ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುಗೊಲ್ಲ ಎಸ್ಟಿ ಮೀಸಲಾತಿಗಾಗಿ ಪಾದಯಾತ್ರೆ

ತಾಲ್ಲೂಕು ಮಟ್ಟದ ಕಾಡುಗೊಲ್ಲರ ಜಾಗೃತಿ ಸಭೆ ನಿರ್ಧಾರ
Last Updated 5 ಡಿಸೆಂಬರ್ 2022, 4:58 IST
ಅಕ್ಷರ ಗಾತ್ರ

ಹಿರಿಯೂರು: ‘ಕಾಡುಗೊಲ್ಲರಿಗೆ ಎಸ್ಟಿ ಮೀಸಲಾತಿ ಕಲ್ಪಿಸುವಂತೆ 40 ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿದ್ದರೂ ಪ್ರಯೋಜನವಾಗಿಲ್ಲ. ರಾಜಕೀಯ ಬೆಳವಣಿಗೆಗೆ ನಮ್ಮ ಸಮುದಾಯವನ್ನು ಬಳಸಿಕೊಂಡಿರುವ ರಾಜಕಾರಣಿಗಳನ್ನು ನಂಬದೇ ಸಂಘಟಿತ ಹೋರಾಟದ ಮೂಲಕ ಮೀಸಲಾತಿ ಪಡೆಯಬೇಕು’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ ಹೇಳಿದರು.

ನಗರದಲ್ಲಿ ಭಾನುವಾರ ಎಸ್ಟಿ ಮೀಸಲಾತಿ ಹೋರಾಟದ ಕುರಿತು ಚರ್ಚಿಸಲು ಕರೆದಿದ್ದ ತಾಲ್ಲೂಕು ಮಟ್ಟದ ಕಾಡುಗೊಲ್ಲರ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

‘ಬುಡಕಟ್ಟು ಹಿನ್ನೆಲೆ ಹೊಂದಿರುವ ಕಾಡುಗೊಲ್ಲರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಹಿಂದುಳಿದಿದ್ದಾರೆ. ಎಸ್ಟಿ ಮೀಸಲಾತಿ ಕೇಳುವುದು ನಮ್ಮ ನ್ಯಾಯಬದ್ಧ ಹಕ್ಕು. ಪಾದಯಾತ್ರೆ ಮೂಲಕ ವಿಧಾನಸೌಧಕ್ಕೆ ಹೋಗಿ ಹಕ್ಕೊತ್ತಾಯ ಮಂಡಿಸಲು ಎಲ್ಲರೂ ಸಿದ್ಧರಾಗಬೇಕು’ ಎಂದು ಅವರು ಮನವಿ ಮಾಡಿದರು.

‘ನಮ್ಮವರು ಯಾವುದೇ ರಾಜಕೀಯ ಪಕ್ಷದಲ್ಲಿ ಇದ್ದರೂ ಸಮುದಾಯದ ಹಿತಾಸಕ್ತಿಯ ವಿಚಾರ
ಬಂದಾಗ ಎಲ್ಲರೂ ಒಂದಾಗಿ ಹೋರಾಡೋಣ. ಗೊಲ್ಲರಹಟ್ಟಿಗಳಿಗೆ ಸರ್ಕಾರದ ಸೌಲಭ್ಯಗಳು ಸರಿಯಾಗಿ ತಲುಪುತ್ತಿಲ್ಲ’ ಎಂದರು.

‘ಸೌಲಭ್ಯ ವಂಚಿತ ಹಟ್ಟಿಗಳನ್ನು ನೋಡಿದಾಕ್ಷಣ ಇದು ಕಾಡುಗೊಲ್ಲರ ಹಟ್ಟಿ ಎಂದು ಯಾರು ಬೇಕಾದರೂ ಹೇಳುತ್ತಾರೆ. ಯರಬಳ್ಳಿಯ ಗೊಲ್ಲರಹಟ್ಟಿ
ಯಲ್ಲಿ ರಸ್ತೆಗಳೇ ಕಾಣುವುದಿಲ್ಲ. ಗೊಲ್ಲ ಸಮುದಾಯ ಮೂಲಸೌಕರ್ಯಗಳಿಂದ ವಂಚಿತವಾಗಿದೆ’ ಎಂದುಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಬಿ. ಪಾಪಣ್ಣ ಹೇಳಿದರು.

ಶೀಘ್ರದಲ್ಲೇ ತುಮಕೂರಿನಲ್ಲಿ ಗೌಡ–ಪೂಜಾರಿಗಳ ರಾಜ್ಯ ಮಟ್ಟದ ಸಮಾವೇಶ, ನಂತರ ಚಿತ್ರದುರ್ಗದಲ್ಲಿ ಎಸ್ಟಿ ಮೀಸಲಾತಿಯ ಬೃಹತ್ ಸಮಾವೇಶ ನಡೆಸಲಾಗುವುದು. ಇದಕ್ಕೆ ಸಮುದಾಯದವರು ಒಗ್ಗೂಡಬೇಕು ಎಂದುಬಿಜೆಪಿ ಮುಖಂಡ ಸಿದ್ದೇಶ್ ಯಾದವ್ ಮನವಿ ಮಾಡಿದರು.

ಮುಖಂಡರಾದ ಕೆ.ಟಿ. ತಿಪ್ಪೇಸ್ವಾಮಿ, ಗೀತಾ ನಂದಿನಿ ಗೌಡ, ಶ್ರವಣಗೆರೆ ತಿಪ್ಪೇಸ್ವಾಮಿ, ಮೂಡಲಗಿರಿಯಪ್ಪ, ರಾಜ್ ಕುಮಾರ್, ಯತೀಶ್, ಗುಯಿಲಾಳ್ ನಾಗರಾಜಯ್ಯ, ಕೃಷ್ಣ ಪೂಜಾರಿ, ಉಮೇಶ್ ಇದ್ದರು.

ಪದಾಧಿಕಾರಿಗಳ ಆಯ್ಕೆ:

ಕಾಡುಗೊಲ್ಲರ ಸಂಘದ ಜಿಲ್ಲಾ ಪ್ರಧಾನ ಕಾರ್ಯಗಳಾಗಿ ಸಿ.ಬಿ. ಪಾಪಣ್ಣ, ಪ್ರಭು ಯಾದವ್, ಹರೀಶ್ ಕುಮಾರ್, ತಾಲ್ಲೂಕು ಕಾಡುಗೊಲ್ಲ ಸಂಘದ ಅಧ್ಯಕ್ಷರಾಗಿ ಪಿ.ಆರ್. ದಾಸ್, ಗೌರವಾಧ್ಯಕ್ಷರಾಗಿ ಆಲದಮರದ ಹಟ್ಟಿ ರಂಗಯ್ಯ, ಕಾರ್ಯಾಧ್ಯಕ್ಷರಾಗಿ ಬಬ್ಬೂರು ಹೇಮಂತ್ ಅವರನ್ನು ಆಯ್ಕೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT