ಸೋಮವಾರ, ಏಪ್ರಿಲ್ 6, 2020
19 °C

ಚಿತ್ರದುರ್ಗ | ಯುವತಿ ಆತ್ಮಹತ್ಯೆಗೆ ಪ್ರಚೋದನೆ; ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಒಂದೂವರೆ ತಿಂಗಳ ಹಿಂದೆ ನಾಪತ್ತೆಯಾಗಿದ್ದ ತಾಲ್ಲೂಕಿನ ಚಿಕ್ಕೇನಹಳ್ಳಿಯ ಸಿ.ಎ.ದಿವ್ಯಾ (20) ಶಿವಮೊಗ್ಗದ ಪುರ್ಲೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರಾಥಮಿಕ ತನಿಖೆಗೆ ಬೆಳಕಿಗೆ ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದರು.

‘ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನಗಿರಿಯ ಸ್ವಾಮಿ (23) ಹಾಗೂ ಈತನ ಸ್ನೇಹಿತ 17 ವರ್ಷದ ಬಾಲಕನನ್ನು ಬಂಧಿಸಲಾಗಿದೆ. ಶಿವಮೊಗ್ಗ ಪೊಲೀಸರು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ (ಐಪಿಸಿ 306) ನೀಡಿದ ಆರೋಪದಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ’ ಎಂದು ಗುರುವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.

‘ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ದಿವ್ಯಾ, ಡಿ.30ರಂದು ಚಿತ್ರದುರ್ಗಕ್ಕೆ ಬಂದಿದ್ದರು. ಸ್ನೇಹಿತ ಸ್ವಾಮಿ ಭೇಟಿ ಮಾಡಲು ಶಿವಮೊಗ್ಗಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ. ಪುರ್ಲೆ ಕೆರೆಯ ಸಮೀಪಕ್ಕೆ ತೆರಳಿ ಸ್ವಾಮಿಗೆ ಫೋನ್‌ ಮಾಡಿದ್ದರು. ಆಗ ಇಬ್ಬರ ನಡುವೆ ವಾಗ್ವಾದ ನಡೆದು ಆತ್ಮಹತ್ಯೆಗೆ ಶರಣಾಗಿದ್ದರು’ ಎಂದು ವಿವರಿಸಿದರು.

‘ಜ.1ರಂದು ಕೆರೆಯಲ್ಲಿ ದಿವ್ಯಾ ಶವ ಪತ್ತೆಯಾಗಿತ್ತು. ಅಪರಚಿತ ಶವದ ಗುರುತು ಪತ್ತೆಗೆ ಪ್ರಯತ್ನಿಸಿದ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ಶವಸಂಸ್ಕಾರ ನೆರವೇರಿಸಿದ್ದರು. ದಿವ್ಯಾ ಮನೆಗೆ ಹಿಂದಿರುಗದೇ ಇರುವುದರಿಂದ ಗಾಬರಿಗೊಂಡ ಪೋಷಕರು ಎಲ್ಲೆಡೆ ಹುಡುಕಾಟ ನಡೆಸಿ, ಜ.11ರಂದು ಭರಮಸಾಗರ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ನಾಪತ್ತೆ ದೂರಿನ ತನಿಖೆಯ ಜಾಡು ಹಿಡಿದು ಸಾಗಿದಾಗ ಪ್ರಕರಣ ಬೆಳಕಿಗೆ ಬಂದಿದೆ’ ಎಂದರು.

‘ಡಿಕೋನಿಯಾ’ ಕಂಪೆನಿಯಲ್ಲಿನ ತರಬೇತಿಗೆ ಶಿವಮೊಗ್ಗಕ್ಕೆ ತೆರಳಿದ ದಿವ್ಯಾಗೆ ಸ್ವಾಮಿಯ ಪರಿಚಯವಾಗಿತ್ತು. ನಾಲ್ಕು ತಿಂಗಳ ಹಿಂದೆ ಇವರ ನಡುವೆ ಪ್ರೇಮಾಂಕುರವಾಗಿತ್ತು. ಮದುವೆ ಆಗುವಂತೆ ದಿವ್ಯಾ ಆರೋಪಿಯನ್ನು ಕೇಳಿಕೊಂಡಿದ್ದಳು. ಇದಕ್ಕೆ ಸ್ವಾಮಿ ಒಪ್ಪದೇ ಇರುವುದರಿಂದ ಇಬ್ಬರ ನಡುವೆ ವೈಮನಸು ಉಂಟಾಗಿತ್ತು’ ಎಂದು ಹೇಳಿದರು.

‘ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ದಿವ್ಯಾ ಆಗಾಗ ಪ್ರಿಯತಮನಿಗೆ ಬೆದರಿಕೆ ಹಾಕುತ್ತಿದ್ದಳು. ಶಿವಮೊಗ್ಗದ ಪುರ್ಲೆ ಕೆರೆಯ ಸಮೀಪದಿಂದ ದೂರವಾಣಿ ಕರೆ ಮಾಡಿ ಹೆದರಿಸಿದ್ದಳು. ಸ್ವಾಮಿ ಹಾಗೂ ಆತನ ಸ್ನೇಹಿತ ಹೀಗೆ ಎರಡು ಬಾರಿ ಕೆರೆ ಬಳಿಗೆ ತೆರಳಿ ದಿವ್ಯಾಳನ್ನು ಮನವೊಲಿಸಿ ಕರೆತಂದಿದ್ದರು. ಡಿ.30ರಂದು ಹೀಗೆ ಕರೆ ಮಾಡಿದಾಗ ಸ್ವಾಮಿ ಉಪೇಕ್ಷೆ ಮಾಡಿದ್ದನು. ಕೆರೆ ದಂಡೆಯ ಮೇಲೆ ನಿಂತು ಸೆಲ್ಫಿ ಫೋಟೊ ಹಾಕಿದರೂ ಆರೋಪಿಯ ಮನಸು ಕರಗಿರಲಿಲ್ಲ. ಮನನೊಂದ ದಿವ್ಯಾ ಕೆರೆಗೆ ಹಾರಿದ್ದಳು’ ಎಂದು ವಿವರಿಸಿದರು.

‘ಕೆಲ ಹೊತ್ತಿನ ಬಳಿಕ ದಿವ್ಯಾ ಫೋನ್‌ ಸಂಪರ್ಕ ಸ್ಥಗಿತಗೊಂಡಿತ್ತು. ಆತಂಕಗೊಂಡ ಸ್ವಾಮಿ, ಸ್ನೇಹಿತನೊಂದಿಗೆ ಕೆರೆ ಸಮೀಪಕ್ಕೆ ಧಾವಿಸಿ ಪರಿಶೀಲಿಸಿದಾಗ ಚಪ್ಪಲಿ, ಬ್ಯಾಗು ಬಿದ್ದಿದ್ದವು. ಗಾಬರಿಯಾದ ಆರೋಪಿಗಳು ಇವನ್ನು ಕೊಂಡೊಯ್ದು ಬಚ್ಚಿಟ್ಟಿದ್ದರು. ಎರಡು ದಿನಗಳ ಬಳಿಕ ಶವ ಪತ್ತೆಯಾದರೂ ಆರೋಪಿಗಳು ತಪ್ಪೊಪ್ಪಿಕೊಂಡಿರಲಿಲ್ಲ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು