ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರಾಕಾರ ಮಳೆ: ಭರ್ತಿಯಾದ ಚೆಕ್‌ಡ್ಯಾಂ

Last Updated 7 ಸೆಪ್ಟೆಂಬರ್ 2020, 14:17 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನಲ್ಲಿ ಭಾನುವಾರ ರಾತ್ರಿ ಗುಡುಗು, ಸಿಡಿಲು ಸಹಿತ ಸುರಿದ ಧಾರಾಕಾರ ಮಳೆಗೆ ಮಾಡದಕೆರೆ ಹೋಬಳಿಯ ಹಿರೇಹಳ್ಳ ತುಂಬಿ ಹರಿದಿದೆ.

ದುಗ್ಗಾವರ–ಗೂಳಿಹಟ್ಟಿಯಿಂದ ದೇವಪುರ ಕೆರೆಯವರೆಗೆ ಸುಮಾರು 10 ಕಿ.ಮೀ. ವರೆಗೂ ಈ ಹಿರೇಹಳ್ಳ ಹಾದು ಹೋಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಭಾರಿ ಮಳೆ ಸುರಿದಿದ್ದರಿಂದ ಹಳ್ಳದ ಮಾರ್ಗದಲ್ಲಿ ಪ್ರವಾಹ ಉಂಟಾಗಿತ್ತು. ಇದರಿಂದ ಕೆಲವು ಮನೆಗಳಿಗೆ ಹಾಗೂ ಬೆಳೆಗಳಿಗೆ ಹಾನಿಯಾಗಿದೆ.

ಇಂತಹ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ಶಾಸಕ ಗೂಳಿಹಟ್ಟಿ ಡಿ. ಶೇಖರ್‌ ಅವರು ಈಚೆಗಷ್ಟೇ ಹಿರೇಹಳ್ಳ ರಾಜಕಾಲುವೆಯನ್ನು ದುರಸ್ತಿ ಮಾಡಿಸಿದ್ದರು. ಈ ಹಳ್ಳದ ಮಾರ್ಗದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಐದಾರು ಚೆಕ್‌ಡ್ಯಾಂಗಳನ್ನು ಕಟ್ಟಿಸಿದ್ದರು. ಈಗ ಬಿರುಸಿನ ಮಳೆಯಾಗಿರುವುದರಿಂದ ಚೆಕ್‌ಡ್ಯಾಂಗಳು ಭರ್ತಿಯಾಗಿದ್ದು, ಹಳ್ಳದ ಮಾರ್ಗವಾಗಿ ದೇವಪುರ ಕೆರೆಯತ್ತ ನೀರು ಹರಿಯುತ್ತಿದೆ.

‘ಇದರಿಂದ ಈ ಭಾಗದಲ್ಲಿ ಅಂತರ್ಜಲ ವೃದ್ಧಿಯಾಗಿದೆ. ರೈತರ ಕೊಳವೆಬಾವಿಗಳಿಗೆ ಸಾಕಷ್ಟು ಅನುಕೂಲವಾಗಿದೆ. ಅಡಿಕೆ, ತೆಂಗು, ಬಾಳೆ ಸೇರಿ ಇನ್ನಿತರ ತೋಟಗಾರಿಕೆ ಬೆಳೆಗಳಿಗೆ ನೆರವಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಶಾಸಕ ಗೂಳಿಹಟ್ಟಿ ಡಿ. ಶೇಖರ್‌ ಅವರು ಹಿರೇಹಳ್ಳ ದುರಸ್ತಿ ಮಾಡಿಸಿದ್ದರಿಂದ ತುಂಬಾ ಅನುಕೂಲವಾಗಿದೆ. ಈ ಕಾರ್ಯದಿಂದ ಬೆನಕನಹಳ್ಳಿ, ಕಂಠಾಪುರ, ದೇವಪುರ ಕಾಲೊನಿ ಮಾರ್ಗದಲ್ಲಿ ಉಂಟಾಗುತ್ತಿದ್ದ ಪ್ರವಾಹದ ಪರಿಸ್ಥಿತಿ ನಿವಾರಣೆಯಾಗಿದೆ’ ಎನ್ನುತ್ತಾರೆ ಹಕ್ಕಿತಿಮ್ಮಯ್ಯನಹಟ್ಟಿ ಡಿ. ಮಲ್ಲೇಶ್‌.

‘ಮಾಡದಕೆರೆ ಹೋಬಳಿ ಮಸಣೇಹಳ್ಳಿ ಕೆರೆ ಕೋಡಿಬಿದ್ದಿದೆ. ಕಸಬಾ ಹೋಬಳಿಯ ಗಡಿಗ್ರಾಮವಾದ ಜಮ್ಮಾಪುರ ಮಾರ್ಗದಲ್ಲಿ ಬರುವ ಚೌಡಿಹಳ್ಳವನ್ನು ದುರಸ್ತಿ ಮಾಡಿಸಿದ್ದರು. ಈ ಭಾಗದಲ್ಲಿಯೂ ಉತ್ತಮ ಮಳೆಯಾಗಿರುವುದರಿಂದ ಈ ಹಳ್ಳದಲ್ಲಿಯೂ ನೀರು ಹರಿಯುತ್ತಿದೆ. ತಾಲ್ಲೂಕಿನ ಹಲವು ಚೆಕ್‌ಡ್ಯಾಂಗಳಿಗೆ, ಗೋಕಟ್ಟೆಗಳಿಗೆ, ರೈತರ ಕೃಷಿ ಹೊಂಡಗಳಿಗೆ ಒಂದಿಷ್ಟು ನೀರು ಹರಿದು ಬಂದಿದೆ. ಕೆಲವೆಡೆ ತಗ್ಗು ಪ್ರದೇಶದ ಜಮೀನಿನ ಬೆಳೆಗಳಲ್ಲಿ ನೀರು ನಿಂತಿದೆ. ರಾಗಿ, ಹತ್ತಿ ಬೆಳೆಗಳು ನಳನಳಿಸುತ್ತಿವೆ. ಕೊಯ್ಲಿಗೆ ಬಂದಿದ್ದ ನವಣೆ, ಸಾಮೆ, ಶೇಂಗಾ ಬೆಳೆಗಳಿಗೆ ತೊಂದರೆಯಾಗಿದೆ’ ಎನ್ನುತ್ತಾರೆ ರೈತ ಮೂಡ್ಲಪ್ಪ.

ಹಿರೇಹಳ್ಳ ಮಾರ್ಗದ ಚೆಕ್‌ಡ್ಯಾಂಗಳು ಭರ್ತಿಯಾಗಿ ದುರಸ್ತಿಯಾದ ಹಳ್ಳದ ಮಾರ್ಗದಲ್ಲಿ ನೀರು ಹರಿಯುತ್ತಿದ್ದನ್ನು ಸೋಮವಾರ ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT