ಚಿತ್ರದುರ್ಗ: ‘ಪಾಳೆಗಾರರು ಆಳ್ವಿಕೆ ನಡೆಸಿದ ಈ ನೆಲದಲ್ಲಿ ಸಾವಿರಾರು ಕೃತಿಗಳು ಬಿಡುಗಡೆಯಾಗಿವೆ. ಅದರಲ್ಲಿ ಶಾಶ್ವತವಾಗಿ ಉಳಿಯಬಲ್ಲ ಸಾಲಿಗೆ ದುರ್ಗದಲ್ಲಿ ಹುಲಿ ಶಿಕಾರಿ ಕೃತಿಯೂ ಸೇರ್ಪಡೆಯಾಗಲಿದೆ’ ಎಂದು ಸಾಹಿತಿ ಡಾ. ಲೋಕೇಶ ಅಗಸನಕಟ್ಟೆ ಅಭಿಪ್ರಾಯಪಟ್ಟರು.
ಐಎಂಎ ಸಭಾಂಗಣದಲ್ಲಿ ಭಾನುವಾರ ಚಾರಣ ಪ್ರಿಯರ ತಂಡದಿಂದ ಆಯೋಜಿಸಿದ್ದ ಕೃತಿಕಾರ ಎಂ. ಮೃತ್ಯುಂಜಯಪ್ಪ ಅವರ ‘ದುರ್ಗದಲ್ಲಿ ಹುಲಿ ಶಿಕಾರಿ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಕೃತಿ ಕುರಿತು ಅವರು ಮಾತನಾಡಿದರು.
‘ಇದು ಬಹುತೇಕ ಕೋಟೆನಾಡಿನ ಬೇಟೆಗಾರರ ಕಥಾ ಆಧಾರಿತ ಕೃತಿಯಾಗಿದ್ದು, ಯುರೋಪಿಯನ್, ರಷ್ಯಾದ ಬೇಟೆಗಾರರ ಕಥೆಗಳು ಯಾವ ರೀತಿ ರೋಮಾಂಚನ ಉಂಟು ಮಾಡುತ್ತದೋ ಆ ಮಾದರಿಯಲ್ಲಿ ಮೂಡಿಬಂದಿದೆ. ಸ್ವತಃ ಕೃತಿಕಾರರೇ ಬೇಟೆಗೆ ಪ್ರಯತ್ನಿಸಿದ್ದರಿಂದ ನೈಜತೆ ಕಟ್ಟಿಕೊಡುವಲ್ಲಿ ಸಫಲರಾಗಿದ್ದಾರೆ’ ಎಂದರು.
‘ಬ್ರಿಟಿಷ್ ಅಧಿಕಾರಿಯಾಗಿದ್ದ ಹುಲಿ ಬೇಟೆಗಾರ ಜಿಮ್ ಕಾರ್ಬೆಟ್ ಎಲ್ಲಾ ತಯಾರಿಯೊಂದಿಗೆ ಹುಲಿಗಳನ್ನು ಶಿಕಾರಿಯಾಡಿದ್ದು, ವಿಶ್ವ ದಾಖಲೆ ಪಟ್ಟಿಗೆ ಸೇರುತ್ತವೆ. ಆದರೆ, ಸ್ಥಳೀಯರಾಗಿದ್ದ ಈಶ್ವರಪ್ಪ ಅವರು 21 ಹುಲಿ ಶಿಕಾರಿ ಮಾಡಿದ್ದರೂ ಎಲ್ಲಿಯೂ ಬೆಳಕಿಗೆ ಬಂದಿಲ್ಲ. ಡಿ.ಎಸ್. ಹಳ್ಳಿಯ ಚಿಕ್ಕಸಿದ್ದಯ್ಯ ಒಂದೇ ಏಟಿಗೆ ಮೂರು ಹುಲಿ ಬೇಟೆಯಾಡಿದ್ದಾರೆ. ಇವರ ಕುರಿತು ಮಾಹಿತಿ ಇಲ್ಲ. ಇಂತಹ ಬೇಟೆಗಾರರನ್ನು ಪರಿಚಯಿಸುವ ಕೆಲಸ ಕೃತಿಯ ಮೂಲಕ ಆಗಿದೆ’ ಎಂದು ಹೇಳಿದರು.
‘ಸಂಶೋಧಕರ ಅರಿವಿಗೂ ಬಾರದ ಐತಿಹಾಸಿಕ ಕೋಟೆಯೊಳಗಿನ ಸ್ಥಳಗಳ ಕುರಿತು ಕೃತಿಯಲ್ಲಿ ಉಲ್ಲೇಖಿಸಲಾಗಿದೆ. ಕಥೆಗೆ ಹೊಂದುವಂತೆ ಆಡು ಭಾಷೆಯನ್ನು ಬಳಸಲಾಗಿದೆ. ಹೀಗಾಗಿ ಇದು ಪ್ರಸ್ತುತ ಯುವಸಮೂಹವನ್ನು ಸೆಳೆದರೂ ಅಚ್ಚರಿ ಇಲ್ಲ’ ಎಂದರು.
ಕೃತಿಕಾರ ಮೃತ್ಯುಂಜಯಪ್ಪ, ‘ಕರಡಿ ಮತ್ತು ಚಿರತೆಗಳನ್ನು ಬಿಟ್ಟರೆ ಈಗ ಈ ಭಾಗದಲ್ಲಿ ಹುಲಿಗಳಿಲ್ಲ. ಆದರೆ, ನಾನು ಚಿಕ್ಕವನಿದ್ದಾಗ ಕಣ್ಣಾರೆ ಕಂಡಿದ್ದೇನೆ. ಬಾಯ್ತಪ್ಪಿ ಬೇಟೆಗೆ ನಾನು ಒಮ್ಮೆ ಹೋಗಿದ್ದೆ ಎಂದು ಸ್ನೇಹಿತರಲ್ಲಿ ಹಂಚಿಕೊಂಡೆ. ಕೊನೆಗೆ ಕೃತಿ ಬರೆಯಲೇಬೇಕೆಂದು ಪಟ್ಟು ಹಿಡಿದರು. ಹೀಗಾಗಿ ಕೃತಿ ಹೊರಬರಲು ಸಾಧ್ಯವಾಯಿತು’ ಎಂದು ತಿಳಿಸಿದರು.
‘ಉತ್ತಮ ಕೃತಿ ಹೊರತರಬೇಕು ಎಂಬ ಕಾರಣಕ್ಕೆ ಐದಾರು ದಶಕಗಳ ಹಿಂದೆ ಬೇಟೆಯಾಡಿದ ಕೆಲವರ ಮನೆಗಳಿಗೆ ಹೋಗಿ ಮಾಹಿತಿ ಕಲೆ ಹಾಕಿದ್ದೇನೆ. ವಿ.ಪಾಳ್ಯಾ, ಚಿಕ್ಕಸಿದ್ದವ್ವನಹಳ್ಳಿ, ನಾಯಕನಹಟ್ಟಿ ಸೇರಿ ಹಲವೆಡೆ ಒಂದಿಷ್ಟು ಮಾಹಿತಿಗಾಗಿ ಅಲೆದಾಡಿದ್ದೇನೆ’ ಎಂದರು.
ಟಿ.ಎಂ. ವೀರೇಶ್, ನಿವೃತ್ತ ಪ್ರಾಂಶುಪಾಲ ಡಾ.ಸಂಗೇನಹಳ್ಳಿ ಅಶೋಕಕುಮಾರ್, ಆರ್.ಶೇಷಣ್ಣಕುಮಾರ್, ಡಾ.ಹೇಮಂತ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.