ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಉತ್ಪನ್ನ ಸಂಸ್ಕರಿಸಿ ಮೌಲ್ಯವರ್ಧಿಸಿ: ಬಿ.ಸಿ.ಪಾಟೀಲ

ರೈತರಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ ಸಲಹೆ
Last Updated 24 ಅಕ್ಟೋಬರ್ 2020, 13:11 IST
ಅಕ್ಷರ ಗಾತ್ರ

ಚಿತ್ರದುರ್ಗ: ಹಣ್ಣು, ತರಕಾರಿ ಸೇರಿದಂತೆ ಕೃಷಿ ಉತ್ಪನ್ನಗಳನ್ನು ಸಂಸ್ಕರಿಸಿ ಮೌಲ್ಯವರ್ಧನೆ ಮಾಡಿದರೆ ವೈಜ್ಞಾನಿಕ ಬೆಲೆ ಪಡೆಯಲು ಸಾಧ್ಯವಿದೆ. ರೈತರು ಹಳೆ ಶೈಲಿಯ ಕೃಷಿ ವಿಧಾನದಿಂದ ಹೊರಬರುವ ಅಗತ್ಯವಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಅಭಿಪ್ರಾಯಪಟ್ಟರು.

ಮುರುಘಾ ಮಠದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಕೃಷಿ ಹಾಗೂ ಕೈಗಾರಿಕೆ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕೃಷಿ ಉತ್ಪನ್ನ ಸಂಸ್ಕರಣೆಗೆ ಸರ್ಕಾರ ಉತ್ತೇಜನ ನೀಡಲು ಮುಂದಾಗಿದೆ. ತಾಲ್ಲೂಕಿಗೆ ಕನಿಷ್ಠ ಐದು ಘಟಕ ಸ್ಥಾಪಿಸಲು ಆಲೋಚಿಸುತ್ತಿದೆ. ಕೋಲ್ಡ್‌ ಸ್ಟೋರೇಜ್‌ಗಳಿಗೆ ಒತ್ತು ನೀಡಲು ನಿರ್ಧರಿಸಿದೆ. ಆಹಾರ ಸಂಸ್ಕರಣೆಗೆ ರೈತರು ಒಲವು ತೋರಿದರೆ ಕೃಷಿ ಆದಾಯವನ್ನು ವೈಜ್ಞಾನಿಕವಾಗಿ ದ್ವಿಗುಣ ಮಾಡಿಕೊಳ್ಳಲು ಸಾಧ್ಯವಿದೆ’ ಎಂದು ಪ್ರತಿಪಾದಿಸಿದರು.

‘ನೀರಿನ ಅಭಾವ ಇರುವ ಕೋಲಾರದ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ವಿರಳ. ಆದರೆ, ಮಂಡ್ಯದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬಹು ಬೆಳೆ ಪದ್ಧತಿ ಅಳವಡಿಸಿಕೊಂಡ ಕೋಲಾರದ ರೈತರಿಗೆ ಲಾಭ ಸಿಗುತ್ತದೆ. ಕಬ್ಬು, ಭತ್ತ ನಂಬಿಕೊಂಡ ಮಂಡ್ಯ ರೈತರು ಬೆಲೆ ಕುಸಿದಾಗ ಭ್ರಮನಿರಸಗೊಳ್ಳುತ್ತಿದ್ದಾರೆ’ ಎಂದು ವಿಶ್ಲೇಷಣೆ ಮಾಡಿದರು.

‘ಬಿತ್ತನೆಗೂ ಮೊದಲು ಮಣ್ಣು ಪರೀಕ್ಷೆ ಮಾಡಿಸಿಕೊಳ್ಳಿ. ಯೂರಿಯಾ ಹೆಚ್ಚು ಹಾಕುವುದರಿಂದ ಭೂಮಿ ಬರಡಾಗುತ್ತದೆ. ರೈತರಿಗೆ ನೆರವಾಗುವ ಉದ್ದೇಶದಿಂದ ಮಣ್ಣು ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಲಾಗಿದೆ. ರೈತರ ಸಮಗ್ರ ಮಾಹಿತಿ ನೀಡುವ ‘ಸ್ವಾಭಿಮಾನಿ ರೈತ’ ಕಾರ್ಡ್‌ ರೂಪಿಸುವ ಚಿಂತನೆ ನಡೆಯುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ಬರಲಿದೆ’ ಎಂದು ಹೇಳಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌, ‘ಕೃಷಿ ಕ್ಷೇತ್ರ ಬಿಕ್ಕಟ್ಟಿನಲ್ಲಿದೆ. ರೈತರು ಕೃಷಿ ಬಿಟ್ಟು ನಗರಕ್ಕೆ ವಲಸೆ ಹೋಗುವ ಅಲೋಚನೆಯಲ್ಲಿದ್ದಾರೆ. ದೇಶಕ್ಕೆ ಸಾಕಾಗುವಷ್ಟು ಆಹಾರ ಧಾನ್ಯ ಉತ್ಪಾದನೆ ಆಗುತ್ತಿದೆ. ಆದರೂ, ರೈತರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಹಸಿರು ಕ್ರಾಂತಿಯ ನಂತರ ರೈತರನ್ನು ನಿರ್ಲಕ್ಷ್ಯ ಮಾಡಲಾಗಿದೆ’ ಎಂದು ಹೇಳಿದರು.

‘ಕೇಂದ್ರ ಸರ್ಕಾರ ಅಗತ್ಯ ವಸ್ತು ಕಾಯ್ದೆ ತಿದ್ದುಪಡಿ ಮಾಡಿದೆ. ಇದರಿಂದ ಎಷ್ಟು ಧಾನ್ಯವನ್ನಾದರೂ ಸಂಗ್ರಹಿಸಿ ಇಟ್ಟುಕೊಳ್ಳುವ ಅವಕಾಶ ಉದ್ಯಮಿಗಳಿಗೆ ಸಿಕ್ಕಿದೆ. ಇದು ಈರುಳ್ಳಿ ಮೇಲೆ ಪರಿಣಾಮ ಬೀರಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ. ರೈತರು ಬೆಳೆದ ಬೆಳೆಗೆ ನ್ಯಾಯಯುತ ಹಾಗೂ ಲಾಭದಾಯಕ ಬೆಲೆ ಸಿಗುವಂತಹ ವ್ಯವಸ್ಥೆ ರೂಪುಗೊಳ್ಳಬೇಕು’ ಎಂದು ಅಭಿಪ್ರಾಯಪಟ್ಟರು.

‘ಬಯಲುಸೀಮೆ ನೀರಾವರಿ ಸುಲಭ’

ಗೋಧಾವರಿ ನದಿಯಲ್ಲಿ ಕರ್ನಾಟಕಕ್ಕೆ ನಿಗದಿಯಾಗಿರುವ 24 ಟಿಎಂಸಿ ನೀರನ್ನು ಈವರೆಗೆ ಬಳಸಿಕೊಂಡಿಲ್ಲ. ಆಂಧ್ರಪ್ರದೇಶಕ್ಕೆ ಹರಿಯುವ ಕೃಷ್ಣ ನದಿ ನೀರನ್ನು ಕರ್ನಾಟಕ ಉಳಿಸಿಕೊಳ್ಳಲು ಅವಕಾಶವಿದೆ. ಗೋಧಾವರಿಯನ್ನು ಸಂಪೂರ್ಣ ಆಂಧ್ರಪ್ರದೇಶಕ್ಕೆ ನೀಡಿದರೆ ಬಯಲುಸೀಮೆ ಸುಲಭವಾಗಿ ನೀರಾವರಿ ಸೌಲಭ್ಯ ಹೊಂದುತ್ತದೆ ಎಂದು ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಹೇಳಿದರು.

‘ಕೃಷ್ಣ ಹಾಗೂ ತುಂಗ–ಭದ್ರಾ ನದಿ ನೀರಿನಿಂದ ಇಡೀ ಆಂಧ್ರಪ್ರದೇಶ ನೀರಾವರಿ ಸೌಲಭ್ಯ ಹೊಂದಿದೆ. ಕೃಷ್ಣ ನದಿ ನೀರು ಗೌರಿಬಿದನೂರು ತಾಲ್ಲೂಕಿನ ಗಡಿಯಲ್ಲಿ ಹರಿಯುತ್ತಿದೆ. ಪಶ್ಚಿಮಘಟ್ಟದಲ್ಲಿ ಸೃಷ್ಟಿಯಾಗುವ ನೀರನ್ನು ಸಮರ್ಥವಾಗಿ ಬಳಕೆ ಮಾಡುವ ಇಚ್ಛಾಶಕ್ತಿಯನ್ನು ಸರ್ಕಾರ ತೋರಬೇಕು’ ಎಂದು ಆಗ್ರಹಿಸಿದರು.

ಬೆಂಗಳೂರಿನ ಉದ್ಯಮಿ ಉಲ್ಲಾಸ್ ಕಾಮತ್, ಪ್ರಗತಿಪರ ರೈತ ಹಾಲಿಗೊಂಡನಹಳ್ಳಿಯ ಕೆ.ವಿ.ರುದ್ರಮುನಿಯಪ್ಪ ಅವರನ್ನು ಸನ್ಮಾನಿಸಲಾಯಿತು.

ಇಳಕಲ್‍ನ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ, ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ರೈತ ಮುಖಂಡರಾದ ನುಲೇನುರು ಶಂಕರಪ್ಪ, ಈಚಘಟ್ಟ ಸಿದ್ಧವೀರಪ್ಪ, ಕೆ.ಪಿ.ಭೂತಯ್ಯ, ಹೊರಕೇರಪ್ಪ, ಬಿಜೆಪಿ ಮುಖಂಡ ಕೆ.ಎಸ್‌.ನವೀನ್‍ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT