ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿರಿಗೆರೆ | ಕೆಸರುಮಯ ರಸ್ತೆಯಲ್ಲಿ ಸಾಗುವುದೇ ಸವಾಲು

ಚುನಾವಣೆ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದ ಸಿದ್ದಾಪುರ ಗ್ರಾಮಸ್ಥರು
ರಾಜ ಸಿರಿಗೆರೆ
Published : 4 ಆಗಸ್ಟ್ 2024, 6:47 IST
Last Updated : 4 ಆಗಸ್ಟ್ 2024, 6:47 IST
ಫಾಲೋ ಮಾಡಿ
Comments

ಸಿರಿಗೆರೆ: ರಾಜ್ಯದ ಪ್ರಮುಖ ಧಾರ್ಮಿಕ ಮತ್ತು ಶೈಕ್ಷಣಿಕ ಕೇಂದ್ರಗಳಲ್ಲಿ ಒಂದಾಗಿರುವ ಸಿರಿಗೆರೆಯಿಂದ ಕೂಗಳತೆ ದೂರದಲ್ಲಿರುವ ಗ್ರಾಮ ಸಿದ್ದಾಪುರ. ಈ ಊರಿಗೆ ಸಮರ್ಪಕ ರಸ್ತೆಗಳೇ ಇಲ್ಲ. ಜಿಲ್ಲಾ ಮುಖ್ಯರಸ್ತೆಗೆ ಬಂದಿಳಿಯುವ ಜನರು ಅಲ್ಲಿಂದ ಅರ್ಧ ಕಿ.ಮೀ. ದೂರದಲ್ಲಿರುವ ಈ ಊರಿಗೆ ಹೋಗಲು ದಾರಿ ಯಾವುದೆಂದು ಹುಡುಕುವ ಪರಿಸ್ಥಿತಿ ಇದೆ.

ಗ್ರಾಮಕ್ಕೆ ಹೋಗಲು ಮೂರು ರಸ್ತೆಗಳಿವೆ. 15 ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಅವು ಸಂಪೂರ್ಣ ಹಾಳಾಗಿವೆ. ದಶಕಗಳ ಹಿಂದೆ ಹಾಕಿದ್ದ ಡಾಂಬರು ಕಿತ್ತು ಹೋಗಿ ರಸ್ತೆಗಳು ಕೆಸರು ಗದ್ದೆಗಳಂತಾಗಿವೆ. ಒಂದು ಹೆಜ್ಜೆ ತೆಗೆದು ಮತ್ತೊಂದು ಹೆಜ್ಜೆ ಇಡಲು ಹೋದರೆ ಜಾರಿ ಬೀಳುವ ಸ್ಥಿತಿ ಇದೆ. ಹಲವು ಮಕ್ಕಳು ಹೀಗೆ ಬಿದ್ದು ಗಾಯಗೊಂಡಿರುವ ಉದಾಹರಣೆಗಳೂ ಇವೆ. 

ಸಿದ್ದಾಪುರ ಗ್ರಾಮದಲ್ಲಿ 150ಕ್ಕಿಂತ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಇವರೆಲ್ಲಾ ಕೃಷಿಯನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಇಲ್ಲಿನ ಜನ ತೋಟ-ಜಮೀನುಗಳಿಗೆ, ಮಕ್ಕಳು ಶಾಲೆಗಳಿಗೆ ಹೋಗಲು ಇರುವುದು ಒಂದೇ ದಾರಿ. ಆ ಮಾರ್ಗವೂ ಹದಗೆಟ್ಟಿರುವ ಕಾರಣ ‌‌ಮಕ್ಕಳು ಶಾಲೆಯಿಂದ ವಿಮುಖರಾಗುವಂತಾಗಿದೆ.

ರಸ್ತೆ ಬದಿಯಲ್ಲಿ ಹಲವು ಜಾತಿಯ ಗಿಡಗಳು ಬೆಳೆದಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸಲು ಕಷ್ಟಪಡುವಂತಾಗಿದೆ.  ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲು ಊರೊಳಗೆ ಬರುತ್ತಿದ್ದ ಶಾಲಾ ಬಸ್‌ಗಳೂ ಈಗ ಈ ರಸ್ತೆಗಳಿಗೆ ಇಳಿಯಲು ಹಿಂದೇಟು ಹಾಕುತ್ತಿವೆ. ನಿತ್ಯದ ಕೆಲಸಕ್ಕೆ ಓಡಾಡುವ ಮಹಿಳೆಯರು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ತೋಟಗಳಿಗೆ ಪೈಪ್‌ಲೈನ್ ಅಳವಡಿಸಲು ರಸ್ತೆಗಳನ್ನು ಅಗೆದಿರುವ ಕೆಲ ರೈತರು ಅವುಗಳನ್ನು ಸಮರ್ಪಕವಾಗಿ ಮುಚ್ಚಿಲ್ಲ. ಇದರಿಂದ ರಾತ್ರಿ ವೇಳೆ ಓಡಾಡುವ ವಾಹನ ಚಾಲಕರು ಬಿದ್ದು ಗಾಯಗೊಂಡಿದ್ದಾರೆ. ಜಮ್ಮೇನಹಳ್ಳಿ ಗೇಟಿನಿಂದ ಮೆದಿಕೆರಿಪುರ ಗ್ರಾಮದವರೆಗೆ ಸಂಪರ್ಕ ಕಲ್ಪಿಸುವ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಓಡಾಡುವಾಗ ಪ್ರಯಾಣಿಕರು ಉಸಿರು ಬಿಗಿಹಿಡಿದಿಟ್ಟುಕೊಳ್ಳಬೇಕಾದ ಪರಿಸ್ಥಿತಿ ಇದೆ’ ಎಂದು ದೂರುತ್ತಾರೆ ಗ್ರಾಮದ ವಿರೂಪಾಕ್ಷಪ್ಪ.

ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದ ಗ್ರಾಮಸ್ಥರು:

‘ಗಣಿಬಾಧಿತ ಪ್ರದೇಶದ ವ್ಯಾಪ್ತಿಯಿಂದ ಗ್ರಾಮವನ್ನು ಹೊರಗಿಟ್ಟಿರುವುದರಿಂದ ಹಳ್ಳಿಯ ಅಭಿವೃದ್ಧಿ ನನೆಗುದಿಗೆ ಬಿದ್ದಿದೆ. ಗ್ರಾಮದಲ್ಲಿ ವಿದ್ಯುತ್‌, ನೀರು, ಚರಂಡಿ, ಶಾಲೆ ನಿರ್ವಹಣೆ ಇಲ್ಲ’ ಎಂದು ಆರೋಪಿಸಿ ಗ್ರಾಮಸ್ಥರು ಲೋಕಸಭಾ ಚುನಾವಣೆ ಬಹಿಷ್ಕರಿಸಿದ್ದರು. ಆಗ ಗ್ರಾಮಕ್ಕೆ ಬಂದಿದ್ದ ಅಧಿಕಾರಿಗಳ ಮನವೊಲಿಕೆಗೂ ಅವರು ಬಗ್ಗಿರಲಿಲ್ಲ. ಆಗ ಮಧ್ಯಪ್ರವೇಶ ಮಾಡಿದ್ದ ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮೊದಲು ಮತದಾನ ಮಾಡಿ, ನಂತರ ಗ್ರಾಮದ ಸೌಲಭ್ಯಗಳ ಕುರಿತು ಚರ್ಚೆ ಮಾಡೋಣ ಎಂದು ಭರವಸೆ ನೀಡಿದ್ದರಿಂದ ಮತದಾನ ಮಾಡಿದ್ದರು.

‘ಚುನಾವಣೆ ಮುಗಿದು ವರ್ಷ ಕಳೆಯುತ್ತಾ ಬಂದರೂ ಗಣಿಬಾಧಿತ ಪ್ರದೇಶದ ವ್ಯಾಪ್ತಿಗೆ ಈ ಗ್ರಾಮವನ್ನು ಸೇರ್ಪಡೆ ಮಾಡಿಲ್ಲ. ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕಾರ್ಯಗಳೂ ನಡೆದಿಲ್ಲ. ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆ ಈಡೇರಿಸಬೇಕು’ ಎಂದು ಗ್ರಾಮದ ನಾಗೇಂದ್ರಪ್ಪ ಒತ್ತಾಯಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT