ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೊಳಕಾಲ್ಮುರು: ಬಿಸಿಲಿನ ಝಳಕ್ಕೆ ಬಾಡುತ್ತಿವೆ ಸಸಿಗಳು

ಬಿರುಬಿಸಿಲು: ನರ್ಸರಿ ಸಸಿಗಳನ್ನು ಉಳಿಸಿಕೊಳ್ಳಲು ಹರಸಾಹಸ
Published 4 ಮೇ 2024, 8:53 IST
Last Updated 4 ಮೇ 2024, 8:53 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಈ ವರ್ಷದ ಬಿಸಿಲು ವಿವಿಧ ಕ್ಷೇತ್ರಗಳಲ್ಲಿ ತಲ್ಲಣ ಉಂಟುಮಾಡಿದ್ದು, ಕೃಷಿ ಕ್ಷೇತ್ರ ಸಾಕಷ್ಟು ನಲುಗಿದೆ. ನರ್ಸರಿಗಳಲ್ಲಿ ಬೆಳೆಸಿರುವ ತರಕಾರಿ ಸಸಿಗಳನ್ನು ಉಳಿಸಿಕೊಳ್ಳಲು ಮಾಲೀಕರು ಕಷ್ಟಪಡುತ್ತಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 5-6 ಡಿಗ್ರಿ ಸೆಲ್ಸಿಯಸ್‌ಯಷ್ಟು ಹೆಚ್ಚುವರಿ ಉಷ್ಣಾಂಶ ದಾಖಲಾಗುತ್ತಿದೆ. ಮೇ ಆರಂಭವಾದರೂ ಒಂದು ಸಾರಿಯೂ ಮಳೆ ಬಾರದ ಕಾರಣ ಝಳದ ತೀವ್ರತೆ ಹೆಚ್ಚಿದೆ. ತೋಟಗಾರಿಕೆ ಅದರಲ್ಲೂ ಟೊಮೆಟೊ ಸಸಿಗಳನ್ನು ಬೆಳೆಸುವ ಖಾಸಗಿ ನರ್ಸರಿಗಳ ಒಳಗೆ ತಾಪಮಾನ ಹೆಚ್ಚಿ ಸಸಿಗಳು ಸಾಯುತ್ತಿವೆ. ರೈತರು ಈ ಬಿಸಿಲಿಗೆ ನಾಟಿ ಮಾಡಲು ಉತ್ಸಾಹ ತೋರದ ಕಾರಣ ಇರುವ ಸಸಿಗಳು ಮಾರಾಟವಾಗುತ್ತಿಲ್ಲ ಎಂದು ನರ್ಸರಿ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

ಮೊಳಕಾಲ್ಮುರು ಹಾಗೂ ಚಳ್ಳಕೆರೆ ತಾಲ್ಲೂಕಿನಲ್ಲಿ ಟೊಮೆಟೊ, ಮೆಣಸಿನಕಾಯಿ, ಬದನೆಕಾಯಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಇದರಲ್ಲಿ ಟೊಮೆಟೊ ಬೆಳೆಯದ್ದೇ ಸಿಂಹಪಾಲು. ಅವಳಿ ತಾಲ್ಲೂಕಿನಲ್ಲಿ 400ಕ್ಕೂ ಹೆಚ್ಚು ನರ್ಸರಿಗಳು ಕಾರ್ಯನಿರ್ವಹಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಆಂಧ್ರಪ್ರದೇಶ ಮೂಲದವರು ಇಲ್ಲಿಗೆ ಬಂದು 1/2-1 ಎಕರೆ ಭೂಮಿಯನ್ನು ಲೀಸ್‌ಗೆ ಪಡೆದು ನರ್ಸರಿ ಸ್ಥಾಪಿಸುವುದು ಹೆಚ್ಚಿದೆ. ಇದರಿಂದ ಎಷ್ಟು ಸಸಿಗಳನ್ನು ಬೆಳೆಸಲಾಗುತ್ತಿದೆ, ಎಷ್ಟು ನಾಶವಾಗಿವೆ ಎಂಬುದನ್ನು ನಿಖರವಾಗಿ ಹೇಳುವುದು ಕಷ್ಟ ಎಂದು ಮಾಲೀಕ ವಿಷ್ಣು ಮಾಹಿತಿ ನೀಡಿದರು.

ಕೂಲಿ ಕಾರ್ಮಿಕರ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಸಸಿಗಳಿಗೆ ಸ್ವಲ್ಪ ತಡವಾಗಿ ನೀರು ಹಾಯಿಸಿದರೂ ಗಿಡಗಳಿಗೆ ಹಾನಿಯಾಗುವಷ್ಟು ತಾಪಮಾನ ಈ ವರ್ಷ ಕಾಡುತ್ತಿದೆ. ಅನೇಕ ನರ್ಸರಿಗಳಲ್ಲಿ ಶೇ 25-30ರಷ್ಟು ಸಸಿಗಳು ಹಾನಿಗೀಡಾಗಿವೆ. ಈಗಾಗಲೇ ಕೊಂಡುಕೊಂಡು ಹೋಗಿರುವ ಸಸಿಗಳು ಎಷ್ಟರ ಮಟ್ಟಿಗೆ ನೆಲಕ್ಕೆ ಕಚ್ಚಿಕೊಂಡಿವೆ ಎಂಬುದು ಮುಂದಿನ ದಿನಗಳಲ್ಲಿ ಟೊಮೆಟೊ ಇಳುವರಿ ಪ್ರಮಾಣ ನಿಗದಿ ಮಾಡುತ್ತದೆ. ಈಗಿನ ಸ್ಥಿತಿ ನೋಡಿದಲ್ಲಿ ಸಸಿಗಳು ನೆಲ ಕಚ್ಚುವುದು ಕಷ್ಟವಾಗಿದೆ. ಇದು ಇಳುವರಿ ಮೇಲೆ ಪ್ರಭಾವ ಬೀರಿದಲ್ಲಿ ದರ ಹೆಚ್ಚಳ ಕಟ್ಟಿಟ್ಟ ಬುತ್ತಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ತಾಪಮಾನಕ್ಕೆ ಹೆದರಿ ಮೀನಾಮೇಷ ಎಣಿಸಿ 2 ದಿನಗಳ ಹಿಂದೆ ಟೊಮೆಟೊ ಸಸಿ ನಾಟಿ ಮಾಡಿದ್ದೇವೆ. ಚಳ್ಳಕೆರೆಯ ವಿವಿಧ ನರ್ಸರಿಗಳಲ್ಲಿ ಸಸಿಗಳು ಸುಟ್ಟು ಹೋಗಿವೆ. ಕೆಲವರು ಸಸಿಗಳನ್ನು ಬೆಳೆಸಲು ಹೋಗಿಲ್ಲ. ಪ್ರತಿ ಸಾಹೋ ತಳಿ ಸಸಿ ₹ 1.50 ಇದೆ. ಎಷ್ಟರ ಮಟ್ಟಿಗೆ ಸಸಿಗಳು ಬದುಕಲಿವೆ ಎಂಬ ಚಿಂತೆ ಕಾಡುತ್ತಿದೆ ಎಂದು ರಾವಲಕುಂಟೆ ಬೆಳೆಗಾರರಾದ ಅಶೋಕರೆಡ್ಡಿ, ರಾಮರೆಡ್ಡಿ ಅಳಲು ತೋಡಿಕೊಂಡರು.

ತರಕಾರಿ ದರ ಇನ್ನಷ್ಟು ಏರಿಕೆ ಸಾಧ್ಯತೆ

ಪ್ರತಿವರ್ಷ ಮಾರ್ಚ್- ಏಪ್ರಿಲ್‌ನಲ್ಲಿ ಈ ಭಾಗದಲ್ಲಿ 7000ದಿಂದ 8000 ಹೆಕ್ಟೇರ್‌ ಪ್ರದೇಶದಲ್ಲಿ ಟೊಮೆಟೊ ನಾಟಿಯಾಗುತ್ತಿತ್ತು. ಈ ವರ್ಷ ಶೇ 10ರಷ್ಟು ಮಾತ್ರ ಆಗಿದೆ. ಸಸಿಗಳು ಸ್ವಲ್ಪ ದೊಡ್ಡವಾದರೂ ರೈತರು ಖರೀದಿ ಮಾಡದ ಕಾರಣ ನರ್ಸರಿಗಳಲ್ಲಿ ಸಸಿಗಳನ್ನು ಬಿಸಾಡಲಾಗಿದೆ. ಇರುವ ತರಕಾರಿ ಬೆಳೆಗಳು ಆರೋಗ್ಯವಾಗಿಲ್ಲ. 20 ದಿನ ಇದೇ ಸ್ಥಿತಿ ಮುಂದುವರಿದಲ್ಲಿ ತರಕಾರಿಗಳ ದರ ಇನ್ನಷ್ಟು ಏರುಮುಖ ಕಾಣಲಿದೆ ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಆರ್.‌ ವಿರೂಪಾಕ್ಷಪ್ಪ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT