ಭಾನುವಾರ, ಜನವರಿ 19, 2020
20 °C

ಪೌರತ್ವ ತಿದ್ದುಪಡಿ ಸಂವಿಧಾನ ಬಾಹಿರ: ಸ್ವರಾಜ್‌ ಇಂಡಿಯಾ ಯಾದವರೆಡ್ಡಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಪೌರತ್ವ ಕಾಯ್ದೆಗೆ ಧರ್ಮದ ಆಧಾರದಲ್ಲಿ ತಿದ್ದುಪಡಿ ತರುತ್ತಿರುವ ಕೇಂದ್ರ ಸರ್ಕಾರದ ನಡೆ ಸಂವಿಧಾನ ಬಾಹಿರ. ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದು ಸ್ವರಾಜ್‌ ಇಂಡಿಯಾ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಜೆ.ಯಾದವರೆಡ್ಡಿ ಆರೋಪಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಿದ್ದುಪಡಿ ಕಾಯ್ದೆ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಧರ್ಮದ ಹೆಸರಿನಲ್ಲಿ ದೇಶ ವಿಭಜನೆ ಮಾಡುವ ಹುನ್ನಾರ ಅಡಗಿದೆ. ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಲಿದೆ. ಸರ್ಕಾರ ಪ್ರಜಾತಾಂತ್ರಿಕ ಮೌಲ್ಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು. ಸಾರ್ವಜನಿಕ ಅಭಿಪ್ರಾಯಗಳಿಗೆ ಸರ್ಕಾರ ಮನ್ನಣೆ ನೀಡಬೇಕು’ ಎಂದು ಒತ್ತಾಯಿಸಿದರು.

‘ಸಂವಿಧಾನದ ರಚನೆಯ ಸಂದರ್ಭದಲ್ಲಿ ಪೌರತ್ವಕ್ಕೆ ಸಂಬಂಧಿಸಿದ ಚರ್ಚೆ ನಡೆದಿದೆ. ಸಂವಿಧಾನ ರಚನಾ ಸಮಿತಿ ಸ್ಪಷ್ಟ ನಿರ್ಧಾರ ತೆಗೆದುಕೊಂಡಿದೆ. ಸಂವಿಧಾನ ಜಾರಿಗೆ ಬರುವುದಕ್ಕೂ ಐದು ವರ್ಷದ ಹಿಂದಿನಿಂದ ವಾಸವಿರುವ ಪ್ರತಿಯೊಬ್ಬರಿಗೂ ಪೌರತ್ವ ನೀಡಲಾಗಿದೆ. ದೇಶದಲ್ಲಿ ಜನಿಸಿದ ಪ್ರತಿಯೊಬ್ಬರು ಪೌರತ್ವ ಪಡೆಯಲು ಅರ್ಹತೆ ಹೊಂದಿದ್ದಾರೆ. ಸಂವಿಧಾನದ ಈ ಆಶಯವನ್ನು ಸರ್ಕಾರ ಗಾಳಿಗೆ ತೂರಲು ಮುಂದಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಭಾರತ ಧರ್ಮ ನಿರಪೇಕ್ಷಿತ ರಾಷ್ಟ್ರ. ಜಾತಿ, ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡಲು ಅವಕಾಶ ಇಲ್ಲ. ಸಂವಿಧಾನದಲ್ಲಿ ಇಲ್ಲದ ‘ದಮನಿತ ಹಿಂದು, ದಮನಿತ ಬೌದ್ದ ಧರ್ಮೀಯ’ ಎಂಬ ಪದ ಬಳಕೆ ಮಾಡಲಾಗಿದೆ. ಪೌರತ್ವ ಕಾಯ್ದೆಯಿಂದ ಮುಸ್ಲಿಂ ಸಮುದಾಯವನ್ನು ಮಾತ್ರ ಹೊರಗೆ ಇಡುವುದು ತಪ್ಪು. ತಿದ್ದುಪಡಿ ಕಾಯ್ದೆಯ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತಿರುವ ಅನುಮಾನವಿದೆ’ ಎಂದು ಕಿಡಿಕಾರಿದರು.

‘ಅಕ್ರಮ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನುಗಳಿವೆ. ಅಂತಹ ವಲಸಿಗರಿಗೆ ಶಿಕ್ಷೆ ವಿಧಿಸಲು ಪಕ್ಷಕ್ಕೆ ತಕರಾರು ಇಲ್ಲ. ಆದರೆ, ನಿರ್ದಿಷ್ಟ ಸಮುದಾಯವನ್ನು ಆರೋಪಿಗಳಂತೆ ಬಿಂಬಿಸುವುದು ತಪ್ಪು. ಸರ್ವಧರ್ಮ ಸಮನ್ವಯತೆಗೆ ಭಾರತ ಹೆಸರುವಾಸಿಯಾಗಿದೆ. ತಾರತಮ್ಯ ರಹಿತವಾದ ಹಕ್ಕುಗಳು ಎಲ್ಲರಿಗೂ ಸಿಗಬೇಕು’ ಎಂದು ಆಗ್ರಹಿಸಿದರು.

‘ಅಸ್ಸಾಂ ರಾಜ್ಯದಲ್ಲಿ ಹಿಂದೂಗಳು ಸೇರಿದಂತೆ ಸುಮಾರು 20 ಲಕ್ಷ ಜನರನ್ನು ವಲಸಿಗರೆಂದು ಹೆಸರಿಸಲಾಗಿದೆ. ಈಶಾನ್ಯ ಭಾರತದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ದೇಶವನ್ನು ಉನ್ಮಾದಗೊಳಿಸುವ ಹುನ್ನಾರ ಬಿಟ್ಟು ತಜ್ಞರ ಸಮಿತಿ ರಚನೆ ಮಾಡಿ. ದೇಶದಲ್ಲಿ ಅಧ್ಯಯನ ನಡೆಸಿ ನೀಡಿದ ವರದಿಯ ಆಧಾರದ ಮೇರೆಗೆ ಸರ್ಕಾರ ಮುಂದಡಿ ಇಡುವುದು ಸೂಕ್ತ’ ಎಂದು ಸಲಹೆ ನೀಡಿದರು.

‘ವಲಸಿಗರ ಹೆಸರಿನಲ್ಲಿ ನಿರ್ದಿಷ್ಟ ಸಮುದಾಯವನ್ನು ದೇಶದಿಂದ ಹೊರಗೆ ಹಾಕುವುದು ಸರಿಯಲ್ಲ ಎಂದು ವಿಶ್ವಸಂಸ್ಥೆ ಅಭಿಪ್ರಾಯಪಟ್ಟಿದೆ. ಮ್ಯಾನ್ಮಾರ್‌ ದೇಶದಲ್ಲಿ ರೋಹಿಂಗ್ಯಾ ಮುಸ್ಲಿಮರು ಅನುಭವಿಸುತ್ತಿರುವ ಸಂಕಟವನ್ನು ವಿಶ್ವ ನೋಡಿದೆ. ಇಂತಹ ಪರಿಸ್ಥಿತಿ ಭಾರತದಲ್ಲಿ ನಿರ್ಮಾಣವಾಗುವುದು ಬೇಡ’ ಎಂದು ಹೇಳಿದರು. ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಧನಂಜಯ ಇದ್ದರು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು