ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಶಿವಮೂರ್ತಿ ಶರಣರು ಮರಳಿ ಜೈಲಿಗೆ

ಜಾಮೀನು ರದ್ದುಪಡಿಸಿದ್ದ ಸುಪ್ರೀಂ ಕೋರ್ಟ್‌, ಜಿಲ್ಲಾ ನ್ಯಾಯಾಲಯಕ್ಕೆ ಶರಣು
Published 29 ಏಪ್ರಿಲ್ 2024, 13:45 IST
Last Updated 29 ಏಪ್ರಿಲ್ 2024, 13:45 IST
ಅಕ್ಷರ ಗಾತ್ರ

ಚಿತ್ರದುರ್ಗ: ಪೋಕ್ಸೊ ಕಾಯ್ದೆಯಡಿ ದಾಖಲಾದ ಪ್ರಕರಣದ ಆರೋಪಿಯಾಗಿರುವ ಮುರುಘಾ ಮಠದ ಶಿವಮೂರ್ತಿ ಶರಣರು ಸೋಮವಾರ ಮರಳಿ ಜಿಲ್ಲಾ ಕಾರಾಗೃಹ ಸೇರಿದರು. ಸುಪ್ರೀಂ ಕೋರ್ಟ್‌ ಸೂಚನೆಯ ಮೇರೆಗೆ ಜಿಲ್ಲಾ ನ್ಯಾಯಾಲಯಕ್ಕೆ ಶರಣಾದ ಆರೋಪಿಯನ್ನು ನ್ಯಾಯಾಧೀಶರು ಮೇ 27ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

ಶಿವಮೂರ್ತಿ ಶರಣರಿಗೆ ಹೈಕೋರ್ಟ್‌ ನೀಡಿದ್ದ ಷರತ್ತುಬದ್ಧ ಜಾಮೀನು ಪ್ರಶ್ನಿಸಿ ಸಂತ್ರಸ್ತ ಬಾಲಕಿಯ ತಂದೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ದ್ವಿಸದಸ್ಯ ಪೀಠ, ಹೈಕೋರ್ಟ್‌ ಆದೇಶಕ್ಕೆ ನಾಲ್ಕು ತಿಂಗಳ ಕಾಲ ತಡೆ ನೀಡಿತ್ತು. ವಿಚಾರಣಾ ನ್ಯಾಯಾಲಯಕ್ಕೆ ಶರಣಾಗಲು ಒಂದು ವಾರ ಕಾಲಾವಕಾಶ ನೀಡಿ ಏ.23ರಂದು ಆದೇಶಿಸಿತ್ತು.

ದಾವಣಗೆರೆಯ ಶಿವಯೋಗಿ ಮಂದಿರದಲ್ಲಿದ್ದ ಶರಣರು, ಸೋಮವಾರ ವಕೀಲರೊಂದಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ಹಾಜರಾದರು. ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆಗೆ ಆರೋಪಿ ಸ್ವಯಂ ಪ್ರೇರಿತವಾಗಿ ಶರಣಾಗಲು ನ್ಯಾಯಾಲಯಕ್ಕೆ ಬಂದಿರುವ ಸಂಗತಿಯನ್ನು ವಕೀಲರು ನ್ಯಾಯಾಧೀಶರ ಎದುರು ಅರುಹಿದರು. ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶ ಎಸ್‌.ಎನ್‌. ಕಲ್ಕಣಿ, ಆರೋಪಿ ಹಾಜರಾತಿಗೆ ಸೂಚಿಸಿದರು.

ಶಿವಮೂರ್ತಿ ಶರಣರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ನ್ಯಾಯಾಧೀಶರು, ಮೇ 27ಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸಲು ಸೂಚಿಸಿದರು. ಆರೋಪಿಯನ್ನು ವಶಕ್ಕೆ ಪಡೆದ ತನಿಖಾಧಿಕಾರಿ ಡಿವೈಎಸ್‌ಪಿ ದಿನಕರ್‌ ನೇತೃತ್ವದ ಪೊಲೀಸರ ತಂಡ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿತು. ಬಳಿಕ ಜಿಲ್ಲಾ ಕಾರಾಗೃಹಕ್ಕೆ ಒಪ್ಪಿಸಲಾಯಿತು.

‘ಶರಣರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂಬ ಇಬ್ಬರು ಬಾಲಕಿಯರ ಹೇಳಿಕೆ ಆಧರಿಸಿ ಮೈಸೂರಿನ ನಜರ್‌ಬಾದ್ ಪೊಲೀಸ್‌ ಠಾಣೆಯಲ್ಲಿ 2022ರ ಆ.26ರಂದು ದೂರು ದಾಖಲಾಗಿತ್ತು. 2022ರ ಸೆ.1ರಂದು ಶರಣರನ್ನು ಬಂಧಿಸಿದ್ದ ಪೊಲೀಸರು, ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆ–2012, ಭಾರತೀಯ ದಂಡ ಸಂಹಿತೆ–1860, ಬಾಲ ನ್ಯಾಯ (ಮಕ್ಕಳ ಸಂರಕ್ಷಣೆ ಹಾಗೂ ಆರೈಕೆ) ಕಾಯ್ದೆ–2015ರ ವಿವಿಧ ಕಾಲಂ ಅಡಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಹೈಕೋರ್ಟ್‌ ಏಕಸದಸ್ಯ ಪೀಠ ನ.8ರಂದು ಶರಣರಿಗೆ ಜಾಮೀನು ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT