ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಕೈಯಲ್ಲಿ ಸುಭದ್ರ ಸರ್ಕಾರ: ಎಂ.ಮನಗೂಳಿ

Last Updated 26 ಜನವರಿ 2022, 3:31 IST
ಅಕ್ಷರ ಗಾತ್ರ

ಚಿತ್ರದುರ್ಗ: ಯಾವುದೇ ಜಾತಿ, ಧರ್ಮವನ್ನು ಪರಿಗಣಿಸದೇ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಿ ಉತ್ತಮವಾದ ಸರ್ಕಾರ ರಚನೆ ಮಾಡಬೇಕು. ಸುಭದ್ರ ಸರ್ಕಾರ ರಚಿಸುವುದು ಮತದಾರರ ಕೈಯಲ್ಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ನ್ಯಾಯಾಧೀಶರಾದ ಎಂ. ಮನಗೂಳಿ ಪ್ರೇಮಾವತಿ ಮತದಾರರಿಗೆ ಕಿವಿಮಾತು ಹೇಳಿದರು.

ಇಲ್ಲಿನ ತರಾಸು ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ರಾಷ್ಟ್ರೀಯ ಮತದಾರರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಜಾಪ್ರಭುತ್ವದದ ಸುಭದ್ರತೆಗೆ ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಯಾವುದೇ ಆಸೆ-ಆಮಿಷಕ್ಕೆ ಒಳಗಾಗದೇ ಯೋಗ್ಯವಾದ ವ್ಯಕ್ತಿಗೆ ಮತ ನೀಡುವ ಮೂಲಕ ಸುಭದ್ರ ಸರ್ಕಾರ ರಚಿಸಿಕೊಳ್ಳಬೇಕು’ ಎಂದರು.

‘18 ವರ್ಷ ಪೂರೈಸಿದ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಪ್ರತಿಯೊಂದು ಚುನಾವಣೆಯಲ್ಲಿಯೂ ಯೋಗ್ಯ ವ್ಯಕ್ತಿಗೆ ಮತದಾನ ಮಾಡಬೇಕು. ಉತ್ತಮ ಸಮಾಜ ಹಾಗೂ ಉತ್ತಮ ಸರ್ಕಾರ ನಿರ್ಮಿಸುವಲ್ಲಿ ಮತದಾನ ಬಹುಮುಖ್ಯ ಪಾತ್ರ ವಹಿಸುತ್ತದೆ’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾತನಾಡಿ, ‘ಮತದಾರರು ತಮ್ಮ ಮತವನ್ನು ಯಾವುದೇ ಆಮಿಷಗಳಿಗೆ ಬಲಿಕೊಡದೇ ದೇಶದ ಅಭಿವೃದ್ಧಿಗೆ ಉತ್ತಮ ನಾಯಕರ ಆಯ್ಕೆಗೆ ತಪ್ಪದೇ ಮತ ಚಲಾಯಿಸಬೇಕು. ವರ್ಷದಲ್ಲಿ ನಾಲ್ಕು ಬಾರಿ ಮತದಾರರ ನೋಂದಣಿ ಕಾರ್ಯ ಮಾಡಲಾಗುತ್ತದೆ. 18 ವರ್ಷ ಪೂರೈಸಿದ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ ಮತ ಚಲಾಯಿಸಬೇಕು’ ಎಂದರು.

‘ಯಾವುದೇ ಮತದಾರ ಮತದಾನ ದಿಂದ ದೂರ ಉಳಿಯಬಾರದು. ಮತದಾನ ಎಂಬುದು ಬಹಳ ಮುಖ್ಯವಾದುದು. ಸದೃಢ ಪ್ರಜಾಪ್ರಭುತ್ವ ವ್ಯವಸ್ಥೆ ನಿರ್ಮಾಣಕ್ಕೆ ಯೋಗ್ಯವಾದ ವ್ಯಕ್ತಿಗೆ ಮತ ಚಲಾಯಿಸುವುದರ ಮೂಲಕ ಸರ್ಕಾರವನ್ನು ಆಯ್ಕೆ ಮಾಡಬೇಕು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ 13,83,180 ಮತದಾರರಿದ್ದು, ಇದರಲ್ಲಿ 21,049 ಯುವ ಮತದಾರರಿದ್ದಾರೆ. 18 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮತದಾನದ ಗುರುತಿನ ಚೀಟಿ ಮಾಡಿಸಿಕೊಳ್ಳಬೇಕು ಜೊತೆಗೆ ಮತ ಚಲಾಯಿಸುವ ವಿಧಾನವನ್ನು ತಿಳಿದುಕೊಂಡು ಮತ ಚಲಾಯಿಸಬೇಕು’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಇ. ಬಾಲಕೃಷ್ಣ ಮಾತನಾಡಿ, ‘ಯಾವುದೇ ಜಾತಿ-ಧರ್ಮಗಳನ್ನು ಲೆಕ್ಕಿಸದೆ ನಿಷ್ಠಾವಂತರಿಗೆ ಮತದಾನ ಮಾಡುವ ಮೂಲಕ ಉತ್ತಮ ಸರ್ಕಾರ ರಚಿಸುವ ಕರ್ತವ್ಯ ನಾಗರಿಕರದ್ದಾಗಿದೆ. ಮತದಾನದ ಹಕ್ಕನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಬೇಕು’ ಎಂದು ತಿಳಿಸಿದರು.

ಸಾಂಕೇತಿಕವಾಗಿ ಹೊಸ ಮತದಾರರಿಗೆ ಭಾವಚಿತ್ರವಿರುವ ಗುರುತಿನ ಚೀಟಿಗಳ ವಿತರಿಸಲಾಯಿತು. ಉತ್ತಮವಾಗಿ ಕಾರ್ಯನಿರ್ವಹಿಸಿದ ಬಿಎಲ್‍ಒ ಅಜಯ್‍ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ. ರಂಗಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಆರ್. ಚಂದ್ರಯ್ಯ, ತಹಶೀಲ್ದಾರ್ ಸತ್ಯನಾರಾಯಣ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT