ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಲಕನ ಕೊಂದ ತಾಯಿ: ಮಗುವಿನ ಮೃತದೇಹ ವಿಚ್ಛೇದಿತ ಪತಿಗೆ ಹಸ್ತಾಂತರ

Published 10 ಜನವರಿ 2024, 6:56 IST
Last Updated 10 ಜನವರಿ 2024, 6:56 IST
ಅಕ್ಷರ ಗಾತ್ರ

ಚಿತ್ರದುರ್ಗ: ನಾಲ್ಕು ವರ್ಷ ವಯಸ್ಸಿನ ಪುತ್ರನನ್ನೇ ಕೊಲೆಗೈದು ಮೃತದೇಹವನ್ನು ಸೂಟ್‌ಕೇಸ್‌ಗೆ ತುಂಬಿ ಕಾರಿನಲ್ಲಿ ಗೋವಾದಿಂದ ಬೆಂಗಳೂರಿನತ್ತ ಸಾಗಿಸುತ್ತಿದ್ದ ‘ಮೈಂಡ್‌ಫುಲ್‌ ಎ.ಐ ಲ್ಯಾಬ್‌’ ಹೆಸರಿನ ನವೋದ್ಯಮ ಕಂಪನಿಯ ಮಹಿಳಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಸುಚನಾ ಸೇಠ್‌ (39) ಎಂಬವರನ್ನು ಐಮಂಗಲ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮೃತ ಬಾಲಕನ ಮುಖ ಹಾಗೂ ಎದೆಯಲ್ಲಿ ಊತ ಕಾಣಿಸಿಕೊಂಡಿದ್ದು, ಕುತ್ತಿಗೆ ಭಾಗದಲ್ಲಿ ಉಸಿರುಕಟ್ಟಿಸಿ ಕೊಲೆ ಮಾಡಿದ ಸಾಧ್ಯತೆ ಇದೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯ ಡಾ.ಕುಮಾರ್‌ ನಾಯ್ಕ ಅವರು ತಿಳಿಸಿದರು.

ಹಿರಿಯೂರು ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಮಂಗಳವಾರ ರಾತ್ರಿ ಮರಣೋತ್ತರ ಪರೀಕ್ಷೆ ಮುಗಿಸಿದ ಬಳಿಕ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

‘ಕುತ್ತಿಗೆ ಭಾಗವನ್ನು ಬಿಗಿಹಿಡಿದು ಉಸಿರುಕಟ್ಟಿಸಲಾಗಿದೆ. ದಿಂಬು ಬಳಸಿ ಕೃತ್ಯ ಎಸಗಿರಬಹುದು. ಕೊಲೆಯಾದ ಬಳಿಕ ಮೂಗು ಹಾಗೂ ಬಾಯಿಯಿಂದ ರಕ್ತ ಹೊರಬಂದಿದೆ.
ದೇಹದ ಯಾವುದೇ ಭಾಗದಲ್ಲಿ ಗಾಯದ ಗುರುತುಗಳಿಲ್ಲ. ಬಾಲಕ ಮೃತಪಟ್ಟು 36 ಗಂಟೆಗೂ ಹೆಚ್ಚು ಸಮಯಕಳೆದಿದೆ’ ಎಂದು ಹೇಳಿದರು.

ಮೃತ ಬಾಲಕನ ತಂದೆ ವೆಂಕಟರಮಣ್‌ ಇಂಡೊನೇಷ್ಯಾದಿಂದ ಮಂಗಳವಾರ ಸಂಜೆ ಹಿರಿಯೂರಿಗೆ ಬಂದರು. ಶವಾಗಾರಕ್ಕೆ ತೆರಳಿ ಪುತ್ರನ ಮೃತದೇಹ ಕಂಡು ಭಾವುಕರಾದರು. ಐಮಂಗಲ ಠಾಣೆ ಹಾಗೂ ಗೋವಾ ಪೊಲೀಸರ ಸಮ್ಮುಖದಲ್ಲಿ ವೈದ್ಯರು ಮರಣೋತ್ತರ ಪರೀಕ್ಷೆಯನ್ನು ಪೂರ್ಣಗೊಳಿಸಿದರು. ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಬಾಲಕನ ಮೃತದೇಹವನ್ನು ವೆಂಕಟರಮಣ್‌ಗೆ ಹಸ್ತಾಂತರಿಸಲಾಯಿತು.

ದಾಂಪತ್ಯದಲ್ಲಿ ಬಿರುಕು:

ಭೌತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರೆಯಾಗಿರುವ ಕೋಲ್ಕತ್ತಾ ಮೂಲದವರು ಎನ್ನಲಾದ ಸುಚನಾ ಸೇಠ್‌, 2008ರಲ್ಲಿ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಕ್ಕೆ ಸೇರಿದ್ದರು. 2010ರಲ್ಲಿ ವೆಂಕಟರಮಣ್‌ ಎಂಬವರನ್ನು ವಿವಾಹವಾಗಿದ್ದರು. ದಂಪತಿಗೆ 2019ರಲ್ಲಿ ಪುತ್ರ ಚಿನ್ಮಯ್‌ ಜನಿಸಿದ್ದ. ಅದಾಗಲೇ ದಾಂಪತ್ಯದಲ್ಲಿ ಬಿರುಕು ಮೂಡಿದ್ದರಿಂದ 2020ರಲ್ಲಿ ವಿಚ್ಛೇದನಕ್ಕೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರತಿ ಭಾನುವಾರ ಪುತ್ರನೊಂದಿಗೆ ಮಾತನಾಡಲು ಪತಿಗೆ ನ್ಯಾಯಾಲಯ ಅವಕಾಶ ಕಲ್ಪಿಸಿತ್ತು. ಇದು ಸುಚನಾಗೆ ಇಷ್ಟವಿರಲಿಲ್ಲ ಎಂದು ಮೂಲಗಳು ಮಾಹಿತಿ ನೀಡಿವೆ.

‘ಇಂಡೊನೇಷ್ಯದ ಜಕಾರ್ತಾದಲ್ಲಿರುವ ಪತಿ ವೆಂಕಟರಮಣ್ ಅವರಿಗೆ ಗೋವಾ ಪೊಲೀಸರು ಘಟನೆ ಕುರಿತು ಮಾಹಿತಿ ನೀಡಿದ್ದರು. ಅವರು ಹಿರಿಯೂರಿಗೆ ಬಂದ ಬಳಿಕ ಬಾಲಕನ ಮರಣೋತ್ತರ ಪರೀಕ್ಷೆ ನಡೆಯಿತು’ ಎಂದು ಚಿತ್ರದುರ್ಗ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT