ಸೋಮವಾರ, ಮಾರ್ಚ್ 1, 2021
30 °C
ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರ್‌ ನಾಯ್ಕ್‌

ಸರ್ಕಾರಿ ಹಾಸ್ಟೆಲ್‌ಗಳು ಧರ್ಮಛತ್ರ ಅಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಸರ್ಕಾರ ನಡೆಸುತ್ತಿರುವುದು ಹಾಸ್ಟೆಲ್‌ಗಳನ್ನೇ ಹೊರತು ಧರ್ಮಛತ್ರಗಳನ್ನಲ್ಲ. ಕಟ್ಟಡದ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಬಾರದು ಎಂದು ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಿ.ಕುಮಾರ್‌ ನಾಯ್ಕ್‌ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಅಂಬೇಡ್ಕರ್‌ ಅಭಿವೃದ್ಧಿ ನಿಗಮ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಗತಿ ಪರಿಶೀಲನಾ ಸಭೆಯನ್ನು ಮಂಗಳವಾರ ನಡೆಸಿದರು. ‘ಹೆಚ್ಚುವರಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು’ ಎಂಬ ಅಧಿಕಾರಿಯೊಬ್ಬರ ಕೋರಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ನೂರು ವಿದ್ಯಾರ್ಥಿಗಳಿಗೆ ಅವಕಾಶ ಇರುವ ಹಾಸ್ಟೆಲ್‌ನಲ್ಲಿ 120ವಿದ್ಯಾರ್ಥಿಗಳನ್ನು ತುಂಬಬಾರದು. ಕೊಠಡಿಯಲ್ಲಿ ಹೆಚ್ಚುವರಿ ವಿದ್ಯಾರ್ಥಿಗಳು ವಾಸ್ತವ್ಯ ಹೂಡಿದರೆ ಶಿಕ್ಷಣದ ಮೇಲೂ ಪರಿಣಾಮ ಬೀರುತ್ತದೆ. ಕುಡಿಯುವ ನೀರು, ಶೌಚಾಲಯ ಸೇರಿ ಮೂಲ ಸೌಲಭ್ಯ ಸಾಕಾಗದೆ ಸಮಯಕ್ಕೆ ಸರಿಯಾಗಿ ಶಾಲೆ–ಕಾಲೇಜುಗಳಿಗೆ ಹಾಜರಾಗಲು ಸಾಧ್ಯವಾಗುವುದಿಲ್ಲ’ ಎಂದರು.

‘ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪ್ರವೇಶ ಬಯಸಿದರೆ ಇಲಾಖೆಗೆ ಪ್ರಸ್ತಾವ ಕಳುಹಿಸಿ. ಹೊಸ ಹಾಸ್ಟೆಲ್‌ಗೆ ಮಂಜೂರಾತಿ ಪಡೆದು ಸೌಲಭ್ಯ ಒದಗಿಸಿ. ಇದು ಸಾಧ್ಯವಾಗದೇ ಇದ್ದರೆ ‘ವಿದ್ಯಾಸಿರಿ’ ಯೋಜನೆಯ ಪ್ರಯೋಜನ ಪಡೆಯಲು ವಿದ್ಯಾರ್ಥಿಗಳನ್ನು ಹುರಿದುಂಬಿಸಿ. ಮಾಸಿಕವಾಗಿ ದೊರೆಯುವ ವಿದ್ಯಾರ್ಥಿ ವೇತನದಲ್ಲಿ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಿದೆ’ ಎಂದು ಸಲಹೆ ನೀಡಿದರು.

‘ವಿದ್ಯಾರ್ಥಿನಿಲಯಗಳ ಅವ್ಯವಸ್ಥೆಗೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳಿವೆ. ದಾಖಲೆಯಲ್ಲಿ ತೋರಿಸಿದಷ್ಟು ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ವಾಸ್ತವ್ಯ ಹೂಡುತ್ತಿಲ್ಲ ಹಾಗೂ ಊಟ ಮಾಡುತ್ತಿಲ್ಲ. ನಿತ್ಯ ಬೆಳಿಗ್ಗೆ ಹಾಗು ಸಂಜೆ ವಿದ್ಯಾರ್ಥಿಗಳ ಬಯೊಮೆಟ್ರಿಕ್‌ ಪಡೆಯಬೇಕು’ ಎಂದು ಸೂಚನೆ ನೀಡಿದರು.

ಆಗ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಆರ್‌.ವಿನೋತ್‌ ಪ್ರಿಯಾ, ಹಿರಿಯೂರು ತಾಲ್ಲೂಕಿನ ಹಾಸ್ಟೆಲ್‌ಗೆ ಭೇಟಿ ನೀಡಿದಾಗ ನೋಡಿದ ಸಂಗತಿಯನ್ನು ಸಭೆಯ ಮುಂದಿಟ್ಟರು. ‘ಹಾಸ್ಟೆಲ್‌ ದಾಖಲೆಯಲ್ಲಿ 50 ವಿದ್ಯಾರ್ಥಿಗಳಿದ್ದಾರೆ. ಆದರೆ, ಅಲ್ಲಿ ನಿತ್ಯ ವಾಸ್ತವ್ಯ ಹೂಡುವುದು 35 ಮಂದಿ ಮಾತ್ರ. ಇನ್ನೂ 15 ಮಕ್ಕಳು ಮಧ್ಯಾಹ್ನ ಊಟಕ್ಕೆ ಮಾತ್ರ ಬರುತ್ತಾರೆ. ಆದರೆ, ಮೂರು ಹೊತ್ತಿನ ಊಟ ಸೇರಿ ಇತರ ಸೌಲಭ್ಯಗಳು ಆ ವಿದ್ಯಾರ್ಥಿಗಳ ಹೆಸರಿನಲ್ಲಿ ಸಂದಾಯವಾಗುತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮಾಜ ಕಲ್ಯಾಣ ಇಲಾಖೆಗಳಲ್ಲಿ ನೌಕರರು ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಮೂರು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ ಎಂಬ ಸಂಗತಿಯನ್ನು ಅರಿತು ಕುಮಾರ್‌ ನಾಯ್ಕ್‌ ಬೇಸರ ವ್ಯಕ್ತಪಡಿಸಿದರು.

‘ವೇತನಾನುದಾನಕ್ಕೆ ಪ್ರಸ್ತಾವ ಸಲ್ಲಿಸಬೇಕು. ಅನುದಾನ ಮುಗಿದ ಬಳಿಕ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ. ಅಡುಗೆ ಸಿಬ್ಬಂದಿಗೆ ನಿಗದಿತ ಸಮಯಕ್ಕೆ ವೇತನ ನೀಡಬೇಕು. ವೇತನ ಪಾವತಿಯಲ್ಲಿ ವಿಳಂಬವಾಗಬಾರದು’ ಎಂದು ಎಚ್ಚರಿಕೆ ನೀಡಿದರು.

ಶಾಲೆಗೆ ಪ್ರವೇಶಾತಿ ಪಡೆಯುವ ಸಂದರ್ಭದಲ್ಲಿಯೇ ವಿದ್ಯಾರ್ಥಿಯ ಬ್ಯಾಂಕ್‌ ಖಾತೆ ಹಾಗೂ ಆಧಾರ್‌ ಸಂಖ್ಯೆ ಪಡೆಯಬೇಕು. ಅದನ್ನು ಸಮಾಜ ಕಲ್ಯಾಣ ಇಲಾಖೆಯೊಂದಿಗೆ ಜೋಡಣೆ ಮಾಡಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಪರಮೇಶ್ವರ್, ಡಿಡಿಪಿಐ ರೇವಣ್ಣಸಿದ್ದಪ್ಪ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು