ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ ಸಂಗೀತದ ಧ್ವನಿ ತಿಪ್ಪೇಸ್ವಾಮಿ

Last Updated 29 ಅಕ್ಟೋಬರ್ 2020, 4:40 IST
ಅಕ್ಷರ ಗಾತ್ರ

ಚಿತ್ರದುರ್ಗ: ಸಂಗೀತ ಹಾಗೂ ರಂಗಭೂಮಿ ಕ್ಷೇತ್ರಕ್ಕೆ ಬದುಕು ಮುಡುಪಾಗಿಟ್ಟಿರುವ ಹಿರಿಯೂರಿನ ಆರ್‌.ತಿಪ್ಪೇಸ್ವಾಮಿ ಅವರಿಗೆ 2020ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂದಿದೆ. ಕಲಾವಿದರ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.

ಆರ್‌.ತಿಪ್ಪೇಸ್ವಾಮಿ ಅವರು ಮೂಲತಃ ಹಿರಿಯೂರು ತಾಲ್ಲೂಕಿನ ಉಪ್ಪಳಗೆರೆಯವರು. 1948ರಲ್ಲಿ ಜನಿಸಿದ ಅವರಿಗೆ ಸಂಗೀತ ರಕ್ತಗತವಾಗಿ ಬಂದಿದೆ. ತಂದೆ ರಾಜಣ್ಣ ಹಾಗೂ ತಾತ ಹಟ್ಟಿ ರುದ್ರಪ್ಪ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು. ಮನೆ ವಾತಾವರಣವೇ ಇವರನ್ನು ಸಂಗೀತ ಹಾಗೂ ರಂಗಭೂಮಿಯತ್ತ ಕರೆತಂದಿತು.

ಕರ್ನಾಟಕ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜನಪದ ಸಂಗೀತ ಹಾಗೂ ವಚನ ಗಾಯನ ಕಾರ್ಯಕ್ರಮಗಳನ್ನು ರಾಜ್ಯದ ಹಲವಡೆ ನಡೆಸಿಕೊಟ್ಟಿದ್ದಾರೆ. ಚಿತ್ರದುರ್ಗದಲ್ಲಿ ನಡೆದ 75ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿದ್ವತ್ತು ಪ್ರದರ್ಶಿಸಿದ್ದಾರೆ. ಹಂಪಿ ಉತ್ಸವ, ದುರ್ಗೋತ್ಸವದಲ್ಲಿಯೂ ಕಂಠಸಿರಿ ಹೊರಹೊಮ್ಮಿದೆ.

* ರಾಜ್ಯೋತ್ಸವ ಪ್ರಶಸ್ತಿಯನ್ನು ನೀವು ನಿರೀಕ್ಷಿಸಿದ್ದಿರಾ?

ಖಂಡಿತ ನಿರೀಕ್ಷೆ ಇರಲಿಲ್ಲ. ಪ್ರಶಸ್ತಿಗಳಿಗೆ ನಡೆಯುತ್ತಿರುವ ಲಾಬಿ, ರಾಜಕಾರಣ ನೋಡಿ ಎಲೆ ಮರೆಯ ಕಾಯಿಯಂತಿದ್ದೆ. ಹಿತೈಷಿಗಳ ಕೋರಿಕೆಯ ಮೇರೆಗೆ ಅರ್ಜಿಯೊಂದನ್ನು ಹಾಕಿದ್ದೆ. ಪ್ರಶಸ್ತಿ ಸಿಗುವ ಬಗ್ಗೆ ಎಳ್ಳಷ್ಟೂ ಭರವಸೆ ಇರಲಿಲ್ಲ. ಕನ್ನಡ ರಾಜೇಶ್ವರಿ ತಾಯಿಯ ಕರುಣೆಯಿಂದ ಶ್ರಮಕ್ಕೆ ಕೊನೆಗೂ ಫಲ ಸಿಕ್ಕಿದೆ.

* ನಿಮಗೆ ರಂಗಭೂಮಿ ಬಗ್ಗೆ ಒಲವು ಬೆಳೆದಿದ್ದು ಹೇಗೆ?

ಇಡೀ ಕುಟುಂಬವೇ ರಂಗಭೂಮಿಯಲ್ಲಿ ತೊಡಗಿಕೊಂಡಿತ್ತು. ತಾತ ಹಟ್ಟಿ ರುದ್ರಪ್ಪ ನಾಟಕ ಕಂಪನಿಯಲ್ಲಿದ್ದರು. ತಂದೆ ರಾಜಣ್ಣ ಕೂಡ ನಾಟಕದಲ್ಲಿ ಅಭಿನಯಿಸುತ್ತಿದ್ದರು. ಆರನೇ ವಯಸ್ಸಿನಲ್ಲೇ ಬಾಲ ಮಾರ್ಕಂಡೇಯ ಪಾತ್ರ ಮಾಡಿದ್ದೆ. ಹಿರಿಯೂರಿನ ಶ್ರೀಶೈಲ ಟಾಕೀಸ್‌ನಲ್ಲಿ ನಾಟಕ ಮಾಡಿದ ನೆನಪುಗಳಿವೆ. ಶ್ರೀಕೃಷ್ಣ ಗಾರುಡಿ, ಭೂ ಕೈಲಾಸ, ಕುರುಕ್ಷೇತ್ರ ನಾಟಕಗಳನ್ನು ಹೆಚ್ಚಾಗಿ ಪ್ರದರ್ಶಿಸಿದೆವು.

* ರಂಗಭೂಮಿಯಿಂದ ಶಾಸ್ತ್ರೀಯ ಸಂಗೀತದತ್ತ ಆಕರ್ಷಣೆ ಉಂಟಾಗಿದ್ದು ಹೇಗೆ?

ಹಲವು ದಶಕಗಳ ಹಿಂದೆ ರಂಗಭೂಮಿಯ ಸಂಗೀತಕ್ಕೆ ನಿರ್ದಿಷ್ಟ ಚೌಕಟ್ಟಿತ್ತು. ಶಾಸ್ತ್ರೀಯ ಸಂಗೀತವನ್ನೇ ನಾಟಕಗಳಲ್ಲಿ ಬಳಸಿಕೊಳ್ಳಲಾಗುತ್ತಿತ್ತು. ಸಂಗೀತದ ಬಗ್ಗೆ ತಾತಾ ಹಟ್ಟಿ ರುದ್ರಪ್ಪ ಅವರೇ ಸ್ಫೂರ್ತಿ ತುಂಬಿದರು. ವಿದ್ವತ್ ಪರೀಕ್ಷೆಗೆ ಈಗ ಸಿದ್ಧಪಡಿಸಿದ ಪಠ್ಯವನ್ನು ಚಿಕ್ಕವನಿದ್ದಾಗಲೇ ಕಲಿತಿದ್ದೆ. ರಂಗಭೂಮಿ ಹಾಗೂ ಸಂಗೀತದಲ್ಲಿ ಏಕಕಾಲಕ್ಕೆ ತೊಡಗಿಕೊಂಡೆ.

* ರಂಗಭೂಮಿಯಿಂದ ಕೊಂಚ ವಿಮುಖರಾದಿರಿ ಅನಿಸಲಿಲ್ಲವೇ?

ರಂಗಭೂಮಿಯಲ್ಲಿ ಬಣ್ಣ ಹಚ್ಚಿದರೂ ಸಂಸಾರ ನಡೆಯುತ್ತಿರಲಿಲ್ಲ. ತಂದೆ, ನಾನು ನಾಟಕದಲ್ಲಿ ಅಭಿನಯಿಸಿದರೂ ಸಂಸಾರ ಸಾಗುತ್ತಿರಲಿಲ್ಲ. ತಾಯಿ ಕೂಲಿ ಮಾಡಿದ ಹಣದಲ್ಲಿ ಕುಟುಂಬ ನಡೆಯುತ್ತಿತ್ತು. ರಂಗಭೂಮಿ ನಂಬಿಕೊಂಡರೆ ಕಷ್ಟ ಎಂಬ ಭಾವನೆ ಮೂಡಿತು. ತಂದೆ, ತಾತನ ಸ್ಥಿತಿ ಒದಗುವುದು ಬೇಡವೆಂದು ಸಂಗೀತವನ್ನು ವೃತ್ತಿಯಾಗಿಸಿಕೊಂಡೆ.

* ಸಂಗೀತ ಶಾಲೆ ಶುರು ಮಾಡಿದ್ದು ಏಕೆ? ಹಿರಿಯೂರನ್ನೇ ಏಕೆ ಆಯ್ಕೆ ಮಾಡಿಕೊಂಡಿರಿ?

ಸಂಗೀತವನ್ನು ವೃತ್ತಿಯಾಗಿಸಿ ಕೊಳ್ಳಲು ಗುರುಗಳಾದ ಎಚ್‌.ಎನ್‌.ನಾರಾಯಣಪ್ಪ ಸಲಹೆ ನೀಡಿದರು. ಸಂಗೀತ ವಿದ್ವಾನ್‌ ಪರೀಕ್ಷೆಗಳನ್ನು ಬರೆಸಿ ಸಜ್ಜುಗೊಳಿಸಿದರು. ಸಂಗೀತದ ಮೇಲೆ ಆಸಕ್ತಿ ಬದುಕು ಕಟ್ಟಿಕೊಟ್ಟಿತು.

ಹಿರಿಯೂರಿನ ಸಂಗೀತಾಸಕ್ತರು ಪರೀಕ್ಷೆ ಕಟ್ಟುತ್ತಿರಲಿಲ್ಲ. ಈ ಬಗ್ಗೆ ಅವರಲ್ಲಿ ಅರಿವು ಇರಲಿಲ್ಲ. ಇದನ್ನು ಗಮನಿಸಿದ ಗುರುಗಳು ಹಿರಿಯೂರಿನಲ್ಲಿ ಸಂಗೀತ ಶಾಲೆ ಶುರು ಮಾಡುವಂತೆ ಸೂಚಿಸಿದರು. ಹೀಗಾಗಿ, ಸಂಗೀತ ಶಾಲೆ
ಆರಂಭಿಸಿದೆ.

ಸುಮಂಗಲಾ–ವೀರಭದ್ರಪ್ಪ ದಂಪತಿಗೆ ಪ್ರಶಸ್ತಿ

ಕೃಷಿ ಕ್ಷೇತ್ರದಲ್ಲಿನ ಸಾಧನೆಗಾಗಿ ಮೊಳಕಾಲ್ಮುರು ತಾಲ್ಲೂಕಿನ ಬಿ.ಜಿ.ಕೆರೆಯ ಎಸ್‌.ವಿ.ಸುಮಂಗಲ ಹಾಗೂ ಎಸ್‌.ವಿ.ವೀರಭದ್ರಪ್ಪ ದಂಪತಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸುಮಂಗಲಾ ಮತ್ತು ವೀರಭದ್ರಪ್ಪ ಅವರ ‘ವಸುಂಧರ ಕೃಷಿ ಕ್ಷೇತ್ರ’ ಸುಮಾರು 80 ಎಕರೆಯಲ್ಲಿದೆ. 20ಕ್ಕೂ ಅಧಿಕ ಬೆಳೆಗಳೊಂದಿಗೆ ಯಾವುದೇ ವಿಶ್ವವಿದ್ಯಾಲಯಕ್ಕೂ ಸಾಟಿ ಇಲ್ಲದಂತೆ ಸಮಗ್ರ ಕೃಷಿ ಅಭಿವೃದ್ಧಿಯ ಮಾದರಿಯನ್ನು ಸಮಾಜದ ಮುಂದಿಟ್ಟಿದ್ದಾರೆ.

ತೆಂಗು, ಹುಣಸೆ, ರೇಷ್ಮೆ ಬೆಳೆಗೆ ಆದ್ಯತೆ ನೀಡಿದ್ದಾರೆ. ರೇಷ್ಮೆ ಹುಳು, ಮೇಕೆ ಹಾಗೂ ಜೇನು ಸಾಕಾಣಿಕೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಕೃಷಿ ಅರಣ್ಯ ಬೆಳೆಗಳಾದ ಹೆಬ್ಬೇವು, ಶ್ರೀಗಂಧ, ಬಿದಿರು ಸೇರಿ ಇತರೆ ಬೆಳೆಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ಸುಮಾರು 60ಕ್ಕೂ ಹೆಚ್ಚು ಕೃಷಿ ಕಾರ್ಮಿಕರಿಗೆ ವರ್ಷಪೂರ್ತಿ ಉದ್ಯೋಗ ನೀಡುತ್ತಾ ಬಂದಿದ್ದಾರೆ. 40 ವರ್ಷಗಳಿಂದ ಎಲ್ಲಾ ವಿಧದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಟ್ರ್ಯಾಕ್ಟರ್ ಚಾಲನೆಯಲ್ಲಿ ಪರವಾನಿಗೆ ಪಡೆದ ರಾಜ್ಯದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಸುಮಂಗಲ ಪಾತ್ರರಾಗಿದ್ದಾರೆ.

2010ರಲ್ಲಿ ಅತ್ಯುತ್ತಮ ರೇಷ್ಮೆ ಬೆಳೆಗಾರರು ಎಂದು ‘ರಾಷ್ಟ್ರೀಯ ಪ್ರಶಸ್ತಿ ಹಾಗೂ 1995-96ರಲ್ಲಿ ರೇಷ್ಮೆ ಬೆಳೆ ಅಭಿವೃದ್ಧಿಯಲ್ಲಿ ಉತ್ತಮ ಮಹಿಳಾ ಉದ್ಯಮಶೀಲತೆ ರಾಷ್ಟ್ರೀಯ ಪ್ರಶಸ್ತಿಯನ್ನು ಕೇಂದ್ರೀಯ ರೇಷ್ಮೆ ಮಂಡಳಿ
ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT