್ಟ ಹೆಜ್ಜೆಗಳಿಗೆ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಸಂವಿಧಾನದ ಆಶೋತ್ತರಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದರು.

ಗಣರಾಜ್ಯೋತ್ಸವದ ಅಂಗವಾಗಿ ಇಲ್ಲಿನ ಪೊಲೀಸ್‌ ಕವಾಯತು ಮೈದಾನದಲ್ಲಿ ಮಂಗಳವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ರಾಜ್ಯ ಹಾಗೂ ದೇಶದಲ್ಲಿ ಛಾಪು ಮೂಡಿಸಿದ ಜಿಲ್ಲೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಅಭಿವೃದ್ಧಿಗೆ ಕೈಗೊಂಡಿರುವ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.

‘ಪವನ ವಿದ್ಯುತ್‌ ಶಕ್ತಿಯಲ್ಲಿ ರಾಜ್ಯದಲ್ಲಿಯೇ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಬಾಹ್ಯಾಕಾಶ ಸಂಸ್ಥೆ ಇಸ್ರೊ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳಿಂದ ಚಿತ್ರದುರ್ಗವು ಗಗನಯಾತ್ರಿಗಳ ತರಬೇತಿ ಕೇಂದ್ರವಾಗಲಿದೆ. ಮೂಲತಃ ಚಳ್ಳಕೆರೆಯ ಪ್ರೊ.ಟಿ.ಜಿ.ಸೀತಾರಾಂ ಅವರು ರಾಮಮಂದಿರ ನಿರ್ಮಾಣದ ತಂತ್ರಜ್ಞರ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ. ರಾಮಮಂದಿರ ನಿರ್ಮಾಣದ ಇತಿಹಾಸದಲ್ಲಿ ಜಿಲ್ಲೆಯ ಹೆಸರು ದಾಖಲಾಗಲಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

‘ಗಣರಾಜ್ಯೋತ್ಸವ ಹಬ್ಬ ಒಂದು ದಿನಕ್ಕೆ ಸೀಮಿತವಾಗಬಾರದು. ಜನಸಾಮಾನ್ಯರಿಂದಲೇ ದೇಶ ನಿರ್ಮಾಣವಾಗಿದ್ದು, ಜನರ ಉತ್ಸವವಾಗಿದೆ. ಯುವಕರಲ್ಲಿ ದೇಶ ಪ್ರೇಮ ಬೆಳೆಸಲು, ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು, ಸಂವಿಧಾನದ ಆಶೋತ್ತರಗಳ ಆಚರಣೆ ನಿತ್ಯೋತ್ಸವ ಆಗಬೇಕು’ ಎಂದು ಹೇಳಿದರು.

‘ಸಂವಿಧಾನದ ಬಲದಿಂದಲೇ ದೇಶ ಸುಭದ್ರ ಆರ್ಥಿಕತೆ ಹೊಂದಲು ಸಾಧ್ಯವಾಗಿದೆ. ಜನಸಾಮಾನ್ಯರ ಮನೆ ಬಾಗಿಲಿಗೆ ಸರ್ಕಾರ ತಲುಪಿದೆ. ಪ್ರತಿ ಹಳ್ಳಿಯು ಅಭಿವೃದ್ಧಿಯ ಕತೆ ಹೇಳಬೇಕು ಎಂಬ ಸಂವಿಧಾನದ ಆಶಯ ಈಡೇರುತ್ತಿದೆ. ಚಳ್ಳಕೆರೆಯ ಬಿ.ಸಿ.ಪಂಕಜ ಅವರು ಸ್ವಾಭಿಮಾನದಿಂದ ಬದುಕಬಹುದು ಎಂಬುದನ್ನು ತೋರಿಸಿದ್ದಾರೆ’ ಎಂದರು.

‘ಸಂವಿಧಾನದ ಆಶಯಗಳ ಈಡೇರಿಕೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗೆ ಸುಮಾರು 25 ಸಾವಿರ ಕೋಟಿಯಷ್ಟು ಅನುದಾನ ಮೀಸಲಿಡಲಾಗಿದೆ. ಇದರ ಸಂಪೂರ್ಣ ಬಳಕೆಗೆ ಅದ್ಯತೆ ನೀಡಲಾಗಿದೆ. ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ 4,500 ಕೋಟಿ ಅನುದಾನ ಒದಗಿಸಲಾಗಿದೆ. ಗಂಗಾ ಕಲ್ಯಾಣ ಯೋಜನೆಗೆ ಮತ್ತೆ ಚಾಲನೆ ನೀಡಲಾಗಿದೆ’ ಎಂದರು.

‘ಜಿಲ್ಲೆಯಲ್ಲಿ ಸುರಿದ ಬಾರಿ ಮಳೆಯಿಂದ ಸಂಕಷ್ಟಕ್ಕೀಡಾದ ರೈತರ ನೆರವಿಗೆ ಧಾವಿಸಿದ ಸರ್ಕಾರ, ₹1.06ಕೋಟಿ ಪರಿಹಾರ ನೀಡಿದೆ. ಚಿತ್ರದುರ್ಗ ನಗರದಲ್ಲಿ ₹ 21 ಕೋಟಿ ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ. ಸುಮಾರು 400 ಕಿ.ಲೋ ಮೀಟರ್ ಅಭಿವೃದ್ಧಿ ಕಾಮಗಾರಿಗಳು ಜಿಲ್ಲೆಯಲ್ಲಿ ಪ್ರಗತಿಯಲ್ಲಿವೆ. ನಗರೋತ್ಥಾನ ಯೋಜನೆಯಡಿ 77 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುತ್ತಿದೆ’ ಎಂದು ವಿವರಿಸಿದರು.

ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಉತ್ತಮ ಸೇವೆ ಸಲ್ಲಿಸಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್.ಫಾಲಾಕ್ಷ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸವರಾಜ್, ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವೆಂಕಟೇಶ್ ಹಾಗೂ ಬಸವೇಶ್ವರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಫಾಲಾಕ್ಷಯ್ಯ ಅವರನ್ನು ಸನ್ಮಾನಿಸಲಾಯಿತು. ಕೋವಿಡ್‌ ಸಂಕಷ್ಟ ಎದುರಿಸಿದ ಬಗೆಯನ್ನು ಡಾನ್‌ ಬಾಸ್ಕೊ ಶಾಲೆಯ ಮಕ್ಕಳು ನೃತ್ಯ ರೂಪಕದಲ್ಲಿ ಕಟ್ಟಿಕೊಟ್ಟರು.

ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ ಇನ್‌ಸ್ಪೆಕ್ಟರ್ ಎಚ್‌.ಡಿ.ರುದ್ರೇಶ್‌ ಪರೇಡ್‌ ಕಮಾಂಡರ್‌ ಆಗಿ ಕಾರ್ಯನಿರ್ವಹಿಸಿದರು. ಸಶಸ್ತ್ರ ಮೀಸಲು ಪಡೆ, ನಾಗರೀಕ ಪೊಲೀಸ್, ಗೃಹ ರಕ್ಷಕ ದಳ, ಅಬಕಾರಿ ಇಲಾಖೆ, ಅರಣ್ಯ ಇಲಾಖೆ ಸಿಬ್ಬಂದಿ, ಎನ್‍ಸಿಸಿ ಹಾಗೂ ವಿದ್ಯಾವಿಕಾಸ ಬಾಲಕಿರಯ ಪ್ರೌಢಶಾಲೆ ತಂಡಗಳು ಪಥ ಸಂಚಲನ ನಡೆಸಿದವು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್‍ಬಾಬು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಬದ್ರಿನಾಥ್, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಹೆಚ್ಚುವರಿ ಜಿಲ್ಲಾಧಿಕಾರಿ ಬಾಲಕೃಷ್ಣ, ನಗರಸಭೆ ಆಯುಕ್ತ ಜೆ.ಟಿ.ಹನುಮಂತರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT