ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದಾಗುವ ನೀತಿಯಿಂದ ಪರಿಶಿಷ್ಟರ ಕಲ್ಯಾಣ: ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ

ಎಸ್‌ಸಿ, ಎಸ್‌ಟಿಗಳು ಏಕೆ ಒಂದಾಗಬೇಕು ವಿಚಾರ ಸಂಕಿರಣದಲ್ಲಿ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ
Last Updated 26 ಸೆಪ್ಟೆಂಬರ್ 2021, 17:26 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಒಡೆದ ಮನಸ್ಸುಗಳಿಗೆ ಪರಿವರ್ತನೆ ಅಗತ್ಯವಿದೆ. ಹೀಗಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಒಂದಾಗುವ ನೀತಿ ಅನುಸರಿಸಿದರೆ ಪರಿಶಿಷ್ಟರ ಕಲ್ಯಾಣ ಸಾಧ್ಯ’ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಲಹೆ ನೀಡಿದರು.

ಇಲ್ಲಿಯ ಚಳ್ಳಕೆರೆ ರಸ್ತೆಯ ಎಸ್‌ಎಸ್‌ಕೆಎಸ್‌ ಭವನದಲ್ಲಿ ಭಾನುವಾರ ಸ್ವಾಭಿಮಾನಿ ಎಸ್‌ಸಿ, ಎಸ್‌ಟಿ ಸಂಘಟನೆಗಳ ಒಕ್ಕೂಟದಿಂದ ಆಯೋಜಿಸಿದ್ದ ಎಸ್‌ಸಿ, ಎಸ್‌ಟಿಗಳು ಏಕೆ ಒಂದಾಗಬೇಕು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಈ ಪುಣ್ಯ ಭೂಮಿಯನ್ನು ಹಿಂದೆಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಆಳ್ವಿಕೆ ನಡೆಸಿದ್ದಾರೆ. ಕಾಲಾಂತರದಲ್ಲಿ ಅಧಿಕಾರ, ಅಂತಸ್ತು, ಭೂಮಿ ಕಳೆದುಕೊಂಡಿದ್ದಾರೆ. ಈ ವಿಚಾರ ನಮ್ಮೆಲ್ಲರನ್ನು ಎಚ್ಚರಿಸುವುದರ ಜತೆಗೆ ಜಾಗೃತಿಯ ಅರಿವನ್ನು ಮೂಡಿಸುತ್ತಿದೆ.ಆದ್ದರಿಂದ ಏನಾದರೂ ಮಹತ್ತರ ಕಾರ್ಯ ಆಗಬೇಕಾದರೆ ಒಗ್ಗಟು ಅಗತ್ಯ. ಒಗ್ಗಟ್ಟಿನ ಮಂತ್ರದಿಂದಲೇ ಸ್ವಾಭಿಮಾನ ಪರಿಶಿಷ್ಟರ ಕಲ್ಯಾಣಕ್ಕೆ ಮುಂದಾಗೋಣ’ ಎಂದರು.

‘ಒಡೆದಾಳುವ ನೀತಿಗೆ ಒಳಗಾಗಿರುವ ಸಮುದಾಯಗಳು ಒಂದಾಗಲೇಬೇಕಾದ ಅನಿವಾರ್ಯ ಕಾಲಘಟ್ಟದಲ್ಲಿ ಇದ್ದೇವೆ. ಪರಿಶಿಷ್ಟ ಜಾತಿಯಲ್ಲಿ 101 ಉಪಜಾತಿಗಳು ಹಾಗೂ ಪರಿಶಿಷ್ಟ ಪಂಗಡದಲ್ಲಿ 50ಕ್ಕಿಂತ ಹೆಚ್ಚು ಉಪಜಾತಿಗಳಿದ್ದು, ಪ್ರತ್ಯೇಕ, ಆಂತರಿಕ ಅಂಜೆಡಾಗಳಿವೆ. ಅದನ್ನು ಬದಿಗಿರಿಸಿ, 150ಕ್ಕೂ ಹೆಚ್ಚು ಜಾತಿಗಳು ಒಗ್ಗೂಡುವ ಅಂಜೆಡಾ ಮುಂದಿಟ್ಟುಕೊಂಡು ಬಲಿಷ್ಠರಾಗಬೇಕಿದೆ’ ಎಂದು ತಿಳಿಸಿದರು.

ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ‘ಪರಿಶಿಷ್ಟ ಸಮುದಾಯಗಳ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿರಲಿ. ಒಗ್ಗೂಡುವ ವಿಚಾರ ಬಂದಾಗ ಯಾವ ಕಾರಣಕ್ಕೂ ಹಿನ್ನಡೆ ಆಗಬಾರದು. ಪರಿಶಿಷ್ಟರ ಕಲ್ಯಾಣ ಮುಖ್ಯವೇ ಹೊರತು ಇನ್ಯಾವುದು ಪ್ರಮುಖ ಆಗಬಾರದು’ ಎಂದರು.

ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ, ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ, ಮೇದಾರ ಗುರುಪೀಠದ ಇಮ್ಮಡಿ ಬಸವ ಕೇತೇಶ್ವರ ಸ್ವಾಮೀಜಿ, ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಇದ್ದರು.

‘ಅಸ್ತಿತ್ವ ರಕ್ಷಣೆಯ ಗುರಿ’

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಲು ದಿನದಿಂದ ದಿನಕ್ಕೆ ಅನೇಕ ಜಾತಿಗಳು ಪ್ರಯತ್ನ ನಡೆಸುತ್ತಿವೆ. ಈಗಿರುವ ಪಟ್ಟಿಗೆ ಮತ್ತಷ್ಟು ಜಾತಿಗಳನ್ನು ಸೇರಿಸಲು ಯಾವ ಕಾರಣಕ್ಕೂ ಅವಕಾಶ ನೀಡಬಾರದು’ ಎಂದು ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಡಾ.ಎಂ. ವೆಂಕಟಸ್ವಾಮಿ ಸಲಹೆ ನೀಡಿದರು.

‘ಕಾಂತರಾಜು ಆಯೋಗದ ವರದಿ ಜಾರಿಗೊಳಿಸಲು ಒತ್ತಾಯಿಸುವ ಮೂಲಕ ಎಸ್‌ಸಿ, ಎಸ್‌ಟಿ ಸಮುದಾಯಗಳು ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಯ ಮಾಹಿತಿ ಆಧರಿಸಿ ನ್ಯಾಯಯುತ ಬೇಡಿಕೆಗಳನ್ನು ಪಡೆಯಲು ಮುಂದಾಗಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT