ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೀಸಲಾತಿ ಪ್ರಕಟ; ಸದಸ್ಯರಿಗೆ ಸಿಕ್ಕ ಅಧಿಕಾರ

ಚಿತ್ರದುರ್ಗ ನಗರಸಭೆ; ಬಿಜೆಪಿ ಬೆಂಬಲಿತರಿಗೆ ಅಧಿಕಾರ, 8 ಸದಸ್ಯೆಯರಲ್ಲಿ ಯಾರು ಅಧ್ಯಕ್ಷೆ?
Published : 9 ಆಗಸ್ಟ್ 2024, 6:17 IST
Last Updated : 9 ಆಗಸ್ಟ್ 2024, 6:17 IST
ಫಾಲೋ ಮಾಡಿ
Comments

ಚಿತ್ರದುರ್ಗ: ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಸರ್ಕಾರ 2ನೇ ಅವಧಿಯ ಮೀಸಲಾತಿ ಪ್ರಕಟಿಸಿದ್ದು ಕಳೆದ 15 ತಿಂಗಳಿಂದ ಆಡಳಿತದಿಂದ ದೂರವೇ ಉಳಿದಿದ್ದ ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ ನಗರಸಭೆಗಳ ಸದಸ್ಯರಿಗೆ ಅಧಿಕಾರ ಸಿಕ್ಕಂತಾಗಿದೆ.

2018, ಸೆ.3ರಂದು ನಗರಸಭೆ ಚುನಾವಣೆ ಫಲಿತಾಂಶ ಪಡೆದ ನಂತರ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿಯಾಗದೇ ಸತತ 27 ತಿಂಗಳು ಅವರಿಗೆ ಅಧಿಕಾರ ಇರಲಿಲ್ಲ. ಮೀಸಲಾತಿ ಗೊಂದಲ ಹೈಕೋರ್ಟ್‌ನಲ್ಲಿದ್ದ ಕಾರಣ ನಗರಸಭೆ ಆಡಳಿತ ಮಂಡಳಿ ರಚನೆಯಾಗಿರಲಿಲ್ಲ. ಚುನಾವಣೆಯಲ್ಲಿ ಗೆದ್ದರೂ ಸದಸ್ಯರಿಗೆ ಕಾನೂನಾತ್ಮಕವಾಗಿ ಅಧಿಕಾರ ಚಲಾಯಿಸಲು ಅವಕಾಶ ಇರಲಿಲ್ಲ. ಆಡಳಿತಾಧಿಕಾರಿಯಾಗಿದ್ದ ಜಿಲ್ಲಾಧಿಕಾರಿಯೇ ಅಧಿಕಾರ ನಡೆಸುತ್ತಿದ್ದರು.

ಪ್ರತಿ ನಗರ ಸ್ಥಳೀಯ ಸಂಸ್ಥೆ ಅವಧಿಯಲ್ಲಿ ನಗರಾಭಿವೃದ್ಧಿ ಇಲಾಖೆ 2 ಬಾರಿ ಮೀಸಲಾತಿ ನಿಗದಿಪಡಿಸುತ್ತದೆ. 2018ರಲ್ಲಿ ಚುನಾವಣೆ ನಡೆದರೂ ಸರ್ಕಾರ 2020 ನವೆಂಬರ್‌ನಲ್ಲಿ ಮೊದಲ ಮೀಸಲಾತಿ ಪ್ರಕಟಗೊಳಿಸಿತು. 30 ತಿಂಗಳ ಅಧಿಕಾರದ ನಂತರ 2ನೇ ಮೀಸಲಾತಿ ನಿಗದಿಯೂ ಹೈಕೋರ್ಟ್‌ ಮೆಟ್ಟಿಲೇರಿತ್ತು. 15 ತಿಂಗಳ ನಂತರ ಈಗ 2ನೇ ಮೀಸಲಾತಿ ಪ್ರಕಟಗೊಂಡಿದ್ದು ಅಧಿಕಾರ ರಚನೆಗೆ ದಾರಿಯಾಗಿದೆ.

ಸಾಮಾನ್ಯ ಮಹಿಳೆಗೆ ಮೀಸಲು:  ಕಳೆದ ಅವಧಿಯಲ್ಲಿ ಚಿತ್ರದುರ್ಗ ನಗರಸಭೆಯ ಅಧ್ಯಕ್ಷ ಸ್ಥಾನ ಎಸ್‌ಟಿ ಮಹಿಳೆಗೆ ನಿಗದಿಯಾಗಿತ್ತು. 19ನೇ ವಾರ್ಡ್‌ನ ತಿಪ್ಪಮ್ಮ ವೆಂಕಟೇಶ್‌ ಅಧ್ಯಕ್ಷೆಯಾಗಿ, ಉಪಾಧ್ಯಕ್ಷ ಸ್ಥಾನ ‘ಬಿಸಿಎಂ ಎ’ಗೆ ನಿಗದಿಯಾಗಿತ್ತು. ನಾಲ್ವರು ಮಹಿಳೆಯರು ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ್ದರು. ಈ ಬಾರಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ‘ಬಿಸಿಎಂ ಎ ಮಹಿಳೆ’ಗೆ ನಿಗದಿಯಾಗಿದ್ದು ಬಿರುಸಿನ ರಾಜಕೀಯ ಚಟುವಟಿಕೆ ಆರಂಭಗೊಂಡಿದೆ.

35 ಸ್ಥಾನಗಳ ನಗರಸಭೆಯಲ್ಲಿ ಬಿಜೆಪಿ ಬೆಂಬಲಿತರು ಅತೀ ಹೆಚ್ಚು 17 ಮಂದಿ ಇದ್ದಾರೆ. ಜೆಡಿಎಸ್‌ ಬೆಂಬಲಿತರು 6, ಕಾಂಗ್ರೆಸ್‌ ಬೆಂಬಲಿತರು 5 ಹಾಗೂ 7 ಪಕ್ಷೇತರ ಸದಸ್ಯರಿದ್ದಾರೆ. ಅಧಿಕಾರ ರಚನೆಗೆ 18 ಸ್ಥಾನದ ಅವಶ್ಯಕತೆ ಇದೆ. ಬಿಜೆಪಿ ಬೆಂಬಲಿತರು 17 ಮಂದಿ ಇದ್ದು 1 ಎಂಎಲ್‌ಸಿ, 1 ಸಂಸದ ಸ್ಥಾನದ ಮತ ಸೇರಿದರೆ ಬಿಜೆಪಿ ಬೆಂಬಲಿತರಿಗೆ 19 ಸ್ಥಾನ ದೊರೆಯುತ್ತದೆ. ಹೀಗಾಗಿ ಬಿಜೆಪಿ ಬೆಂಬಲಿತರಿಗೆ ಅಧಿಕಾರ ಅಬಾಧಿತ. ಚುನಾವಣೆ ವೇಳಾಪಟ್ಟಿ ಪ್ರಕಟವಾಗುವುದನ್ನೇ ಕಾಯುತ್ತಿರುವ ಆಕಾಂಕ್ಷಿಗಳು ಸ್ಥಾನಕ್ಕಾಗಿ ಬೇಡಿಕೆ ಮಂಡಿಸಲಿದ್ದಾರೆ.

ಬಿಜೆಪಿ ಬೆಂಬಲಿತರಲ್ಲಿ 8 ಮಂದಿ ಮಹಿಳೆಯರಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದ್ದರೂ ಎಲ್ಲಾ ವರ್ಗದವರು ತಮ್ಮ ಬೇಡಿಕೆ ಮಂಡಿಸಲು ಅವಕಾಶವಿದೆ. ಹೀಗಾಗಿ ಕಳೆದ ಬಾರಿಯ ಅಧ್ಯಕ್ಷನ್ನು ಹೊರತುಪಡಿಸಿ ಉಳಿದ 7 ಮಂದಿ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌, ಸಂಸದ ಗೋವಿಂದ ಕಾರಜೋಳ ಅವರ ಬಳಿ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

1ನೇ ವಾರ್ಡ್‌ ಚಂದ್ರಮ್ಮ, 9ನೇ ವಾರ್ಡ್‌ ಬಾಲಮ್ಮ, 21ನೇ ವಾರ್ಡ್‌ ಅನುರಾಧ ರವಿಕುಮಾರ್‌, 22 ನೇವಾರ್ಡ್‌ ರೋಹಿಣಿ ನವೀನ್‌, 28ನೇ ವಾರ್ಡ್‌ ಶ್ವೇತಾ ವೀರೇಶ್‌, 32ನೇ ವಾರ್ಡ್‌ ತಾರಕೇಶ್ವರಿ, 33ನೇ ವಾರ್ಡ್‌ ಶ್ರೀದೇವಿ ಚಕ್ರವರ್ತಿ ಬಿಜೆಪಿ ಬೆಂಬಲಿತ ಸದಸ್ಯೆಯರು. ಇವರಲ್ಲಿ ಯಾರು ಅಧ್ಯಕ್ಷೆಯಾಗಲಿದ್ದಾರೆ ಎಂಬ ಕುತೂಹಲ ಬಿಜೆಪಿ ವಲಯದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT