ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ನಾಯಿಗಳ ಉಪಟಳ ನಿಲ್ಲದ ತಳಮಳ

ಮೈಮೇಲೆ ಏಕಾಏಕಿ ಎರಗುವ ಬೀದಿ ನಾಯಿಗಳು l ಪುಟಾಣಿಗಳೇ ಹೆಚ್ಚು ಗುರಿ, ಕೆಲ ಪ್ರಾಣಿಗಳನ್ನು ಕೂಡ ಬಿಟ್ಟಿಲ್ಲ
Last Updated 27 ಡಿಸೆಂಬರ್ 2021, 2:54 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯ ನಗರ, ಪಟ್ಟಣ, ಗ್ರಾಮೀಣ ಭಾಗಗಳಲ್ಲಿ ಬೀದಿ ನಾಯಿಗಳ ಉಪಟಳ ನಿತ್ಯ ಹೆಚ್ಚುತ್ತಿದೆ. ಇದು ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟು ಮಾಡಿದೆ. ಅಷ್ಟೇ ಅಲ್ಲದೇ ಪುಟಾಣಿಗಳೇ ಹೆಚ್ಚಾಗಿ ಗುರಿಯಾಗುತ್ತಿದ್ದು, ಅನೇಕ ಪೋಷಕರು ತಳಮಳಗೊಂಡಿದ್ದಾರೆ. ಕೆಲ ಸಾಕುಪ್ರಾಣಿಗಳನ್ನು ಬಿಡದೇ ಹಾನಿ ಉಂಟು ಮಾಡಿ ಮಾಲೀಕರ ನಿದ್ದೆಗೆಡಿಸಿವೆ.

ಒಂದೂವರೆ ತಿಂಗಳ ಹಿಂದೆಯಷ್ಟೇ ಹಿರಿಯೂರು ತಾಲ್ಲೂಕಿನ ಬಾಲೇನಹಳ್ಳಿಯಲ್ಲಿ ಬೀದಿ ನಾಯಿಗಳು ದಾಳಿ ನಡೆಸಿ ಆರು ತಿಂಗಳ 13 ಮೇಕೆ ಮರಿಗಳನ್ನು ಕೊಂದು ಹಾಕಿದ್ದವು. ಮರಿಗಳನ್ನು ರೊಪ್ಪದಲ್ಲಿ ಬಿಟ್ಟು, ಕುರಿಗಾಹಿ ತಿಮ್ಮಣ್ಣ ಮೇಕೆಗಳನ್ನುಮೇಯಿಸಲು ಹೋಗಿದ್ದಾಗ ಈ ದಾಳಿ ನಡೆದಿತ್ತು. ಈ ಘಟನೆ ಇನ್ನೂ ಮಾಸಿಲ್ಲ. ಜಿಲ್ಲೆಯ ಹಲವೆಡೆ ಇಂತಹ ಘಟನೆ ಆಗಿಂದಾಗ್ಗೆ ನಡೆಯುತ್ತಿದ್ದು, ಇದಕ್ಕೆ ಸಾಕ್ಷಿಯಾಗಿದೆ.

ಮನೆಯ ಮುಂಭಾಗದಲ್ಲಿ ಪುಟಾಣಿಗಳು ಆಟವಾಡುತ್ತಿದ್ದರೆ ಸಾಕು, ಇದ್ದಕ್ಕಿದಂತೆ ಗುಂಪು ಕಟ್ಟಿಕೊಂಡು ಬರುವ ನಾಯಿಗಳು ಏಕಾಏಕಿ ದಾಳಿ ನಡೆಸುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಈಚೆಗೆ ಗೋಪಾಲಪುರ ರಸ್ತೆಯ ನಾಲ್ಕು ವರ್ಷದ ಬಾಲಕಿ, ಪ್ರಸನ್ನ ಚಿತ್ರಮಂದಿರ ಮಾರ್ಗದ ಮಾಂಸ ಮಾರುಕಟ್ಟೆ ಸಮೀಪ ಬಾಲಕನೊಬ್ಬನಿಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ ಘಟನೆಗಳು ಕೂಡ ಆತಂಕ ಉಂಟು ಮಾಡಿವೆ.

ಈ ರೀತಿಯ ಹಲವು ಘಟನೆಗಳು ಮಾಸುವ ಮುನ್ನವೇ ದ್ವಿಚಕ್ರ ವಾಹನ ಸವಾರರೊಬ್ಬರ ಮೇಲೆ ಏಕಾಏಕಿ ಎರಗಿದ ನಾಯಿಗಳು ದಾಳಿ ನಡೆಸಿ ಕಚ್ಚಿವೆ. ಮುಖ, ಬೆನ್ನು, ಕೈ-ಕಾಲು, ಭುಜ ಸೇರಿ ದೇಹದ ಹಲವು ಭಾಗಗಳಲ್ಲಿ ಕಚ್ಚಿ ತೀವ್ರಸ್ವರೂಪದಲ್ಲಿ ಗಾಯಗೊಳಿಸುತ್ತಿವೆ. ಹುಚ್ಚುನಾಯಿ ಕಡಿತದಿಂದಲೂ ಕೆಲ ನಾಗರಿಕರು ನೋವು ಅನುಭವಿಸಿ, ಚಿಕಿತ್ಸೆ ಪಡೆದಿದ್ದಾರೆ.

ಜೋಗಿಮಟ್ಟಿ ರಸ್ತೆ, ಪ್ರಶಾಂತ ನಗರ, ಆಜಾದ್‌ ನಗರ, ಚೇಳುಗುಡ್ಡ, ಹೊಳಲ್ಕೆರೆ ರಸ್ತೆ, ಕೆಳಗೋಟೆ, ಜೆಸಿಆರ್‌ ಬಡಾವಣೆ, ಬ್ಯಾಂಕ್‌ ಕಾಲೊನಿಯಲ್ಲಿ ಇತ್ತೀಚಿನ ಎರಡು–ಮೂರು ತಿಂಗಳಿನಿಂದಲೂ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ಬಹುತೇಕ ಕಡೆ ಮಕ್ಕಳೇ ನಿರಂತರವಾಗಿ ಬೀದಿ ನಾಯಿಗಳ ದಾಳಿಗೆ ಒಳಗಾಗುತ್ತಿದ್ದಾರೆ. ಇಂತಹ ಘಟನೆಗಳು ಇಲ್ಲಿನ ಜನರನ್ನು ಆತಂಕಕ್ಕೆ ದೂಡಿವೆ.

ಇದು ಕೇವಲ ಐದಾರು ಬಡಾವಣೆಗಳ ಕಥೆಯಲ್ಲ. ನಗರದ ಎಲ್ಲ ಬಡಾವಣೆಗಳಲ್ಲೂ ಬೀದಿ ನಾಯಿಗಳದ್ದೇ ಕಾರುಬಾರು. 2021ರಲ್ಲಿ ಹಿರಿಯರು–ಕಿರಿಯರು, ಮಹಿಳೆಯರು–ಪುರುಷರು ಸೇರಿ ಸಾವಿರಾರು ಮಂದಿಯನ್ನು ಕಚ್ಚಿ ಗಾಯಗೊಳಿಸಿವೆ. ಬೀದಿಗಳಲ್ಲಿ, ಮನೆಯ ಮುಂಭಾಗ ಸದಾ ಇರುತ್ತವೆ. 4ರಿಂದ 6 ವರ್ಷದೊಳಗಿನ ಮಕ್ಕಳು ಆಟವಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಂತಹ ಸಂದರ್ಭದಲ್ಲಿ ಸಾರ್ವಜನಿಕರು ನಾಯಿಗಳನ್ನು ಓಡಿಸಿ ಪುಟಾಣಿಗಳನ್ನು ರಕ್ಷಿಸಿದ್ದಾರೆ. ಕೆಲವೊಮ್ಮೆ ನಾಗರಿಕರ ಆಕ್ರೋಶ ಕಟ್ಟೆಯೊಡೆದು ನಾಯಿಗಳನ್ನು ಕೊಂದೇ ಬಿಡಬೇಕು ಎಂಬ ಹಂತವೂ ತಲುಪಿದ್ದು ಇದೆ.

ಹಳೆ ಧರ್ಮಶಾಲಾ ರಸ್ತೆ, ಬುದ್ಧನಗರ, ಮುನ್ಸಿಪಲ್ ಕಾಲೊನಿ, ಫಿಲ್ಟರ್ ಹೌಸ್ ರಸ್ತೆ, ಕೋಟೆ ರಸ್ತೆ, ಸಿ.ಕೆ. ಪುರ ಬಡಾವಣೆ, ಐಯುಡಿಪಿ ಬಡಾವಣೆ ಸೇರಿ ಕೊಳೆಗೇರಿ ಪ್ರದೇಶ, ಖಾಲಿ ನಿವೇಶನ ಹಾಗೂ ಮೋರಿಗಳು ಹೆಚ್ಚಾಗಿರುವ ಪ್ರದೇಶದ ನಿವಾಸಿಗಳ ನಿದ್ದೆಗೆಡಿಸಿವೆ. ಗುಂಪಾಗಿ ಓಡಾಡುವ ನಾಯಿಗಳು ಹೆಚ್ಚಾಗಿ ಮಕ್ಕಳು, ಮಹಿಳೆಯರು ಹಾಗೂ ವೃದ್ಧರ ಮೇಲೆ ದಾಳಿ ನಡೆಸಿ, ಕಚ್ಚಿ ಗಾಯಗೊಳಿಸುತ್ತಿವೆ.

ನಾಯಿಗಳು ಮಧ್ಯರಾತ್ರಿ ಬೊಗಳುವ ಕಾರಣ ಅನೇಕ ನಾಗರಿಕರು ನೆಮ್ಮದಿಯಿಂದ ನಿದ್ದೆ ಮಾಡದಂತಹ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಹಲವರ ಮನೆಯ ಕಾಂಪೌಂಡ್‌ ಮುಂಭಾಗವೇ ಮಲಗಿರುತ್ತವೆ. ಒಮ್ಮೊಮ್ಮೆ ಗೋಡೆ ಹಾರಿ ಕಾಂಪೌಂಡ್‌ ಒಳಗೆ ಮಲ, ಮೂತ್ರ ವಿಸರ್ಜಿಸಿ ಗಲೀಜು ಮಾಡುತ್ತವೆ. ರಾತ್ರಿ ವೇಳೆ ಒಂದು ಬೀದಿಯಿಂದ ಮತ್ತೊಂದು ಬೀದಿಗೆ ಗುಂಪು ಕಟ್ಟಿಕೊಂಡು ಬರುವ ನಾಯಿಗಳು ಹಂದಿ, ಜಾನುವಾರನ್ನು ಅಟ್ಟಾಡಿಸಿವೆ. ಆಹಾರ ಹುಡುಕಿಕೊಂಡು ನಗರಕ್ಕೆ ಬರುವ ಮಂಗಗಳ ಮೇಲೂ ದಾಳಿ ನಡೆಸಿವೆ.

ಇನ್ನು ಇಲ್ಲಿನ ಕೆಲ ರಸ್ತೆಗಳಲ್ಲಿರುವ ಪಾಳು ಕಟ್ಟಡಗಳು ಬೀದಿ ನಾಯಿಗಳಿಗೆ ಆಶ್ರಯ ತಾಣಗಳಾಗಿವೆ.ಗುಂಪು ಗುಂಪಾಗಿ ಸಾಗುವುದರಿಂದವಾಹನ ಸವಾರರಿಗೂ ಕಿರಿಕಿರಿಯಾಗುತ್ತಿದೆ.ಇದರಿಂದ ನಗರದಲ್ಲಿ ಸಂಚರಿಸುವವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ವಾಹನಕ್ಕೆ ಅಡ್ಡವಾದಾಗ ತಪ್ಪಿಸಲು ಹೋಗಿ ಸವಾರರು ಕೈಕಾಲು ಪೆಟ್ಟು ಮಾಡಿಕೊಂಡಿದ್ದಾರೆ.

ಶಸ್ತ್ರಚಿಕಿತ್ಸೆಗೆ ಸಾರ್ವಜನಿಕರ ಒತ್ತಾಯ
ನಾಯಿಗಳ ನಿಯಂತ್ರಣಕ್ಕೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಬೇರೆಡೆಗೆ ಸಾಗಿಸುವಂತೆ ಅನೇಕ ಬಡಾವಣೆ ನಿವಾಸಿಗಳು ಒತ್ತಾಯಿಸುತ್ತಿದ್ದರೂ ಇದಕ್ಕೆ ಅವಕಾಶ ಇಲ್ಲ ಎಂಬ ಸಿದ್ಧ ಉತ್ತರ ನೀಡುತ್ತಾರೆ. ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮಾತ್ರ ಈ ವಿಷಯದಲ್ಲಿ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ಬೀದಿ ನಾಯಿಗಳ ದಾಳಿ ಹೆಚ್ಚಾಗುತ್ತಿವೆ. ಒಂಟಿಯಾಗಿ ಸಂಚರಿಸಲು ಭಯಪಡುವ ವಾತಾವರಣ ನಿರ್ಮಾಣವಾಗುತ್ತಿದೆ. ಅವುಗಳ ನಿಯಂತ್ರಣಕ್ಕೆ ಸ್ಥಳೀಯ ಸಂಸ್ಥೆಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ, ಜನರ ಮೇಲೆ ದಾಳಿ ನಡೆಸುತ್ತಿವೆ. ಇದು ಹೀಗೆ ಮುಂದುವರಿದರೆ ಜನರು ನಾಯಿಗಳ ದಾಳಿಗೆ ಒಳಗಾಗುವುದನ್ನು ತಡೆಯಲು ಎಂದಿಗೂ ಸಾಧ್ಯವಿಲ್ಲ ಎಂದು ನಾಗರಿಕರು ಕಳವಳ ಹೊರಹಾಕಿದ್ದಾರೆ.

ಹಂದಿಗಳ ಹಾವಳಿಯೂ ತಪ್ಪಿಲ್ಲ
ರಸ್ತೆಗಳಲ್ಲಿ ಗುಂಪಿನೊಂದಿಗೆ ಜೋರಾಗಿ ಓಡೋಡಿ ಹೋಗುವ ಹಂದಿಗಳಿಂದಲೂ ದ್ವಿಚಕ್ರ ವಾಹನ ಸವಾರರು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಈ ಹಾವಳಿಯೂ ಜಿಲ್ಲೆಯಲ್ಲಿ ತಪ್ಪಿಲ್ಲ.

ಚಿತ್ರದುರ್ಗ ನಗರದಲ್ಲಿ ಹೀರೊ ದ್ವಿಚಕ್ರ ವಾಹನ ಷೋ ರೂಂ ಹಿಂಭಾಗ, ನ್ಯಾಯಾಲಯ ಸಂಕೀರ್ಣ ಹಿಂಭಾಗ, ನವೀನ್‌ ರೀಜೆನ್ಸಿ ಹೋಟೆಲ್ ಸಮೀಪ, ಜೋಗಿಮಟ್ಟಿ ರಸ್ತೆ ಹಾಗೂ ಬೆಟ್ಟದ ಕೊಳೆಗೇರಿ ಪ್ರದೇಶ ಸೇರಿ ಪಾಳು ಬಿದ್ದ ಸ್ಥಳಗಳಲ್ಲಿ ಹಂದಿಗಳು ಹೆಚ್ಚಾಗಿವೆ. ಕೊಳೆಗೇರಿಗಳು ವಾಸ ಸ್ಥಳವಾಗಿವೆ.

ಮುಸುರೆ ಚೆಲ್ಲುವ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ನಗರಸಭೆ ಕಠಿಣ ಎಚ್ಚರಿಕೆ ನೀಡಿದಾಗ ಕರೆದೊಯ್ಯುವ ಮಾಲೀಕರು ಮತ್ತೆ ಯಥಾ ಸ್ಥಳಗಳಿಗೆ ಬಿಟ್ಟು ಹೋಗುವುದು ನಿಂತಿಲ್ಲ. ಸಾಂಕ್ರಾಮಿಕ ರೋಗದ ಭೀತಿ ಹಲವರನ್ನು ಕಾಡುತ್ತಿದೆ.

‘2022ರಲ್ಲಿ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲು ಚಿತ್ರದುರ್ಗ ನಗರಸಭೆ ನಿರ್ಧರಿಸಿದೆ. ಅದಕ್ಕಾಗಿ ಸಾಮಾನ್ಯ ಸಭೆಯಲ್ಲಿ ಎಲ್ಲಾ ಸದಸ್ಯರ ಒಪ್ಪಿಗೆ ಪಡೆಯಲಿದೆ. ನಗರ ವ್ಯಾಪ್ತಿಯಲ್ಲಿ ಹಂದಿ ಬಿಟ್ಟರೆ, ಹೆಚ್ಚು ದಂಡ ವಿಧಿಸುವುದರ ಜತೆಗೆ ಹಂದಿಗಳನ್ನು ನಗರದಿಂದಾಚೆ ಸಾಕುವಂತೆ ಮಾಲೀಕರಿಗೆ ಕಡೆ ಎಚ್ಚರಿಕೆ ನೀಡಲಾಗುವುದು’ ಎಂದು ನಗರಸಭೆ ಪೌರಾಯುಕ್ತ ಜೆ.ಟಿ. ಹನುಮಂತರಾಜು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬೀಡಾಡಿ ದನಗಳ ಹಾವಳಿ: ಸಂಚಾರಕ್ಕೆ ಕಿರಿಕಿರಿ
-ಶಿವಗಂಗಾ ಚಿತ್ತಯ್ಯ

ಚಳ್ಳಕೆರೆ:ನಗರದಲ್ಲಿ ದಿನೇ ದಿನೇ ಬೀಡಾಡಿ ದನಗಳ ಹಾವಳಿ ಹೆಚ್ಚುತ್ತಿದೆ. ಹೀಗಾಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಅಲ್ಲದೆ, ಪಾದಚಾರಿಗಳ ಓಡಾಟಕ್ಕೂ ತೀವ್ರ ತೊಂದರೆಯಾಗುತ್ತಿದೆ.

ಕೋವಿಡ್ ಪರಿಸ್ಥಿತಿಯ ನೆಪದಲ್ಲಿ ನಗರದ ಮುಖ್ಯರಸ್ತೆ ಬದಿ ಎಲ್ಲೆಂದರಲ್ಲೇ ಹಣ್ಣು, ಸೊಪ್ಪು-ತರಕಾರಿ ಮಾರಾಟ 2 ವರ್ಷದಿಂದ ನಡೆಯುತ್ತಿದೆ. ವ್ಯಾಪಾರಸ್ಥರು ನಿತ್ಯ ಕೊಳೆತ ಹಣ್ಣು, ತರಕಾರಿಯನ್ನು ರಸ್ತೆ ಬದಿಗೆ ಎಸೆಯುತ್ತಾರೆ. ಸಂಜೆ ವೇಳೆ ಪಾದಚಾರಿ ಮಾರ್ಗದ ಮೇಲೆಯೇ ಗೋಬಿ, ಪಾನಿಪೂರಿ ಹಾಗೂ ಸಂಚಾರಿ ತಿಂಡಿ–ಗೂಡಂಗಡಿಗಳನ್ನು ಇಟ್ಟು ಕೊಂಡ ಮಾಲೀಕರು, ಮುಸುರೆ ನೀರನ್ನು ರಸ್ತೆಗೆ ಚೆಲ್ಲುತ್ತಾರೆ. ಇವು ಬೀಡಾಡಿ ದನಗಳಿಗೆ ಆಹಾರವಾಗಿವೆ.

ನಗರದ ಪಾವಗಡ ಮಾರ್ಗದ ಮುಖ್ಯರಸ್ತೆ, ಬಿ.ಎಂ.ಸರ್ಕಾರಿ ಶಾಲೆ ಮುಂಭಾಗ, ವಾಲ್ಮೀಕಿ ವೃತ್ತ, ಗಾಂಧಿನಗರದ ಸಂಗೊಳ್ಳಿರಾಯಣ್ಣ ರಸ್ತೆ, ಸೋಮಗುದ್ದು ರಸ್ತೆ, ನ್ಯಾಯಾಲಯ ಸಮೀಪ, ಪ್ರವಾಸಿ ಮಂದಿರದ ಮುಂಭಾಗದ ರಸ್ತೆ ಮೇಲೆ ಬಿದ್ದ ಆಹಾರ ಪದಾರ್ಥ ತಿನ್ನಲು ನಿತ್ಯ ಹಿಂಡು ಹಿಂಡಾಗಿ ರಸ್ತೆ ಮೇಲೆ ನಿಂತಿರುತ್ತವೆ. ವಾಹನಗಳ ಚಾಲಕರು ಎಷ್ಟೇ ಹಾರನ್ ಮಾಡಿದರೂ ನಡುರಸ್ತೆ ಬಿಟ್ಟು ದನಗಳು ಕದಲುವುದಿಲ್ಲ.

ಮೇವಿನ ಕೊರತೆ ಮತ್ತು ದನಗಳ ಸಾಕಾಣೆಯ ನಿರ್ಲಕ್ಷ್ಯತೆಯಿಂದಾಗಿ ಮಾಲೀಕರು ತಮ್ಮ ದನಗಳನ್ನು ಮನೆಯ ಮುಂದೆ ಎಂದೂ ಕಟ್ಟಿಹಾಕಿಕೊಳ್ಳುವುದಿಲ್ಲ. ಹೀಗಾಗಿ ನಗರದಲ್ಲಿ ಸಿಗುವ ಕೊಳೆತ ಹಣ್ಣ, ತರಕಾರಿ ತಿಂದು ಬೀದಿಯಲ್ಲೇ ಮಲಗುವುದು ಅವುಗಳಿಗೆ ಅಭ್ಯಾಸವಾಗಿ ಬಿಟ್ಟಿದೆ. ದನಗಳ ಹಾವಳಿಗೆ ಸಿಲುಕಿ ಆಟೊ ಹಾಗೂ ದ್ವಿಚಕ್ರ ವಾಹನಗಳು ಉರುಳಿ ಬಿದ್ದು ಪ್ರಯಾಣಿಕರು ಕೈ-ಕಾಲು ಮುರಿದುಕೊಂಡಿರುವ ಪ್ರಕರಣಗಳು ವರದಿಯಾಗಿವೆ.

‘ಹೆಚ್ಚುತ್ತಿರುವ ಬೀಡಾಡಿ ದನಗಳನ್ನು ಪೋಲಿಸ್ ಇಲಾಖೆಯ ಸಹಕಾರದಲ್ಲಿ ಅವುಗಳನ್ನು ಕೂಡಿಹಾಕಬೇಕು. ಇಲ್ಲವೇ ಗೋಶಾಲೆಗೆ ಬಿಟ್ಟು ಬರಬೇಕು. ದನಗಳನ್ನು ಬಿಡದಂತೆ ಮಾಲೀಕರಿಗೆ ಎಚ್ಚರಿಕೆ ನೀಡಬೇಕು’ ಎಂದು ಆರ್. ಪ್ರಸನ್ನಕುಮಾರ್ ನಗರಸಭೆಗೆ ಮನವಿ ಮಾಡಿದ್ದಾರೆ.

*

ಸಾಯಿಸಲು, ಸ್ಥಳಾಂತರಿಸಲು ಅವಕಾಶವಿಲ್ಲ. ಹೀಗಾಗಿ ಸುಮಾರು 2,200 ಬೀದಿ ನಾಯಿಗಳಿಗೆ ಆರು ತಿಂಗಳ ಹಿಂದೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿದ್ದೇವೆ. ಇನ್ನುಳಿದ 2 ಸಾವಿರ ನಾಯಿಗಳಿಗೂ 2022ರ ಜನವರಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಲು <br/>ಕ್ರಮ ಕೈಗೊಳ್ಳುತ್ತೇವೆ.
-ಜೆ.ಟಿ. ಹನುಮಂತರಾಜು, ನಗರಸಭೆ ಪೌರಾಯುಕ್ತ, ಚಿತ್ರದುರ್ಗ

*

ನಾಯಿಯಿಂದ ಕಚ್ಚಿಸಿಕೊಂಡವರಿಗೆ ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಅದಕ್ಕೆ ಸಂಬಂಧಿಸಿದ ಔಷಧ ದಾಸ್ತಾನು ಸಮಸ್ಯೆ ಇಲ್ಲ. ಮಕ್ಕಳನ್ನು ಆಟವಾಡಲು ಹೊರಗಡೆ ಬಿಟ್ಟಾಗ ಪೋಷಕರು ತುಂಬಾ ಎಚ್ಚರಿಕೆ ವಹಿಸಬೇಕು.
-ಡಾ.ಆರ್. ರಂಗನಾಥ್, ಜಿಲ್ಲಾ ಆರೋಗ್ಯಾಧಿಕಾರಿ

*

ಹಳ್ಳಿಗಳಲ್ಲೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಸಣ್ಣಪ್ರಾಣಿಗಳನ್ನು ರಕ್ಷಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಸ್ಥಳೀಯ ಸಂಸ್ಥೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ತೊಂದರೆ ತಪ್ಪಿದ್ದಲ್ಲ.
-ಮಂಜುನಾಥ ಭಾಗವತ್, ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT