ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಮಾಂಧ್ರ ಗಡಿಯಲ್ಲಿ ರಾಜ್ಯದ ಮದ್ಯ ಮಾರಾಟ ಜೋರು

ಸ್ಥಳೀಯರ ವಿರೋಧಕ್ಕೆ ಬೆಲೆ ಇಲ್ಲ: ಗಡಿಗ್ರಾಮಗಳು ಕೇಂದ್ರೀಕೃತ
Last Updated 9 ಸೆಪ್ಟೆಂಬರ್ 2020, 16:00 IST
ಅಕ್ಷರ ಗಾತ್ರ

ಮೊಳಕಾಲ್ಮುರು: ನೆರೆ ಸೀಮಾಂಧ್ರದಲ್ಲಿ ಈಚೆಗೆ ಖಾಸಗಿಯವರ ಮದ್ಯದಂಗಡಿಗಳನ್ನು ಸರ್ಕಾರ ಬಂದ್ ಮಾಡಿರುವ ಜತೆಗೆ ಮದ್ಯದ ದರ ಹೆಚ್ಚಳ ಮಾಡಿರುವ ನಿಟ್ಟಿನಲ್ಲಿ ನಮ್ಮ ರಾಜ್ಯದ ಗಡಿಯಲ್ಲಿ ಮದ್ಯ ಮಾರಾಟ ಪ್ರಮಾಣ ತೀವ್ರ ಹೆಚ್ಚಳವಾಗುತ್ತಿದೆ.

3 ತಿಂಗಳ ಹಿಂದೆ ಸೀಮಾಂಧ್ರ ಸರ್ಕಾರ ಖಾಸಗಿ ವ್ಯಕ್ತಿಗಳಿಗೆ ನೀಡಿದ್ದ ಮದ್ಯದ ಅಂಗಡಿ ಪರವಾನಗಿ ರದ್ದು ಮಾಡಿದೆ. ಸರ್ಕಾರದ ಅಂಗಡಿಗಳಲ್ಲಿ ಮಾತ್ರ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಕೊರೊನಾ ಸಮಯದಲ್ಲಿ ಆರ್ಥಿಕ ನಷ್ಟ ಸರಿದೂಗಿಸಲು ಮದ್ಯ ಮಾರಾಟದ ಮೇಲಿನ ತೆರಿಗೆ ಹೆಚ್ಚಿಸಿರುವ ಪರಿಣಾಮ ರಾಜ್ಯದ ಮಾರಾಟ ದರಕ್ಕೂ ಅಲ್ಲಿನ ಮಾರಾಟ ದರಕ್ಕೂ ಅಜಗಜಾಂತರ ವ್ಯತ್ಯಾಸವಿರುವ ಕಾರಣ ಆಂಧ್ರದ ಮದ್ಯಪ್ರಿಯರು ರಾಜ್ಯದ ಕಡೆ ಮುಖಮಾಡುತ್ತಿದ್ದಾರೆ ಎನ್ನಲಾಗಿದೆ.

ಈ ಪರಿಸ್ಥಿತಿಯನ್ನು ನಗದು ಮಾಡಿಕೊಳ್ಳಲು ನಮ್ಮ ರಾಜ್ಯದ ಕೆಲ ವ್ಯಾಪಾರಿಗಳು ಸೀಮಾಂಧ್ರವನ್ನು ಗುರಿಯಾಗಿಸಿಕೊಂಡು ಗಡಿಗೆ ಹೊಂದಿಕೊಂಡು ಹೊಸದಾಗಿ ಮದ್ಯದಂಗಡಿ ಆರಂಭಿಸುತ್ತಿದ್ದಾರೆ. ಈಗಾಗಲೇ ಮೊಳಕಾಲ್ಮುರು ತಾಲ್ಲೂಕಿನ ಆಂಧ್ರದ ಗಡಿಯಲ್ಲಿ ಹೊಸದಾಗಿ 4 ಅಂಗಡಿಗಳು ಆರಂಭವಾಗಿದ್ದು, ಇನ್ನೂ ಒಂದು ಅಂಗಡಿ ಆರಂಭದ ಹಂತದಲ್ಲಿದೆ ಎಂದು ಮಾಹಿತಿ ಸಿಕ್ಕಿದೆ.

ಅಬಕಾರಿ ಅಧಿಕಾರಿ ಕೀರ್ತನಾ, ‘ತಾಲ್ಲೂಕಿನಲ್ಲಿ ಕರಡಿಹಳ್ಳಿ, ಊಡೇವು, ವೆಂಕಟಾಪುರ, ಉರ್ತಾಳ್‌ನಲ್ಲಿ ಹೊಸ ಅಂಗಡಿಗಳು ಆರಂಭವಾಗಿದೆ. ಪಟ್ಟಣ ಸಮೀಪದ ಆಂಧ್ರದ ಗಡಿಯಲ್ಲಿರುವ ಎದ್ದಲ ಬೊಮ್ಮಯ್ಯನಹಟ್ಟಿ ಬಳಿ ಹೊಸ ಮದ್ಯದಂಗಡಿ ಆರಂಭವಾಗಬೇಕಿದೆ. ಸರ್ಕಾರದ ನಿಯಮಾವಳಿ ಪ್ರಕಾರವೇ ಲೈಸೆನ್ಸ್ ನೀಡಲಾಗಿದೆ’ ಎಂದರು.

‘ತಾಲ್ಲೂಕಿನ ಮದ್ಯದ ಅಂಗಡಿಗಳು ಸಾಮಾನ್ಯವಾಗಿ ಪ್ರತಿ ತಿಂಗಳು 500-600 ಬಾಕ್ಸ್ ಮದ್ಯ ಮಾರಾಟ ಮಾಡುತ್ತವೆ. ಗಡಿಯಲ್ಲಿ ಹೊಸದಾಗಿ ಆರಂಭವಾಗಿರುವ ಅಂಗಡಿಗಳಲ್ಲೂ ಇದೇ ಪ್ರಮಾಣದಲ್ಲಿ ಮಾರಾಟವಾಗಿದೆ. ಹೊಸೂರಿನಲ್ಲಿ ಆರಂಭವಾಗಿರುವ ಅಂಗಡಿಯಲ್ಲಿ ಮಾತ್ರ 2,000 ಬಾಕ್ಸ್ ಮಾರಾಟವಾಗಿದೆ’ ಎಂದು ತಿಳಿಸಿದರು.

ಚಿತ್ರದುರ್ಗ ಸೇರಿ ಪಟ್ಟಣಗಳಲ್ಲಿ ನಡೆಯುತ್ತಿದ್ದ ಹಾಗೂ ಸ್ಥಗಿತವಾಗಿದ್ದ ಅಂಗಡಿಗಳ ಲೈಸೆನ್ಸ್ ಅನ್ನು ದುಬಾರಿ ಬೆಲೆಗೆ ಕೊಂಡು ಅಂಗಡಿಗಳನ್ನು ಆರಂಭಿಸಲಾಗಿದೆ. ಪ್ರತಿ ಅಂಗಡಿ ಆರಂಭಕ್ಕೆ ₹ 1.30 ಕೋಟಿಯಿಂದ ₹ 1.50 ಕೋಟಿ ವೆಚ್ಚ ತಗಲಿದೆ. ಆಂಧ್ರದಲ್ಲಿ ಮೊದಲಿನ ತರಹ ದರ ನಿಗದಿ, ಮಾರಾಟಕ್ಕೆ ಅನುಮತಿ ನೀಡಿದಲ್ಲಿ ಈಗ ಹಾಕಿರುವ ಬಂಡವಾಳ ನೀರಿಗೆ ಹಾಕಿದಂತೆ ಆಗುತ್ತದೆ. ಇದೊಂದು ರೀತಿ ಜೂಜಾಟವಾಗಿದೆ’ ಎಂದು ವ್ಯಾಪಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT