ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇತರಿಕೆ ಕಾಣದ ಚಿತ್ರದುರ್ಗ ಪ್ರವಾಸೋದ್ಯಮ

Last Updated 16 ಆಗಸ್ಟ್ 2021, 2:13 IST
ಅಕ್ಷರ ಗಾತ್ರ

ಚಿತ್ರದುರ್ಗ: ಲಾಕ್‌ಡೌನ್‌ ಸಮಯದಲ್ಲಿ ಬಾಗಿಲು ಮುಚ್ಚಿದ್ದ ಪ್ರವಾಸಿತಾಣಗಳು ನಿಧನವಾಗಿ ಮೈತುಂಬಿಕೊಳ್ಳುತ್ತಿದ್ದವು. ಪ್ರವಾಸಿಗರ ಭೇಟಿಯಿಂದ ಹೊಸ ಕಳೆ ಪಡೆಯುತ್ತಿದ್ದವು. ಪ್ರವಾಸೋದ್ಯಮ ಆಶ್ರಯಸಿ ಬದುಕು ರೂಪಿಸಿಕೊಂಡಿದ್ದವರ ಮೊಗದಲ್ಲಿ ಮಂದಹಾಸ ಮಿನುಗುತ್ತಿತ್ತು. ಮೂರನೇ ಅಲೆಯ ಆತಂಕ ಶುರುವಾದ ಬಳಿಕ ಪ್ರವಾಸಿ ತಾಣಗಳು ಮತ್ತೆ ಮೌನಕ್ಕೆ ಶರಣಾಗುತ್ತಿವೆ.

ವಾರಾಂತ್ಯದ ಲಾಕ್‌ಡೌನ್‌, ರಾತ್ರಿ ಕರ್ಫ್ಯೂ, ನಿಷೇಧಾಜ್ಞೆಯಂತಹ ಕ್ರಮಗಳು ಪ್ರವಾಸದ ಉತ್ಸಾಹವನ್ನು ಕಿತ್ತುಕೊಂಡಂತೆ ಕಾಣುತ್ತಿದೆ. ಸೋಂಕು ನಿಯಂತ್ರಣಕ್ಕೆ ಸರ್ಕಾರ ಕೈಗೊಳ್ಳುವ ನಿರ್ಧಾರಗಳು ಪ್ರವಾಸೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಪ್ರವಾಸೋದ್ಯಮ ಸಂಕಷ್ಟದ ಸಂಕೋಲೆಯಿಂದ ಹೊರಬರುವ ಲಕ್ಷಣಗಳು ಗೋಚರಿಸುತ್ತಿಲ್ಲ.

ಪ್ರವಾಸಿಗರನ್ನು ಆಕರ್ಷಿಸುವ ಹಲವು ತಾಣಗಳು ಜಿಲ್ಲೆಯಲ್ಲಿವೆ. ಏಳು ಸುತ್ತಿನ ಕಲ್ಲಿನ ಕೋಟೆ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಇತಿಹಾಸ ಪಠ್ಯದಲ್ಲಿರುವ ಈ ಕೋಟೆ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ತಾಣವೂ ಹೌದು. ಪುಸ್ತಕದಲ್ಲಿ ಓದಿದ ಕೋಟೆಯ ಇತಿಹಾಸವನ್ನು ಅರಿಯುವ ಕುತೂಹಲ ಮಕ್ಕಳಲ್ಲಿ ಮೂಡುತ್ತದೆ. ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಕೋಟೆಯನ್ನು ಕಣ್ತುಂಬಿಕೊಳ್ಳಲು ಬರುವವರು ಅರ್ಧ ದಿನ ಕಳೆಯುತ್ತಿದ್ದರು. ಇಂತಹ ಕೋಟೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಇತ್ತೀಚೆಗೆ ಕಡಿಮೆಯಾಗಿದೆ.

ನಗರಕ್ಕೆ ಹೊಂದಿಕೊಂಡ ಚಂದ್ರವಳ್ಳಿ ತೋಟ ಅತ್ಯುತ್ತಮ ಪಿಕ್‌ನಿಕ್‌ ತಾಣ. ಸೂರ್ಯ ಮಗ್ಗಲು ಬದಲಿಸಿದಂತೆ ಇಲ್ಲಿನ ಬಂಡೆಗಳ ಹೊಳಪು ಬದಲಾಗುತ್ತದೆ. ಕೆರೆಯ ದಡದಲ್ಲಿ ಕುಳಿತು ಕಲ್ಲಿನ ಬಂಡೆಯ ಬೆಟ್ಟಗಳನ್ನು ಕಣ್ತುಂಬಿಕೊಳ್ಳುವ ಬಗೆ ವರ್ಣನಾತೀತ. ಅನೇಕ ಪ್ರವಾಸಿಗರು ಇಲ್ಲಿ ಇಡೀ ದಿನ ಕಳೆಯುತ್ತಿದ್ದರು. ವಾರಾಂತ್ಯದ ದಿನಗಳಲ್ಲಿ ಇದು ತುಂಬಿರುತ್ತಿತ್ತು. ಪ್ರವಾಸಿಗರಿಲ್ಲದೇ ಚಂದ್ರವಳ್ಳಿ ಮತ್ತೆ ಸೊರಗುತ್ತಿದೆ. ಆಡುಮಲ್ಲೇಶ್ವರ ಕಿರುಮೃಗಾಲಯಕ್ಕೂ ಭೇಟಿ ನೀಡುವವರ ಸಂಖ್ಯೆ ಕಡಿಮೆಯಾಗಿದೆ.

ಕೋವಿಡ್‌ ಎರಡನೇ ಅಲೆಯ ಭೀಕರತೆಯನ್ನು ಕಂಡಿದ್ದ ಜನರು ಸೋಂಕಿನ ತೀವ್ರತೆ ಕಡಿಮೆಯಾಗುತ್ತಿದ್ದಂತೆ ನಿಧಾನವಾಗಿ ಮನೆಯಿಂದ ಹೊರಗೆ ಬರಲು ಆರಂಭಿಸಿದ್ದರು. ಜೂನ್‌ ಹಾಗೂ ಜುಲೈ ತಿಂಗಳಲ್ಲಿ ಪ್ರವಾಸಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿತ್ತು. ಪ್ರವಾಸ ಮಾಡಿ ಮೈಮನಗಳನ್ನು ಹಗುರ ಮಾಡಿಕೊಳ್ಳುವ ತವಕದಿಂದಲೇ ಜನರು ಹಲವು ತಾಣಗಳಿಗೆ ಭೇಟಿ ನೀಡುತ್ತಿದ್ದರು. ಕಿರು ಮೃಗಾಲಯದ ಉದ್ಯಾನದಲ್ಲಿ ಮಕ್ಕಳ ಕಲರವ ದಿನಕಳೆದಂತೆ ಹೆಚ್ಚಾಗಿತ್ತು. ಸೋಂಕು ನಿಯಂತ್ರಣಕ್ಕೆ ಸರ್ಕಾರ ಒಂದೊಂದೇ ನಿರ್ಧಾರಗಳನ್ನು ಹೊರಹಾಕುತ್ತಿದ್ದಂತೆ ಆತಂಕ ಮೂಡುತ್ತಿದೆ.

ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗುತ್ತಿದ್ದಂತೆ ಗಡಿ ಜಿಲ್ಲೆಯಲ್ಲಿ ನಿರ್ಬಂಧ ಹೇರಲಾಗಿದೆ. ಪ್ರವಾಸಿತಾಣ ಭೇಟಿಗೆ ಕೋವಿಡ್‌ ಪರೀಕ್ಷೆ ಅಥವಾ ಲಸಿಕೆ ಪಡೆದಿರುವ ಪ್ರಮಾಣಪತ್ರವನ್ನು ಶಿವಮೊಗ್ಗ ಸೇರಿ ಹಲವು ಜಿಲ್ಲೆಗಳಲ್ಲಿ ಕಡ್ಡಾಯಗೊಳಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯ ಪ್ರವಾಸಿತಾಣಗಳಿಗೆ ಇಂತಹ ಯಾವುದೇ ನಿರ್ಬಂಧಗಳಿಲ್ಲ. ಆದರೂ, ಪ್ರವಾಸೋದ್ಯಮದಲ್ಲಿ ಚೇತರಿಕೆ ಕಾಣುತ್ತಿಲ್ಲ.

ಪ್ರವಾಸಿ ತಾಣಗಳ ಸುತ್ತ ಆರ್ಥಿಕ ವ್ಯವಸ್ಥೆಯೊಂದು ರೂಪುಗೊಂಡಿತ್ತು. ಕೊರೊನಾ ಸೋಂಕು ಈ ಆರ್ಥಿಕ ತಳಹದಿಯನ್ನು ಅಲುಗಾಡಿಸಿದೆ. ಹೋಟೆಲ್‌, ಲಾಡ್ಜ್‌ಗಳಲ್ಲಿ ತಂಗುವವರ ಸಂಖ್ಯೆ ವಿರಳವಾಗಿದೆ. ಬಹುತೇಕ ಲಾಡ್ಜ್‌ಗಳು ಖಾಲಿ ಖಾಲಿ ಅನಿಸುತ್ತಿವೆ. ಪ್ರವಾಸಿಗರಿಗೆ ಸೇವೆ ಒದಗಿಸುತ್ತಿದ್ದ ಟ್ಯಾಕ್ಸಿಗಳಿಗೆ ಪ್ರಯಾಣಿಕರೇ ಇಲ್ಲ. ಮಾಲೀಕರು ಮತ್ತು ಚಾಲಕರಿಗೆ ವಾಹನದ ಕಂತು ಪಾವತಿಸುವುದು, ಜೀವನ ಸಾಗಿಸುವುದು ಕಷ್ಟವಾಗುತ್ತಿದೆ. ಪ್ರವಾಸಿ ಗೈಡ್‌ಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಮೊದಲ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ ರಾಜಕಾರಣಿ, ದಾನಿಗಳು ನೀಡಿದ ನೆರವಿನಿಂದ ಬದುಕು ಕಟ್ಟಿಕೊಂಡಿದ್ದರು. ಮೂರನೇ ಅಲೆ ಕಾಣಿಸಿಕೊಂಡರೆ ಬದುಕು ಇನ್ನಷ್ಟು ದುರ್ಬರವಾಗಲಿದೆ ಎಂಬುದು
ಇವರ ಆತಂಕ.

ಬಸ್‌ ಬರಲಿಲ್ಲ

ಪ್ರವಾಸಕ್ಕೆ ತೆರಳುವ ಸಾರ್ವಜನಿಕರ ಮನಸ್ಥಿತಿಯನ್ನು ಅರಿತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಪ್ರವಾಸಿಗರಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸಿತ್ತು. ಬೆಂಗಳೂರಿನ ಪ್ರವಾಸಿಗರಿಗೆ ಉತ್ತಮ ಪ್ಯಾಕೇಜ್‌ ಘೋಷಣೆ ಮಾಡಿತ್ತು. ಆದರೆ, ಈ ಬಸ್‌ ಒಮ್ಮೆಯೂ ಚಿತ್ರದುರ್ಗಕ್ಕೆ ಬರಲಿಲ್ಲ.

ಜೋಗ ಜಲಪಾತ ಹಾಗೂ ಚಿತ್ರದುರ್ಗದ ಐತಿಹಾಸಿಕ ಕಲ್ಲಿನ ಕೋಟೆಗೆ ಕೆಎಸ್‌ಆರ್‌ಟಿಸಿ ಒಂದು ದಿನದ ಟೂರ್‌ ಪ್ಯಾಕೇಜ್‌ ರೂಪಿಸಿತ್ತು. ಬೆಂಗಳೂರಿನಿಂದ ಬೆಳಿಗ್ಗೆ 6ಕ್ಕೆ ಹೊರಡುವ ರಾಜಹಂಸ ಬಸ್‌, ಬೆಳಿಗ್ಗೆ 9ಕ್ಕೆ ಚಿತ್ರದುರ್ಗ ತಲುಪುತ್ತಿತ್ತು. ಹೋಟೆಲ್‌ ದುರ್ಗದ ಸಿರಿಯಲ್ಲಿ ಬೆಳಗಿನ ಉಪಾಹಾರ ಮುಗಿಸಿ ಕೋಟೆಗೆ ಕರೆದೊಯ್ಯಲಾಗುತ್ತಿತ್ತು. ಮಧ್ಯಾಹ್ನದ ನಂತರ ಚಂದ್ರವಳ್ಳಿ ಕೆರೆ ಹಾಗೂ ವಾಣಿವಿಲಾಸ ಜಲಾಶಯ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು. ರಾತ್ರಿ 9ಕ್ಕೆ ಬೆಂಗಳೂರಿಗೆ ತಲುಪುತ್ತಿತ್ತು. ಊಟ, ಪ್ರಯಾಣ, ಟಿಕೆಟ್, ಗೈಡ್‌ ಶುಲ್ಕ ಸೇರಿ ₹ 1 ಸಾವಿರ ನಿಗದಿ ಮಾಡಲಾಗಿತ್ತು.

ಪ್ರವಾಸಿ ಸ್ನೇಹಿಯಲ್ಲ ಟಿಕೆಟ್‌ ವ್ಯವಸ್ಥೆ

ಕೋವಿಡ್‌ ಕಾರಣಕ್ಕೆ ಕಲ್ಲಿನಕೋಟೆಯ ಹೊರಭಾಗದ ಕೌಂಟರ್‌ ಬಳಿ ಟಿಕೆಟ್‌ ಕೊಡುವ ವ್ಯವಸ್ಥೆ ರದ್ದು ಮಾಡಲಾಗಿದೆ. ಆನ್‌ಲೈನ್ ಮೂಲಕ ಟಿಕೆಟ್‌ ಪಡೆಯುವ ವ್ಯವಸ್ಥೆಯನ್ನು ರೂಪಿಸಲಾಗಿದೆ. ಆದರೆ, ಇದು ಪ್ರವಾಸಿ ಸ್ನೇಹಿಯಾಗಿಲ್ಲ. ಇದರಿಂದ ಅನೇಕರು ತಾಣ ಪ್ರವೇಶಿಸಲು ಸಾಧ್ಯವಾಗದೇ ಹಿಂದಿರುಗಿದ ನಿದರ್ಶನಗಳೂ ಇವೆ.

ಆನ್‌ಲೈನ್‌ ಮೂಲಕ ಟಿಕೆಟ್‌ ಪಡೆಯಲು ಕೋಟೆಯ ಮುಂಭಾಗದಲ್ಲಿ ಫಲಕ ಅಳವಡಿಸಲಾಗಿದೆ. ಇದರಲ್ಲಿ ಟಿಕೆಟ್‌ ಲಿಂಕ್‌ ತೋರಿಸುವ ಕ್ಯೂಆರ್‌ ಕೋಡ್‌ ನೀಡಲಾಗಿದೆ. ಇದನ್ನು ಸ್ಕ್ಯಾನ್‌ ಮಾಡಿ ಟಿಕೆಟ್‌ ಪಡೆಯಬಹುದು. ಆದರೆ, ಈ ಜಾಲತಾಣ ಅಷ್ಟು ಸುಲಭವಾಗಿ ತೆರೆದುಕೊಳ್ಳುವುದಿಲ್ಲ. ಈ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ಆಸಕ್ತಿ ತೋರುತ್ತಿಲ್ಲ ಎಂದು ಪ್ರವಾಸಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಕೃತಿಯ ಸೌಂದರ್ಯಕ್ಕೆ ಮನಸೋತ ಪ್ರವಾಸಿಗರು

ಹಿರಿಯೂರು: ತಾಲ್ಲೂಕಿನ ವಾಣಿವಿಲಾಸಕ್ಕೆ ಭದ್ರಾ ಜಲಾಶಯದ ನೀರು ಹರಿದುಬರುತ್ತಿರುವ ಕಾರಣ ಕೊರೊನಾ ಸೋಂಕಿನ ಆತಂಕದ ನಡುವೆಯೂ ಪ್ರವಾಸಿಗರು ಜಲಾಶಯದ ಸೌಂದರ್ಯ ವೀಕ್ಷಣೆಗೆ ತಂಡೋಪತಂಡವಾಗಿ ಬರುತ್ತಿದ್ದಾರೆ.

ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಾಯಿ ಕೆಂಪನಂಜಮ್ಮಣ್ಣಿ ಹೆಸರಿನಲ್ಲಿ ವಾಣಿವಿಲಾಸಪುರ ಸಮೀಪ ಮಾರಿಕಣಿವೆ ಪ್ರದೇಶದಲ್ಲಿ ವೇದಾವತಿ ನದಿಗೆ ಅಡ್ಡಲಾಗಿ 1907ರಲ್ಲಿ ಜಲಾಶಯ ನಿರ್ಮಿಸಿದರು. 1911ರಲ್ಲಿ ಜಲಾಶಯದಲ್ಲಿ ನೀರಿನ ಸಂಗ್ರಹ ಆರಂಭವಾಗಿದೆ. 2019ರಿಂದ ಭದ್ರಾ ಜಲಾಶಯದ ನೀರು ಹರಿದುಬರುತ್ತಿದ್ದು, ಪ್ರತಿ ವರ್ಷ ನೀರಿನ ಮಟ್ಟ 100 ಅಡಿ ದಾಟುತ್ತಿದ್ದು, ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಿದೆ.

ಜಲಾಶಯದ ಸುರಕ್ಷತೆ ಹಾಗೂ ಪ್ರವಾಸಿಗರ ದೃಷ್ಟಿಯಿಂದ 2020 ಮಾರ್ಚ್‌ನಿಂದ ಅಣೆಕಟ್ಟೆ ಮೇಲ್ಭಾಗದಲ್ಲಿ ಸಂಚಾರ ನಿಷೇಧಿಸಲಾಗಿದೆ. ಅಣೆಕಟ್ಟೆಯ ಬಲಭಾಗದ ಗುಡ್ಡದ ಮೇಲಿರುವ ಪ್ರವಾಸಿ ಮಂದಿರದ ಬಳಿ ಹಾಗೂ ಎಡಭಾಗದಲ್ಲಿ ಕಲ್ಲಿನ ಮಂಟಪದ ಆಸುಪಾಸಿನಲ್ಲಿ ಜಲಾಶಯದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಜಲಾಶಯದ ಸಂರಕ್ಷಣೆ, ಪ್ರವಾಸಿಗರ ಸುರಕ್ಷತೆ ಹಿನ್ನೆಲೆಯಲ್ಲಿ ₹ 1.30 ಕೋಟಿ ವೆಚ್ಚದ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಇದು ಪೂರ್ಣಗೊಂಡ ಬಳಿಕ ಅಣೆಕಟ್ಟೆಯ ಮೇಲ್ಭಾಗದಲ್ಲೂ ಸಂಚರಿಸಬಹುದು.

ಪ್ರತಿ ವಾರಾಂತ್ಯದಲ್ಲಿ ಜಲಾಶಯ ವೀಕ್ಷಣೆಗೆ ಎರಡು ಸಾವಿರದಷ್ಟು ಜನರು ಬರುತ್ತಿದ್ದಾರೆ. ಇತರೆ ದಿನಗಳಲ್ಲಿ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕಡಿಮೆ.

ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿರುವ ಪ್ರಕೃತಿವನ, ಪ್ರವಾಸೋದ್ಯಮ ಇಲಾಖೆ ನಿರ್ಮಿಸಿರುವ ಉದ್ಯಾನ ಸಾರ್ವಜನಿಕ ಪ್ರವೇಶಕ್ಕೆ ಮುಕ್ತಗೊಳಿಸಿದರೆ ಪ್ರವಾಸಿಗರಿಗೆ ಇನ್ನಷ್ಟು ಅನುಕೂಲವಾಗಲಿದೆ. ವಿಶ್ವೇಶ್ವರಯ್ಯ ನೀರಾವರಿ ನಿಗಮಕ್ಕೆ ಸೇರಿರುವ ಎರಡು ಪ್ರವಾಸಿ ಮಂದಿರಗಳನ್ನು, ಪ್ರವಾಸೋದ್ಯಮ ಇಲಾಖೆಯ ಅತಿಥಿಗೃಹಗಳನ್ನು ಪ್ರವಾಸಿಗರಿಗೆ ಕಾಯ್ದಿರಿಸಿದರೆ ಮತ್ತಷ್ಟು ಆಕರ್ಷಣೀಯವಾಗುತ್ತದೆ.

‘ತಾಲ್ಲೂಕಿನಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದೆ. ಮಾಸ್ಕ್ ಧರಿಸದೆ ಬರುವವರಿಗೆ ಪ್ರವೇಶ ನಿರಾಕರಿಸಬೇಕು. ವಾರಾಂತ್ಯದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಬೇಕು’ ಎಂಬುದು ವಿ.ವಿ.ಪುರ ಗ್ರಾಮಸ್ಥರ ಆಗ್ರಹ.

ಜಲಾಶಯ ವೀಕ್ಷಣೆಗೆ ಬಂದವರು ಉತ್ತರೆಗುಡ್ಡ, ಕತ್ತೆಹೊಳೆ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಬಯಸುತ್ತಾರೆ. ಕಣಿವೆ ಮಾರಮ್ಮ, ಆರನಕಣಿವೆ ರಂಗನಾಥಸ್ವಾಮಿ ದೇವರುಗಳಿಗೆ ಪೂಜೆ ಸಲ್ಲಿಸಬಹುದು. ಪ್ರವಾಸಿ ಮಂದಿರ ವೃತ್ತದಲ್ಲಿ ರುಚಿಕರ ಮೀನಿನ ಊಟವೂ ಸಿಗಲಿದೆ.

ಭಕ್ತರ ದರ್ಶನಕ್ಕೆ ದೇವಾಲಯ ಸೀಮಿತ

ನಾಯಕನಹಟ್ಟಿ: ಜಿಲ್ಲೆಯ ಇತಿಹಾಸ ಪ್ರಸಿದ್ಧ ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ದೇವಾಲಯವು ಭಕ್ತರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿದೆ.

ತಿಪ್ಪೇರುದ್ರಸ್ವಾಮಿಮಧ್ಯ ಕರ್ನಾಟಕದ ಅಪಾರ ಭಕ್ತರ ಆರಾಧ್ಯ ದೈವ. ಶ್ರಾವಣ ಮಾಸದಲ್ಲಿ ನಡೆಯುವ ವಿಶೇಷ ಪೂಜಾ ಕಾರ್ಯಗಳು ಭಕ್ತರನ್ನು ಕರೆತರುತ್ತಿದ್ದವು. ವರ್ಷಕ್ಕೆ ಅಂದಾಜು 12 ಲಕ್ಷ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದರು. ಆದರೆ, ಎರಡು ವರ್ಷಗಳಿಂದ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಕ್ಷೀಣಿಸಿದೆ.

ದೇವಾಲಯ ತೆರೆಯಲು ಜುಲೈನಲ್ಲಿ ಸರ್ಕಾರ ಅನುಮತಿ ನೀಡಿದ್ದರಿಂದ ತಂಡೋಪತಂಡವಾಗಿ ಭಕ್ತರು ಬರುತ್ತಿದ್ದಾರೆ. ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು, ಥರ್ಮಲ್ ಸ್ಕ್ಯಾನ್ ಮಾಡುವುದು ಸೇರಿ ಹಲವು ಮುಂಜಾಗ್ರತಾ ಕ್ರಮಗಳನ್ನು ದೇವಾಲಯ ಕೈಗೊಂಡಿದೆ.

ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹಣ್ಣುಕಾಯಿ, ಹೂವುಗಳನ್ನು, ದೇವಾಲಯದೊಳಕ್ಕೆ ತರುವುದನ್ನು ನಿಷೇಧಿಸಲಾಗಿದೆ. ಹೊರಮಠ ಮತ್ತು ಒಳಮಠದ ಮುಂಭಾಗದಲ್ಲಿರುವ ಹಣ್ಣುಕಾಯಿ ಹೂವಿನ ವ್ಯಾಪಾರಿಗಳು ವ್ಯಾಪಾರ ವಹಿವಾಟು ಇಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ನಿತ್ಯ ನಡೆಯುತ್ತಿದ್ದ ಅನ್ನ ದಾಸೋಹವನ್ನೂ ನಿಲ್ಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT