ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಲಿಂಗಯ್ಯ ಜನಮನದ ಕವಿ: ಮಾಜಿ ಸಚಿವ ಎಚ್‌.ಆಂಜನೇಯ ಹೇಳಿಕೆ

Last Updated 14 ಜೂನ್ 2021, 3:58 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಕನ್ನಡ ಸಾರಸ್ವತ ಲೋಕದ ದಿಗ್ಗಜ ಡಾ.ಸಿದ್ಧಲಿಂಗಯ್ಯ ನಾಡಿನ ಖ್ಯಾತ ಕವಿ. ಅವರ ಅಗಲಿಕೆಯಿಂದ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ’ ಎಂದು ಮಾಜಿ ಸಚಿವ ಎಚ್‌. ಆಂಜನೇಯ ಹೇಳಿದರು.

ಇಲ್ಲಿಯ ಐಯುಡಿಪಿ ಬಡಾವಣೆಯಲ್ಲಿನ ಆಸ್ಕರ್ ಶಾಲೆ ಸಭಾಂಗಣದಲ್ಲಿ ಜಯಣ್ಣ ಸ್ಮಾರಕ ಟ್ರಸ್ಟ್‌ನಿಂದ ಭಾನುವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ‘ರಾಷ್ಟ್ರಕವಿಗಳ ಸಾಲಿಗೆ ಸೇರುವಂಥ ಮೇರುಕವಿ ಆಗಿದ್ದರು. ಅವರು ಈಗಲೂ ಜನಮನದ ಕವಿಯಾಗಿಯೇ ಇದ್ದಾರೆ. ದೈಹಿಕವಾಗಿ ಇಲ್ಲದಿರುವ ಕಾರಣ ಅನೇಕರಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ’ ಎಂದು ಅಭಿಪ್ರಾಯಪಟ್ಟರು.

‘ಜನಮುಖಿ ಸಾಹಿತಿಯಾಗಿ, ನೊಂದವರ ದನಿಯಾಗಿದ್ದ ಅವರ ಕ್ರಾಂತಿಕಾರಿ ಗೀತೆಗಳು ಶೋಷಿತರ ಹೃದಯಲ್ಲಿ ವಿದ್ಯುತ್ ಸಂಚಲನ ಮೂಡಿಸುವ ಮೂಲಕ ದಲಿತ ಚಳವಳಿ ಯಶಸ್ವಿಯಾಗಲು ಪ್ರೇರೇಪಿಸುತ್ತಿದ್ದವು. ಹಿಂದಿನ ಸರ್ಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿಯ ಪರ ಕಾನೂನು ರಚಿಸುವಾಗಲೂ ಅವರ ಸಲಹೆ ಪಡೆಯಲಾಗಿತ್ತು. ವಿಧಾನಪರಿಷತ್ ಸದಸ್ಯರಾದರೂ ಪರಿಷತ್‌ ಸಭೆಗೆ ಹೋಗದಂತೆ ಪೊಲೀಸರು ಒಮ್ಮೆ ತಡೆದಿದ್ದರು. ಆಗಲೂ ಮೌನವಾಗಿದ್ದರು. ಸದಸ್ಯರೆಂದು ತಿಳಿದ ನಂತರ ಒಳಗೆ ಬಿಟ್ಟಿದ್ದರು. ಅನೇಕ ನೋವು ಅನುಭವಿಸಿದ್ದರೂ ಯಾರ ಕುರಿತೂ ಹಗುರವಾಗಿ ಮಾತನಾಡದ ಸರಳ, ಸಜ್ಜನಿಕೆಯ ವ್ಯಕ್ತಿತ್ವ ಅವರದ್ದಾಗಿತ್ತು’ ಎಂದು ನೆನಪು ಮಾಡಿಕೊಂಡರು.

ಸಾಹಿತಿ ಪ್ರೊ.ಎಚ್.ಲಿಂಗಪ್ಪ, ‘ಸಿದ್ಧಲಿಂಗಯ್ಯ ಸಾಹಿತ್ಯದ ಮೂಲಕ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ. ಅವರ ವಿಚಾರಗಳ ಬುತ್ತಿಯನ್ನು ನಾಡಿನ ಜನರಿಗೆ ಸಮರ್ಪಿಸಿದ್ದಾರೆ. ಅಂಬೇಡ್ಕರ್ ನಂತರ ಹೆಚ್ಚು ಸಾಹಿತ್ಯ ಓದಿ ತಿಳಿದುಕೊಂಡವರಲ್ಲಿ ಅವರೂ ಒಬ್ಬರಾಗಿದ್ದಾರೆ’ ಎಂದು ಸ್ಮರಿಸಿದರು.

ಡಾ.ಕೆ.ಆರ್.ಜೆ. ರಾಜಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT