ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ ₹70,000 ಕೋಟಿ ಖರ್ಚು

ಬೂತ್‌ ಏಜೆಂಟರ ತರಬೇತಿ ಕಾರ್ಯಾಗಾರದಲ್ಲಿ ಶಾಸಕ ಎನ್.ವೈ. ಗೋಪಾಲಕೃಷ್ಣ
Published 30 ಮಾರ್ಚ್ 2024, 14:28 IST
Last Updated 30 ಮಾರ್ಚ್ 2024, 14:28 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಸರ್ವರಿಗೂ ಸಾಮಾಜಿಕ ನ್ಯಾಯ ಸಿಗಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ ₹70,000 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಹೇಳಿದರು.

ಬ್ಲಾಕ್ ಕಾಂಗ್ರೆಸ್‌ ವತಿಯಿಂದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೂತ್‌ ಏಜೆಂಟರಿಗೆ ಶನಿವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪಕ್ಷ ಸಕ್ರಿಯವಾಗಿ ಬೆಳೆಯಲು ಬೂತ್‌ ಕಾರ್ಯಕರ್ತರ ಶ್ರಮ ಅಗತ್ಯ. ಚುನಾವಣೆ ಸೋಲು, ಗೆಲುವು, ಲೀಡ್‌ ಪಡೆಯವುದು ಬೂತ್‌ ಸಮಿತಿಯನ್ನು ಆವಲಂಬಿಸಿರುತ್ತದೆ. ಲೋಕಸಭಾ ಚುನಾವಣೆಯಲ್ಲೂ ಬೂತ್‌ ಸಮಿತಿಗಳು ಸಶಕ್ತಿಯಿಂದ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

‘ಗ್ಯಾರಂಟಿ ಯೋಜನೆಗಳು ಸೇರಿದಂತೆ ಕಾಂಗ್ರೆಸ್‌ ಪಕ್ಷ ಜಾರಿಗೆ ತಂದಿರುವ ಜನಪರ ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ನಾನು ಹೆಚ್ಚು, ನೀನು ಕಡಿಮೆ ಎಂಬ ಮನೋಭಾವವನ್ನು ಮುಖಂಡರು ಕೈಬಿಟ್ಟು ಎಲ್ಲರೂ ಒಂದೇ ಎಂಬುದಾಗಿ ಸಂಘಟಿತವಾಗಿ ಚುನಾವಣೆಯಲ್ಲಿ ಕೆಲಸ ಮಾಡಬೇಕು. ಕಾಂಗ್ರೆಸ್‌ 120 ವರ್ಷಗಳ ಇತಿಹಾಸ ಹೊಂದಿದ್ದು, ಕಾರ್ಯಕರ್ತರು ಅಂಜುವ ಅಗತ್ಯವಿಲ್ಲ’ ಎಂದರು.

ಬಿಎಲ್‌ಎ ಉಸ್ತುವಾರಿಗಳಾದ ರಮೇಶ್‌, ಅಬ್ದುಲ್‌ ಮುನೀರ್‌, ಮೋಹನ್‌, ತರಬೇತುದಾರರಾದ ಸುರೇಖಾ ಪೂಜಾರ್‌ ಮಾತನಾಡಿದರು.

ಬ್ಲಾಕ್‌ ಕಾಂಗ್ರೆಸ್‌ ಮುಖಂಡರಾದ ಜಿ. ಬಾಲರಾಜ್‌, ವಿ. ಮಾರನಾಯಕ, ಪಟೇಲ್‌ ಜಿ. ಪಾಪನಾಯಕ, ಅಬ್ದುಲ್‌ ಸುಬಾನ್ ಸಾಬ್‌, ಜಿ. ಪ್ರಕಾಶ್‌, ಎಂ. ಅಬ್ದುಲ್ಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಗೊಂದಲ ನಿರ್ಮಾಣ...

ಸಭೆಗೆ ಆರಂಭಕ್ಕೂ ಮುನ್ನ ಸಭೆ ಬಗ್ಗೆ ಬ್ಲಾಕ್‌ ಕಾಂಗ್ರೆಸ್‌ ಸರಿಯಾಗಿ ಮಾಹಿತಿ ನೀಡಿಲ್ಲ. ಕೆಲವರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲ ಎಂದು ಆರೋಪಿಸಿ ಹಲವು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 10 ವರ್ಷಗಳಿಂದ ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟನೆ ಮಾಡಿಕೊಂಡು ಬಂದಿರುವ ರಾಜ್ಯ ದ್ರಾಕ್ಷಾರಸ ಹಾಗೂ ವೈನ್‌ ಬೋರ್ಡ್‌ ಮಂಡಳಿ ಅಧ್ಯಕ್ಷ ಬಿ. ಯೋಗೇಶ್‌ ಬಾಬು ಅವರನ್ನು ಆಹ್ವಾನಿಸಿಲ್ಲ ಎಂದು ಬ್ಲಾಕ್‌ ಅಧ್ಯಕ್ಷ ಕಲೀಂವುಲ್ಲಾ ಅವರನ್ನು ಬಾಬು ಬೆಂಬಲಿಗರು ತರಾಟೆಗೆ ತೆಗೆದುಕೊಂಡರು. ಕೆಲಕಾಲ ಗೊಂದಲ ನಿರ್ಮಾಣವಾಗಿತ್ತು. ಶಾಸಕ ಎನ್‌ವೈಜಿ ಆಗಮಿಸಿ ‘ವೈಯಕ್ತಿಕ ಆಕಾಂಕ್ಷೆಗಳನ್ನು ಬದಿಗೊತ್ತಿ ಕೆಲಸ ಮಾಡಿ ಕಾಂಗ್ರೆಸ್‌ ಗೆಲ್ಲಿಸಬೇಕಿದೆ. ಇಲ್ಲಿ ಎಲ್ಲರೂ ಸಮಾನ ಎಂದು ಹೇಳಿ’ ಪರಿಸ್ಥಿತಿ ತಿಳಿಗೊಳಿಸಿದರು. ನಂತರ ಸಭೆ ಆರಂಭವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT