ಶನಿವಾರ, ಮೇ 28, 2022
27 °C
ತರಳಬಾಳು ಮಠದ ಪೀಠಾಧ್ಯಕ್ಷ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ರಿಯಲ್‌ ಎಸ್ಟೇಟ್‌ ದಂಧೆ ಕಡಿವಾಣವೇ ಕಂಠಕವಾಯಿತು: ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿರಿಗೆರೆ (ಚಿತ್ರದುರ್ಗ): ರಿಯಲ್‌ ಎಸ್ಟೇಟ್‌ ವ್ಯವಹಾರಗಳಿಗೆ ಧಾರ್ಮಿಕ ಕೇಂದ್ರವನ್ನು ದುರ್ಬಳಕೆ ಮಾಡಿಕೊಳ್ಳುವ ಹುನ್ನಾರಕ್ಕೆ ಕಡಿವಾಣ ಹಾಕಿರುವುದೇ ಕಂಟಕವಾಗಿದೆ ಎಂದು ತರಳಬಾಳು ಮಠದ ಪೀಠಾಧ್ಯಕ್ಷ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಾಧು ಸದ್ಧರ್ಮ ವೀರಶೈವ ಸಂಘ ಸಿರಿಗೆರೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಸ್ವಾಮೀಜಿ, ‘ಬೆಂಗಳೂರಿನ ತರಳಬಾಳು ಕೇಂದ್ರ ರಿಯಲ್‌ ಎಸ್ಟೇಟ್‌ ವ್ಯವಹಾರಕ್ಕೆ ಬಳಕೆ ಆಗುತ್ತಿತ್ತು. ಈ ಬಗ್ಗೆ ಹಲವು ಬಾರಿ ಎಚ್ಚರಿಕೆ ನೀಡಲಾಗಿತ್ತು. ಸುಧಾರಣೆ ಕಾರಣದಾಗ ಕೆಲ ನಿರ್ಬಂಧ ವಿಧಿಸಲಾಯಿತು. ಆಗ ನಮ್ಮ ಹೆಸರು ದುರುಪಯೋಗ ಮಾಡಿಕೊಂಡು ಮಠದ ಬಗ್ಗೆ ಗೊಂದಲ ಸೃಷ್ಟಿಸಲಾಯಿತು’ ಎಂದರು.

‘ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡುವಂತೆ ಯಾರಿಗೂ ಸಲಹೆ ನೀಡಿಲ್ಲ. ಇದಕ್ಕೆ ಮಠದ ಹಣ, ಬಂಡಾವಳ ಕೊಟ್ಟಿಲ್ಲ. ಶಿಷ್ಯರು, ಭಕ್ತರ ಉದ್ಯಮ, ವ್ಯವಹಾರಕ್ಕೆ ಶುಭ ಹಾರೈಸಲಾಗಿದೆ. ಇದಕ್ಕೆ ಅನರ್ಥ ಕಲ್ಪಿಸಿ ಅಪಪ್ರಚಾರ ಮಾಡಲಾಗಿದೆ. ಮಠದಿಂದ ಉಪಕಾರ ಪಡೆದವರು, ಮಠವನ್ನು ತಿಂದು ತೇಗಿದವರೇ ತಿರುಗಿ ಬಿದ್ದಿದ್ದಾರೆ. ಈ ಮಠ ರಾಜಾಶ್ರಯದಲ್ಲಿ ಬೆಳೆದಿಲ್ಲ; ಭಕ್ತರೇ ಕಟ್ಟಿ ಬೆಳೆಸಿದ್ದಾರೆ. ಅಷ್ಟು ಸುಲಭವಾಗಿ ಏನೂ ಮಾಡಲಾಗದು’ ಎಂದು ಎಚ್ಚರಿಕೆ ನೀಡಿದರು.

‘ತಳಬಾಳು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸಿದ್ದಯ್ಯ ಅವರ ಹೆಸರಿನಲ್ಲಿ ಸಿರಿಗೆರೆಯಲ್ಲಿ 55 ಎಕರೆ ಜಮೀನಿತ್ತು. ಇದರಲ್ಲಿ ಒಂದಷ್ಟು ಭೂಮಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಳ್ಳಲಾತು. ಪರಿಹಾರವಾಗಿ ಬಂದ ₹ 36 ಲಕ್ಷವನ್ನು ಈವರೆಗೆ ಮಠಕ್ಕೆ ನೀಡಿಲ್ಲ. ಮಠದ ಆಸ್ತಿಯನ್ನು ತಮ್ಮ ಸ್ವಾಧೀನಕ್ಕೆ ಮಾಡಿಕೊಳ್ಳಲು ಪ್ರಯತ್ನಿಸಿದರು’ ಎಂದು ಆರೋಪಿಸಿದರು.

ಉತ್ತರಾಧಿಕಾರಿ ನೇಮಕಕ್ಕೆ ಸಮಿತಿ

ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಉತ್ತರಾಧಿಕಾರಿ ನೇಮಕಕ್ಕೆ ಸಮಿತಿ ರಚಿಸಲು ಸಾಧು ಸದ್ಧರ್ಮ ವೀರಶೈವ ಸಂಘದ ಸಭೆ ತೀರ್ಮಾನಿಸಿತು.

‘ಏಕ ಚಕ್ರಾಧಿಪತ್ಯ ನೆಲೆಯೂರುತ್ತಿದೆ ಎಂಬ ದೂಷಣೆ ಕೇಳಿ ಬರುತ್ತಿದೆ. ಸಮಾಜವು ಉತ್ತರಾಧಿಕಾರಿ ನೇಮಕವನ್ನು ಗಂಭೀರವಾಗಿ ಪರಿಗಣಿಸಬೇಕು. ಸಮಿತಿಯೊಂದನ್ನು ರಚಿಸಿ ನಮ್ಮೊಂದಿಗೆ ಚರ್ಚಿಸಿ ಮುಂದುವರಿಯುವುದು ಒಳಿತು’ ಎಂದು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಭೆಯ ಮುಂದಿಟ್ಟರು.

ಇದನ್ನು ಒಪ್ಪದ ಭಕ್ತರು ನೀವೆ ಮುಂದುವರಿಯಬೇಕು ಹಾಗೂ ನೀವೇ ಉತ್ತರಾಧಿಕಾರಿ ಆಯ್ಕೆ ಮಾಡಬೇಕು ಎಂದು ಪಟ್ಟು ಹಿಡಿದರು. ಇದಕ್ಕೆ ಸ್ವಾಮೀಜಿ ಒಪ್ಪಲಿಲ್ಲ.

‘2012ರಲ್ಲಿ ಪೀಠಾಧ್ಯಕ್ಷ ಸ್ಥಾನಕ್ಕೆ ನಿವೃತ್ತಿ ಘೋಷಣೆ ಮಾಡಲಾಯಿತು ಎಂಬುದು ಸುಳ್ಳು. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ 60 ವರ್ಷಕ್ಕೆ ಪೀಠತ್ಯಾಗ ಪತ್ರವನ್ನು ಸಮಾಜಕ್ಕೆ ನೀಡಿದ್ದರು. ಅಂತಹ ಯಾವುದೇ ಪತ್ರವನ್ನು ನಾವು ಈವರೆಗೆ ನೀಡಿಲ್ಲ. ನಿವೃತ್ತಿ ಘೋಷಣೆ ಮಾಡುವಂತೆ ಕೋರಿಕೊಳ್ಳಲಾಗಿತ್ತು’ ಎಂದು ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು