ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಕೃಷ್ಣನ ಸಂದೇಶ ಮನುಕುಲಕ್ಕೆ ದಾರಿದೀಪ: ಇ. ಬಾಲಕೃಷ್ಣ

ಶ್ರೀಕೃಷ್ಣ ಜಯಂತಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಇ. ಬಾಲಕೃಷ್ಣ ಅಭಿಮತ
Last Updated 20 ಆಗಸ್ಟ್ 2022, 4:50 IST
ಅಕ್ಷರ ಗಾತ್ರ

ಚಿತ್ರದುರ್ಗ: ಭಗವದ್ಗೀತೆಯ ಮೂಲಕ ಶ್ರೀಕೃಷ್ಣ ನೀಡಿದ ಸಂದೇಶ ಹಾಗೂ ಧರ್ಮ ಸ್ಥಾಪನೆ ಕುರಿತು ಮಾಡಿದ ಬೋಧನೆಗಳು ಮಾನವಕುಲಕ್ಕೆ ದಾರಿದೀಪವಾಗಿವೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಅಭಿಪ್ರಾಯಪಟ್ಟರು.

ಇಲ್ಲಿನ ತರಾಸು ರಂಗಮಂದಿರದಲ್ಲಿ ಜಿಲ್ಲಾಡಳಿತ ಶುಕ್ರವಾರ ಏರ್ಪಡಿಸಿದ್ದ ಶ್ರೀಕೃಷ್ಣ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಅಧರ್ಮ ಹೋಗಲಾಡಿಸಲು ಶ್ರೀಕೃಷ್ಣ ಜನ್ಮ ತಾಳಿದ್ದರು. ಆಗಿನ ಸಮಾಜದಲ್ಲಿ ಧರ್ಮ ಸ್ಥಾಪನೆ ಮಾಡಿದರು. ಸತ್ಯ ಮತ್ತು ಧರ್ಮದ ಮಾರ್ಗದಲ್ಲಿ ನಡೆದರೆ ಮಾತ್ರ ಜಯ ಸಾಧ್ಯ ಎಂಬ ತತ್ವವನ್ನು ಶ್ರೀಕೃಷ್ಣ ಸಾರಿದ್ದಾರೆ’ ಎಂದರು.

‘ಗೊಲ್ಲ ಸಮುದಾಯ ಇಂದಿಗೂ ನಾಗರಿಕ ಪ್ರಪಂಚದಿಂದ ದೂರವಿದೆ. ಸಂಘಟನೆಯ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಶಿಕ್ಷಣದಿಂದ ವ್ಯವಸ್ಥೆಯನ್ನು ಸರಿಪಡಿಸಿಕೊಂಡು ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯಬೇಕು’ ಎಂದು ಸಲಹೆ ನೀಡಿದರು.

ಯಾದವ ಸಮಾಜದ ಉಪಾಧ್ಯಕ್ಷ ಬಿ.ಕೃಷ್ಣಪ್ಪ ಮಾತನಾಡಿ, ‘ಶ್ರೀಕೃಷ್ಣ ಗೊಲ್ಲರ ಮನೆಯಲ್ಲಿ ಬೆಳೆದರು ಎಂಬುದಾಗಿ ಪುರಾಣ ಹೇಳುತ್ತದೆ. ಒಂದು ಜಾತಿಗೆ ದೇವರನ್ನು ಸಿಮೀತಗೊಳಿಸಬಾರದು. ಯಾದವ ಸಮುದಾಯದಲ್ಲಿ ಶಿಕ್ಷಣ, ಸಹೋದರತೆ, ಏಕತೆ ಕೊರತೆಯಿದೆ. ಮೂಢನಂಬಿಕೆಗಳಿಂದ ಇತ್ತೀಚೆಗೆ ಜನರು ದೂರವಾಗಿದ್ದಾರೆ. ಸರ್ಕಾರ ಇನ್ನೂ ಹೆಚ್ಚು ಸೌಲಭ್ಯಗಳನ್ನು ಒದಗಿಸಬೇಕು’ ಎಂದರು.

ಸರ್ಕಾರಿ ಕಲಾ ಕಾಲೇಜಿನ ಪ್ರಾಧ್ಯಾಪಕ ಜಿ.ಎನ್. ಯಶೋಧರ, ‘ಗೊಲ್ಲ ಸಮುದಾಯದಲ್ಲಿ ಪ್ರೀತಿ ಮತ್ತು ಮುಗ್ಧತೆ ತುಂಬಿದ ಜನರಿದ್ದಾರೆ. ಗೊಲ್ಲ ಸಮುದಾಯ ರಾಜಕೀಯ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿದೆ. ಜನರು ಒಗ್ಗಟ್ಟಾಗುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಈ ಮೂಲಕ ಅಭಿವೃದ್ಧಿ ಹೊಂದಬೇಕು’ ಎಂದು ಸಲಹೆ ನೀಡಿದರು.

ವಿಧಾನಪರಿಷತ್ ಮಾಜಿ ಸದಸ್ಯೆ ಜಯಮ್ಮ ಬಾಲರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಧನಂಜಯ, ಉಪ ತಹಶೀಲ್ದಾರ್ ಫಾತಿಮಾ, ಯಾದವ ಸಮುದಾಯದ ಟಿ.ತಿಮ್ಮಣ್ಣ, ಟಿ.ಪಿ.ಪ್ರಕಾಶ್, ರೇವಣ್ಣ ಸಿದ್ದಪ್ಪ, ಶಿವಣ್ಣ, ಮೈಲಾರಪ್ಪ, ರಂಗಸ್ವಾಮಿ, ನಿವೃತ್ತ ಪ್ರಾಧ್ಯಾಪಕ ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT