ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೋವಿಂದ ಕಾರಜೋಳರಿಗೆ ಸಚಿವ ಸ್ಥಾನ ನೀಡಲು ಷಡಕ್ಷರಮುನಿ ಶ್ರೀ ಆಗ್ರಹ

Published 11 ಜೂನ್ 2024, 14:12 IST
Last Updated 11 ಜೂನ್ 2024, 14:12 IST
ಅಕ್ಷರ ಗಾತ್ರ

ಹಿರಿಯೂರು: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ ಗೋವಿಂದ ಕಾರಜೋಳ ಅವರಿಗೆ ಕೇಂದ್ರ ಸಚಿವ ಸ್ಥಾನ ನೀಡಬೇಕು ಎಂದು ಆದಿಜಾಂಬವ ಮಠದ ಷಡಕ್ಷರಮುನಿ ಸ್ವಾಮೀಜಿ ಆಗ್ರಹಿಸಿದ್ದಾರೆ.

‘ಎಡಗೈ ಮಾದಿಗ ಸಮುದಾಯಕ್ಕೆ ಸೇರಿರುವ ಕಾರಜೋಳ ಹಾಗೂ ರಮೇಶ್ ಜಿಗಜಿಣಗಿ ಸಂಸದರಾಗಿ ಆಯ್ಕೆಯಾಗಿರುವುದು ಸಂತಸ. ಕೇಂದ್ರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸಚಿವ ಸಂಪುಟದಲ್ಲಿ ಎಡಗೈ ಮಾದಿಗ ಸಮುದಾಯಕ್ಕೆ ಪ್ರಾತಿನಿಧ್ಯ ನೀಡದಿರುವುದು ಬೇಸರದ ಸಂಗತಿ. ರಾಜಕೀಯ ಮತ್ತು ಆರ್ಥಿಕವಾಗಿ ಕುಗ್ಗಿರುವ ಸಮುದಾಯವನ್ನು ಗುರುತಿಸುವಲ್ಲಿ ಕೇಂದ್ರ ಸರ್ಕಾರ ಎಡವಿದೆ. ಮಾದಿಗ ಸಮುದಾಯದಿಂದ ಆಯ್ಕೆಯಾಗಿರುವ ಇಬ್ಬರೂ ಸಜ್ಜನ ರಾಜಕಾರಣಿಗಳು. ಮತ ಹಾಕಿಸಿಕೊಳ್ಳಲು ಮಾತ್ರ ನಮ್ಮ ಸಮುದಾಯವನ್ನು ಬಳಸಿಕೊಂಡು ನಂತರ ದೂರವಿಡುವುದು ಸತ್ಸಂಪ್ರದಾಯವಲ್ಲ’ ಎಂದು ಸ್ವಾಮೀಜಿ ಹೇಳಿದ್ದಾರೆ. 

‘ಮಾದಿಗ ಸಮುದಾಯಕ್ಕೆ ಸಂಪುಟದಲ್ಲಿ ಸಚಿವ ಸ್ಥಾನ ಕಲ್ಪಿಸುವ ಮೂಲಕ ರಾಜಕೀಯ ಶಕ್ತಿ ಕೊಡಿ. ಸಚಿವ ಸ್ಥಾನದಿಂದ ಮಾದಿಗರನ್ನು ಹೊರಗಿಟ್ಟಿರುವ ಕಾರಣ ತಪ್ಪು ಸಂದೇಶ ರವಾನೆಯಾಗಲಿದೆ. ರಾಜ್ಯದಲ್ಲಿ ಈವರೆಗೂ ದಲಿತ ಸಮುದಾಯದ ಯಾರೊಬ್ಬರೂ ಮುಖ್ಯಮಂತ್ರಿಯಾಗಲು ಬಿಟ್ಟಿಲ್ಲ. ರಾಷ್ಟ್ರೀಯ ಪಕ್ಷಗಳು ಅಧ್ಯಕ್ಷ ಸ್ಥಾನ ನೀಡಿಲ್ಲ. ಈ ಅಪವಾದವನ್ನು ಸರಿಪಡಿಸಲು ಗೋವಿಂದ ಕಾರಜೋಳ ಅವರಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಮಾದಿಗ ಜನಾಂಗದವರು ರಾಜಕೀಯ ನಿರ್ಧಾರ ಕೈಗೊಂಡು ಹೋರಾಟದ ಮಾರ್ಗ ಹಿಡಿಯಬೇಕಾಗುತ್ತದೆ’ ಎಂದು ಷಡಕ್ಷರಮುನಿ ಸ್ವಾಮೀಜಿ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT