ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಹಾಳು: ಪ್ರಕರಣ ದಾಖಲಿಸಿ 

ಕಂಪೆನಿಯೊಂದರ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ
Last Updated 19 ಡಿಸೆಂಬರ್ 2020, 16:38 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಮೂರು ತಿಂಗಳ ಹಿಂದೆಯಷ್ಟೇ ಸರ್ಕಾರದ ಅನುದಾನದಲ್ಲಿ ನಿರ್ಮಿಸಿದ್ದ ರಸ್ತೆಗಳು ಈಗ ಹಾಳಾಗಿವೆ. ಪುನಃ ರಸ್ತೆ ನಿರ್ಮಾಣಕ್ಕೆ ಕೋಟಿಗಟ್ಟಲೇ ಹಣ ಬೇಕು. ಎಲ್ಲಿಂದ ಹಣ ತರಬೇಕು’ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹರಿಹಾಯ್ದರು.

ಹೆದ್ದಾರಿ ನಿರ್ಮಾಣಕ್ಕೆ ಮಣ್ಣು ಸಾಗಿಸುವ ಮೂಲಕ ರಸ್ತೆ ಹಾಳಾಗಲು ಕಾರಣರಾದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಿಬ್ಬಂದಿಯನ್ನು ಶನಿವಾರ ಇಂಗಳ್‌ದಾಳ್ ರಸ್ತೆ ಮಾರ್ಗದ ಬಳಿ ತೀವ್ರ ತರಾಟೆ ತೆಗೆದುಕೊಂಡರು.

‘ಕಂಪನಿಯೊಂದರಿಂದ ರಾಷ್ಟ್ರೀಯ ಹೆದ್ದಾರಿ 4ರ ರಸ್ತೆ ಮಾರ್ಗದಲ್ಲಿ ಕಾಮಗಾರಿ ನಡೆಯುತ್ತಿದೆ. ಇದಕ್ಕೆ ಅಗತ್ಯವಿರುವ ಮಣ್ಣನ್ನು ಅಮೃತ್ ಆಯುರ್ವೇದಿಕ್ ಕಾಲೇಜು ಸಮೀಪದ ಟೀಚರ‍್ಸ್ ಕಾಲೊನಿ ಹಿಂಬದಿಯ ಗುಡ್ಡ ಹಾಗೂ ಇಂಗಳ್‌ದಾಳ್ ಲಂಬಾಣಿಹಟ್ಟಿಯಿಂದ ಸಾಗಿಸಲಾಗುತ್ತಿದೆ. ಅಗತ್ಯಕ್ಕಿಂತ ಹೆಚ್ಚು ತೂಕದ ಮಣ್ಣನ್ನು ಟ್ರಕ್‌ಗಳಲ್ಲಿ ತುಂಬಿ ಸಾಗಿಸಲಾಗುತ್ತಿದೆ. ಇದರಿಂದಾಗಿ ಇಂಗಳದಾಳ್ ಮಾರ್ಗದ ರಸ್ತೆ ಬಹುತೇಕ ಹಾಳಾಗಿದೆ’ ಎಂದು ಶಾಸಕರು ಕಿಡಿಕಾರಿದರು.

‘ಇಂಗಳದಾಳ್ ಗ್ರಾಮ, ಲಂಬಾಣಿಹಟ್ಟಿ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಬಹುತೇಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರೇ ವಾಸಿಸುತ್ತಿದ್ದಾರೆ. ಎಂಟತ್ತು ಹಳ್ಳಿಗಳ ಜನರು ಸಂಚರಿಸಲು ಉತ್ತಮ ರಸ್ತೆ ನಿರ್ಮಾಣ ಮಾಡಲಾಗಿತ್ತು. ಈಗ ಇಲ್ಲಿನ ರಸ್ತೆಗಳು ಹಾಳಾದ ಪರಿಣಾಮ ₹ 6 ಕೋಟಿ ಸರ್ಕಾರಕ್ಕೆ ನಷ್ಟವಾಗಿದೆ. ಮಣ್ಣು ಸಾಗಾಟ ಮಾಡಿ ಕಾಮಗಾರಿ ನಡೆಸಲು ನನ್ನ ಅಭ್ಯಂತರವಿಲ್ಲ. ಆದರೆ, ಅಗತ್ಯಕ್ಕಿಂತ ಹೆಚ್ಚು ತೂಕದ ಮಣ್ಣು ಸಾಗಿಸಿ ರಸ್ತೆಗಳನ್ನು ಹಾಳು ಮಾಡುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ಈ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ನಿತ್ಯ 50ರಿಂದ 60 ಟನ್ ಮಣ್ಣಿನೊಂದಿಗೆ ಲಾರಿಗಳು ಸಂಚರಿಸಿದ ಪರಿಣಾಮದಿಂದಾಗಿಯೇ ರಸ್ತೆ ಹಾಳಾಗಿದೆ. ಇದಕ್ಕೆ ಅನುಮತಿ ಕೊಟ್ಟವರು ಯಾರು ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

‘ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ನಾವು ಅನುಮತಿ ನೀಡಿಲ್ಲ’ ಎಂದು ಸಮಜಾಯಿಷಿ ನೀಡಿದರು.

‘ನಾವು ಅನುಮತಿ ಕೊಟ್ಟಿಲ್ಲ’ ಎಂದು ತಹಶೀಲ್ದಾರ್ ವೆಂಕಟೇಶಯ್ಯ ತಿಳಿಸಿದರು.

ಯಾವುದೇ ಅನುಮತಿ ಪಡೆಯದೆ ಮಣ್ಣು ಸಾಗಾಟ ಮಾಡಿ ರಸ್ತೆ ಹಾಳು ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿ ಎಂದು ತಿಪ್ಪಾರೆಡ್ಡಿ ಪೊಲೀಸರಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT