ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿ, ವಾತ್ಸಲ್ಯ ಬೇಕೆಂದರೆ ಕನ್ನಡ ಕಲಿಸಿ: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

’ದೇವಾಲಯಕ್ಕಿಂತ ಗ್ರಂಥಾಲಯ ಮುಖ್ಯ‘
Last Updated 31 ಜನವರಿ 2019, 14:53 IST
ಅಕ್ಷರ ಗಾತ್ರ

ಹೊಳಲ್ಕೆರೆ: ಇಂಗ್ಲಿಷ್ ಕಲಿತ ಮಕ್ಕಳೇ ಹೆಚ್ಚಾಗಿ ತಂದೆ, ತಾಯಿಯನ್ನು ಮರೆಯುತ್ತಾರೆ. ಮಕ್ಕಳ ಪ್ರೀತಿ, ವಾತ್ಸಲ್ಯ ಬೇಕು ಎಂದರೆ ಅವರಿಗೆ ಕನ್ನಡ ಕಲಿಸಿ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಶಿವಪುರದಲ್ಲಿ ಗುರುವಾರ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ಅನಕ್ಷರಸ್ಥ ಪೋಷಕರಿಗೂ ಮಕ್ಕಳು ಇಂಗ್ಲಿಷ್ ಕಲಿಯಬೇಕು ಎಂಬ ಭ್ರಮೆ ಇದೆ. ಮಕ್ಕಳು ಅಪ್ಪ, ಅಮ್ಮ ಎಂದರೆ ಅವರಿಗೂ ಸಿಟ್ಟು ಬರುತ್ತದೆ. ನಾವು ಮಕ್ಕಳಿಗೆ ಒತ್ತಾಯಪೂರ್ವಕವಾಗಿ ಇಂಗ್ಲಿಷ್ ಹೇರುತ್ತಿದ್ದೇವೆ. ಇಂಗ್ಲಿಷ್‌ ವ್ಯಾಮೋಹಕ್ಕೆ ನಮ್ಮ ಮಕ್ಕಳನ್ನು ಮಾರಿಕೊಳ್ಳುತ್ತಿದ್ದೇವೆ. ಇಂಗ್ಲಿಷ್ ಕಲಿತರೆ ಮಾತ್ರ ದೊಡ್ಡ ವ್ಯಕ್ತಿಗಳಾಗುತ್ತಾರೆ ಎಂಬುದು ತಪ್ಪು ಕಲ್ಪನೆ. ಕನ್ನಡದಲ್ಲಿ ಓದಿದವರೂ ದೊಡ್ಡ ಸಾಧನೆ ಮಾಡಿದ್ದಾರೆ. ಇಂಗ್ಲಿಷ್ ಕಲಿತವರು ಕೆಲಸವೂ ಸಿಗದೆ, ಕಷ್ಟಪಟ್ಟು ದುಡಿಯಲೂ ಆಗದೆ ತ್ರಿಶಂಕು ಸ್ಥಿತಿ ತಲುಪುತ್ತಾರೆ. ಮಾತೃಭಾಷೆಯಲ್ಲಿ ಕಲಿತವರು ಜೀವನದಲ್ಲಿ ಯಶಸ್ಸು ಗಳಿಸುತ್ತಾರೆ’ ಎಂದರು.

ಸರ್ಕಾರ ಕನ್ನಡ ಪ್ರೇಮವನ್ನೇ ಮರೆತಂತಿದೆ. ರಾಜ್ಯದಲ್ಲಿ ಒಂದು ಸಾವಿರ ಇಂಗ್ಲಿಷ್ ಶಾಲೆಗಳನ್ನು ಆರಂಭಿಸುವುದಾಗಿ ಹೇಳಿದೆ. ಸಾವಿರ ಇಂಗ್ಲಿಷ್ ಶಾಲೆಗಳು ಆರಂಭವಾದರೆ, ಹತ್ತು ಸಾವಿರ ಕನ್ನಡ ಶಾಲೆಗಳು ಮುಚ್ಚುತ್ತವೆ. ಇರುವ ಶಾಲೆಗಳಿಗೇ ಸುಸಜ್ಜಿತ ಕಟ್ಟಡ, ಶಿಕ್ಷಕರು, ಶೌಚಾಲಯ ಮತ್ತಿತರ ಮೂಲ ಸೌಕರ್ಯ ನೀಡಲಿ. ಧರ್ಮ ಎಂದರೆ ದೇವಾಲಯಕ್ಕೆ ಹೋಗುವುದಲ್ಲ. ದೇಶದಲ್ಲಿ ದೇವಾಲಯಗಳು ಹೆಚ್ಚಾಗಿ, ದೇವರನ್ನು ಪೂಜುವವರೇ ಇಲ್ಲದಂತಾಗಿದ್ದಾರೆ. ಅವು ಜೂಜು, ಅಕ್ರಮ ಚಟುವಟಿಕೆ ನಡೆಸುವ ತಾಣಗಳಾಗುತ್ತಿವೆ. ದೇವಾಲಯದ ಬದಲಿಗೆ ಗ್ರಂಥಾಲಯಗಳು ನಿರ್ಮಾಣ ಆಗಬೇಕು ಎಂದು ಶ್ರೀಗಳು ಹೇಳಿದರು.

ಕವಿ ಚಂದ್ರಶೇಖರ ತಾಳ್ಯ, ‘ನಾವು ನಿರಭಿಮಾನಿಗಳಾಗುತ್ತಿದ್ದೇವೆ. ನಮ್ಮ ಪರಂಪರೆ ಶ್ರೀಮಂತವಾದರೂ, ನಿರಾಶಾವಾದ ನಮ್ಮನ್ನು ಆವರಿಸಿದೆ. ಪೋಷಕರಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚಿದೆ. ಅವರು ಮಕ್ಕಳು ಕನ್ನಡ ಕಲಿತರೆ ಏನೂ ಪ್ರಯೋಜನ ಇಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ನಮ್ಮ ಅಡುಗೆ ಮನೆಯನ್ನು ಇಂಗ್ಲಿಷ್ ಆವರಿಸಿದೆ. ಆರ್ಥಿಕ ಚಿಂತನೆ ಹೋಗಿ ಹಣವನ್ನು ಮುಕ್ಕುವ ಸಂಸ್ಕೃತಿ ಬಂದಿದೆ’ ಎಂದು ವಿಷಾದಿಸಿದರು.

ಶಾಸಕ ಚಂದ್ರಪ್ಪಗೆ ಶಬ್ಬಾಸ್ ಗಿರಿ:

‘ಶಾಸಕ ಎಂ.ಚಂದ್ರಪ್ಪ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ರಾಜ್ಯದಲ್ಲಿ ಅವರ ಸರ್ಕಾರ ಇಲ್ಲದಿದ್ದರೂ ಹೆಚ್ಚು ಅನುದಾನ ತರುವುದಾಗಿ ಹೇಳಿದ್ದಾರೆ. ಕ್ಷೇತ್ರಕ್ಕೆ ಅನುದಾನ ಕೇಳುವ ಅಧಿಕಾರ ಎಲ್ಲಾ ಶಾಸಕರಿಗೂ ಇದೆ. ಮಗು ಅತ್ತರೆ ಮಾತ್ರ ತಾಯಿ ಹಾಲು ಕೊಡುತ್ತಾಳೆ. ಉದಾಸೀನ ಮಾಡಿದರೆ ಯಾರೂ ಕರೆದು ಅನುದಾನ ನೀಡುವುದಿಲ್ಲ. ಕೇವಲ ಒಂದು ವಾರದಲ್ಲಿ ಗ್ರಾಮದಲ್ಲಿ ₹ 1 ಕೋಟಿ ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಿಸಿರುವುದೇ ಅವರ ಬದ್ಧತೆಗೆ ಸಾಕ್ಷಿ’ ಎಂದು ಸಾಣೇಹಳ್ಳಿ ಶ್ರೀ ಪ್ರಶಂಸಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT