ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಯಬ್ಬೆ: ಅತಿ ಹಳೆಯ ಶಾಲೆಯಲ್ಲಿ ಸ್ಮಾರ್ಟ್‌ಕ್ಲಾಸ್‌ ಆಕರ್ಷಣೆ

ಹರಿಯಬ್ಬೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಠ್ಯ–ಕ್ರೀಡೆ–ಸಾಂಸ್ಕೃತಿಕ ಚಟುವಟಿಕೆಗೆ ಸಮಾನ ಆದ್ಯತೆ
Last Updated 6 ಅಕ್ಟೋಬರ್ 2021, 7:08 IST
ಅಕ್ಷರ ಗಾತ್ರ

ಹರಿಯಬ್ಬೆ(ಧರ್ಮಪುರ): ಸರ್ಕಾರಿ ಶಾಲೆಗಳೆಂದರೆ ಪೋಷಕರು ಮೂಗು ಮುರಿಯುವ ಈ ಸಂದರ್ಭದಲ್ಲಿ,ಇಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕಶಾಲೆಗೆ ಮಕ್ಕಳನ್ನು ಸೇರಿಸಲು ಪೋಷಕರು ಹೆಚ್ಚು ಆಸಕ್ತಿ ತೋರುತ್ತಿರುವುದು ಕಂಡು ಬರುತ್ತಿದೆ.

ಸ್ವಾತಂತ್ರ್ಯಪೂರ್ವದಲ್ಲಿ ಅಂದರೆ ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಆರಂಭವಾದ ಇಲ್ಲಿಯ ಶಾಲೆ ಅಂದಿನಿಂದಲೂ ಸಾವಿರಾರು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಹೊರ ಹೊಮ್ಮಿಸಿದ ‘ಲಂಡನ್’ (ಬುದ್ಧಿವಂತರ) ಎಂಬ ಖ್ಯಾತಿ ಹೊಂದಿದೆ. ಈ ಶಾಲೆ ಇಂದು ಶಿಕ್ಷಕರ ಗುಣಮಟ್ಟದ ಬೊಧನೆ ಮತ್ತು ಕೌಶಲಾಧಾರಿತ ಸ್ಮಾರ್ಟ್‌ಕ್ಲಾಸ್ ಬೋಧನೆಯಿಂದ ಇನ್ನಷ್ಟು ಆಕರ್ಷಿಸುತ್ತಿದೆ. ಇಲ್ಲಿ ಕಲಿತವರು ಇಂದು ದೇಶ, ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದೇ ಇದಕ್ಕೆ ಸಾಕ್ಷಿ.

ಮೊದಲ ಹಂತದ ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಮಕ್ಕಳ ಕಲಿಕೆಗೆ ಹೆಚ್ಚು ಆಸಕ್ತಿ ವಹಿಸಿದ ಇಲ್ಲಿಯ ಪ್ರಭಾರ ಮುಖ್ಯ ಶಿಕ್ಷಕ
ಕೆ.ವಿ. ಗಿರಿರಾಜು ಮತ್ತು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷಬಿ.ಎಚ್. ವೆಂಕಟೇಶಪ್ಪ ಅವರ ಪರಿಶ್ರಮದ ಫಲವಾಗಿ ಕರ್ನಾಟಕ ರಾಜ್ಯ ಖನಿಜ ನಿಗಮದಿಂದ ₹ 2 ಲಕ್ಷ ಮೌಲ್ಯದ ಕಂಪ್ಯೂಟರ್, ಎಲ್‌ಸಿಡಿ ಪ್ರಾಜೆಕ್ಟರ್, ಸ್ಕ್ರೀನ್, ಯುಪಿಎಸ್ ಪರಿಕರಗಳನ್ನು ಪಡೆದಿದ್ದು, ಕಲಿಕೆಯನ್ನು ಪರಿಣಾಮಕಾರಿಯಾಗಿ ಮಾಡಲಾಗಿದೆ. ಒಮ್ಮೆ 60 ವಿದ್ಯಾರ್ಥಿಗಳು ಸ್ಮಾರ್ಟ್‌ ಕ್ಲಾಸ್ ಕೇಳಬಹುದಾದಷ್ಟು ಆಸನದ ವ್ಯವಸ್ಥೆಯನ್ನೂ ಮಾಡಲಾಗಿದೆ.

ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಹನುಮಂತ ನಾಯ್ಕ್, ಸುಧಾ, ಶಾಂತಮ್ಮ, ತನುಜಾ, ಕವಿತಾ, ಸುಮಲತಾ ಸೇರಿದಂತೆ ಬಹುತೇಕ ಶಿಕ್ಷಕರು ಬಹಳ ವರ್ಷಗಳಿಂದ ಇಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶಾಲೆಯಲ್ಲಿ 10 ಕಂಪ್ಯೂಟರ್, ಎರಡು ಪ್ರಾಜೆಕ್ಟರ್, ಸ್ಪೀಕರ್‌, ಪ್ರಿಂಟರ್‌ಗಳನ್ನು ಹೊಂದಿದ್ದು ನಮಗೆ ಕಲಿಕೆಗೆ ಉಪಯುಕ್ತವಾಗಿದೆ ಎಂದು ವಿದ್ಯಾರ್ಥಿನಿಎಚ್.ಆರ್. ತೇಜಸ್ವಿನಿ ಹೇಳಿದರು.

ಉತ್ತಮ ಶಾಲಾ ಮೈದಾನವನ್ನು ಹೊಂದಿರುವ ಈ ಶಾಲೆಯಲ್ಲಿ ಈಗಾಗಲೇ 9 ಬಾರಿ ಧರ್ಮಪುರ ಹೋಬಳಿ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಬರೀ ಬೋಧನೆಗೆ ಮಾತ್ರವಲ್ಲದೇ ಕ್ರೀಡಾ ಚಟುವಟಿಕೆಗೂ ಪ್ರೋತ್ಸಾಹ ನೀಡಲಾಗಿದೆ. ಇದರಿಂದ ಅನೇಕ ಪ್ರತಿಭಾನ್ವಿತ ಕ್ರೀಡಾಪಟುಗಳು ಹೊರಹೊಮ್ಮಲು ಕಾರಣವಾಗಿದೆ.

ಉತ್ತಮ ಪರಿಸರ: ಹರಿಯಬ್ಬೆ-ಹಿರಿಯೂರು ಪ್ರಧಾನ ರಸ್ತೆಗೆ ಹೊಂದಿಕೊಂಡಿರುವ ವಿಶಾಲವಾದ ಮೈದಾನದಲ್ಲಿ ಶಾಲೆಯ ಕಟ್ಟಡವಿದೆ. ಮೈದಾನದಲ್ಲಿ ಬೆಳಸಲಾದ ಹುಣಸೆಮರ, ಅಶೋಕ ಮರ, ತೆಂಗಿನ ಮರಗಳು, ವಿವಿಧ ಜಾತಿಯ ಹೂವಿನ ಗಿಡಗಳು ಶಾಲೆಯ ಅಂದವನ್ನು ಹೆಚ್ಚಿಸಿವೆ. ಇದರ ಜತೆಗೆ ಶಾಲಾ ಆವರಣದಲ್ಲೇ ಇರುವ ಶಾಂತಲಾ ಕಲಾ ಮಂದಿರ ವಿದ್ಯಾರ್ಥಿಗಳ ಸಾಂಸ್ಕೃತಿಕ ಚಟುವಟಿಕೆಗಳ ಅನಾವರಣಕ್ಕೆ ವೇದಿಕೆ ಒದಗಿಸಿದೆ.

ಆಂಗ್ಲ ಮಾಧ್ಯಮ: ಈ ಶಾಲೆಯಲ್ಲಿ ಒಟ್ಟು250 ವಿದ್ಯಾರ್ಥಿಗಳಿದ್ದು, ಕನ್ನಡ ಮಾಧ್ಯಮದ ಜತೆಗೆ ಆಂಗ್ಲ ಮಾಧ್ಯಮದ ವ್ಯವಸ್ಥೆಯೂ ಇದೆ. 1ರಿಂದ 7ನೇ ತರಗತಿಯವರೆಗೂ ಗ್ರಾಮೀಣ ಮಕ್ಕಳಿಗೆ ಅನುಕೂಲವಾಗಲೆಂದು ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡಲಾಗುತ್ತಿದೆ.

ಎಲ್‌ಕೆಜಿ: ಈ ಶಾಲೆಯಲ್ಲಿ 2021-22ನೇ ಸಾಲಿಗೆ ಎಲ್‌ಕೆಜಿ ಮತ್ತು ಯುಕೆಜಿ ಆರಂಭ ಮಾಡಬೇಕು ಎಂದು ಪೋಷಕರು,ಗ್ರಾಮಸ್ಥರು ಆಸಕ್ತಿ ವಹಿಸಿದ್ದು, ಇದಕ್ಕಾಗಿ ಸಮಿತಿ ನೇಮಿಸಿಕೊಂಡು ಇಬ್ಬರು ಶಿಕ್ಷಕರು, ಒಬ್ಬರು ಆಯಾ ನೇಮಿಸಿಕೊಳ್ಳಲು ಮತ್ತು ಅವರಿಗೆ ವೇತನ ನೀಡಲು ಸಮಿತಿ ನಿರ್ಧರಿಸಿದೆ. ಈಗಾಗಲೇ 60 ಮಕ್ಕಳನ್ನು ಸೇರಿಸಲು ಸಿದ್ಧತೆ ನಡೆಸಿದೆ.

...

ಶಾಲೆಗೆ ಕಾಂಪೌಂಡ್ ನಿರ್ಮಾಣ ಆಗಬೇಕಿದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ ಇಲ್ಲದೇ ಇರುವುದರಿಂದ ಮತ್ತಷ್ಟು ಶೌಚಾಲಯಗಳು ನಿರ್ಮಾಣವಾಗಬೇಕು.

–ಎಸ್. ಏಕಾಂತಪ್ಪ, ಎಸ್‌ಡಿಎಂಸಿ ಅಧ್ಯಕ್ಷ

...

ಶಿಕ್ಷಕರ ಬೆಂಬಲ ಮತ್ತು ಪೋಷಕರ ಸಹಕಾರದಿಂದ ಉತ್ತಮ ಶಾಲೆಯಾಗಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಎಲ್‌ಕೆಜಿ ಆರಂಭ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಲಾಖೆಯ ಅನುಮತಿಗೆ ಕಾಯುತ್ತಿದ್ದೇವೆ.

–ಕೆ.ವಿ. ಗಿರಿರಾಜು, ಪ್ರಭಾರ ಮುಖ್ಯ ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT